ಎಂ.ಬಿ.ಪಾಟೀಲ
ಬೆಂಗಳೂರು: ‘ಅಮೆರಿಕದ ಉತಾ ಪ್ರಾಂತ್ಯದ ವೈಮಾಂತರಿಕ್ಷ ಕ್ಷೇತ್ರದ ಉದ್ಯಮಗಳು ರಾಜ್ಯದಲ್ಲಿ ಹೂಡಿಕೆ ಮಾಡಲು ಆಸಕ್ತಿ ತೋರಿಸಿವೆ’ ಎಂದು ಬೃಹತ್ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಹೇಳಿದ್ದಾರೆ.
ಉತಾ ಪ್ರಾಂತ್ರ್ಯದ ಸೆನೆಟ್ ಅಧ್ಯಕ್ಷ ಜಬೇಜ್ ಸ್ಟುವರ್ಟ್ ಆ್ಯಡಮ್ಸ್ ಮತ್ತು ಉತಾದ ವಿಶ್ವ ವಾಣಿಜ್ಯ ಕೇಂದ್ರದ ಮುಖ್ಯಸ್ಥ ಜೊನಾಥನ್ ಫ್ರೀಡ್ಮನ್ ಅವರ ಜತೆ ಬುಧವಾರ ಸಭೆ ನಡೆಸಿದ ಬಳಿಕ ಎಂ.ಬಿ.ಪಾಟೀಲರು ತಮ್ಮ ಪ್ರಕಟಣೆಯಲ್ಲಿ ಈ ಮಾಹಿತಿ ನೀಡಿದ್ದಾರೆ.
‘ತಯಾರಿಕಾ, ಜೀವವಿಜ್ಞಾನ, ರೋಗನಿಧಾನ, ಶಿಕ್ಷಣ ಮತ್ತು ವಿದ್ಯುತ್ ಚಾಲಿತ ಸಾರ್ವಜನಿಕ ಸಾರಿಗೆ ಹಾಗೂ ವಾಹನ ಕ್ಷೇತ್ರದ ಕಂಪನಿಗಳು ಕರ್ನಾಟಕದಲ್ಲಿ ಹೂಡಿಕೆ ಮಾಡಲು ಆಸಕ್ತಿ ಹೊಂದಿವೆ ಎಂದು ಉತಾದ ಸೆನೆಟ್ ಅಧ್ಯಕ್ಷ ತಿಳಿಸಿದ್ದಾರೆ. ರಾಜ್ಯದಲ್ಲಿ ಹೂಡಿಕೆಗೆ ಇರುವ ಅವಕಾಶ ಮತ್ತು ದೊರೆಯಲಿರುವ ಸವಲತ್ತುಗಳ ಬಗ್ಗೆ ಅವರಿಗೆ ಮನವರಿಕೆ ಮಾಡಿಕೊಡಲಾಗಿದೆ’ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
‘ಉತಾ ವಿಶ್ವವಿದ್ಯಾಲಯ ಸೇರಿ ಅಲ್ಲಿನ ಹಲವು ಶೈಕ್ಷಣಿಕ ಸಂಸ್ಥೆಗಳು ರಾಜ್ಯದ ಶಿಕ್ಷಣ ಸಂಸ್ಥೆಗಳ ಸಹಯೋಗದಲ್ಲಿ ಕೋರ್ಸ್‌ಗಳನ್ನು ಆರಂಭಿಸುವ ಮತ್ತು ಕ್ಯಾಂಪಸ್ ಆರಂಭಿಸುವ ಬಗ್ಗೆ ಆಸಕ್ತಿ ತೋರಿವೆ’ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.