ADVERTISEMENT

ಬೆಂಗಳೂರಿನಲ್ಲಿ ಅಮೆರಿಕ ಕಾನ್ಸುಲೇಟ್‌ ಕಾರ್ಯಾರಂಭ ಇಂದು

​ಪ್ರಜಾವಾಣಿ ವಾರ್ತೆ
Published 17 ಜನವರಿ 2025, 0:30 IST
Last Updated 17 ಜನವರಿ 2025, 0:30 IST
ಬೆಂಗಳೂರಿನಲ್ಲಿ ಅಮೆರಿಕದ ಕಾನ್ಸುಲೇಟ್‌ ಆರಂಭದ ಸಂಬಂಧ ಕೇಂದ್ರ ಕೈಗಾರಿಕಾ ಸಚಿವ ಎಚ್‌.ಡಿ.ಕುಮಾರಸ್ವಾಮಿ ಅವರು ವಿದೇಶಾಂಗ ವ್ಯವಹಾರಗಳ ಸಚಿವ ಎಸ್‌.ಜೈಶಂಕರ್ ಅವರನ್ನು ದೆಹಲಿಯಲ್ಲಿ ಭೇಟಿ ಮಾಡಿ ಅಭಿನಂದನೆ ಸಲ್ಲಿಸಿದರು
ಬೆಂಗಳೂರಿನಲ್ಲಿ ಅಮೆರಿಕದ ಕಾನ್ಸುಲೇಟ್‌ ಆರಂಭದ ಸಂಬಂಧ ಕೇಂದ್ರ ಕೈಗಾರಿಕಾ ಸಚಿವ ಎಚ್‌.ಡಿ.ಕುಮಾರಸ್ವಾಮಿ ಅವರು ವಿದೇಶಾಂಗ ವ್ಯವಹಾರಗಳ ಸಚಿವ ಎಸ್‌.ಜೈಶಂಕರ್ ಅವರನ್ನು ದೆಹಲಿಯಲ್ಲಿ ಭೇಟಿ ಮಾಡಿ ಅಭಿನಂದನೆ ಸಲ್ಲಿಸಿದರು   

ಬೆಂಗಳೂರು: ಅಮೆರಿಕ ಕಾನ್ಸುಲೇಟ್‌ ಕಚೇರಿಯ ಬೆಂಗಳೂರು ಶಾಖೆಯು ಶುಕ್ರವಾರ ಕಾರ್ಯಾರಂಭ ಮಾಡಲಿದೆ. ವಿದೇಶಾಂಗ ಸಚಿವ ಎಸ್‌.ಜೈಶಂಕರ್‌, ಭಾರತದಲ್ಲಿನ ಅಮೆರಿಕ ರಾಯಭಾರಿ ಎರಿಕ್‌ ಗ್ಯಾರ್‌ಸೆಟಿ ಅವರು ನೂತನ ಕಚೇರಿಗೆ ಚಾಲನೆ ನೀಡಲಿದ್ದಾರೆ.

ನಗರದ ವಿಠ್ಠಲ್‌ ಮಲ್ಯ ರಸ್ತೆಯಲ್ಲಿರುವ ಜೆಡಬ್ಲ್ಯು ಮ್ಯಾರಿಯೇಟ್‌ ಹೋಟೆಲ್‌ನಲ್ಲಿ ಅಮೆರಿಕದ ವಿದೇಶಾಂಗ ವಾಣಿಜ್ಯ ವ್ಯವಹಾರಗಳ ಸೇವಾ ಕಚೇರಿ ಇದ್ದು, ಅದಕ್ಕೆ ಹೊಂದಿಕೊಂಡಂತೆಯೇ ನೂತನ ಕಾನ್ಸುಲೇಟ್‌  ಆರಂಭಿಸಲಾಗುತ್ತಿದೆ. ಇದು ತಾತ್ಕಾಲಿಕ ಕಚೇರಿಯಾಗಿದ್ದು, ಮುಂದಿನ ದಿನಗಳಲ್ಲಿ ಪ್ರತ್ಯೇಕ ಕಚೇರಿಗೆ ಕಾನ್ಸುಲೇಟ್‌ ಸ್ಥಳಾಂತರವಾಗಲಿದೆ ಎಂದು ಮೂಲಗಳು ತಿಳಿಸಿವೆ.

ಬೆಂಗಳೂರಿನಲ್ಲಿ ಅಮೆರಿಕದ ಕಾನ್ಸುಲೇಟ್‌ ಆರಂಭಿಸಬೇಕು ಎಂದು ಹಲವು ಬಾರಿ ಅಮೆರಿಕ ರಾಯಭಾರ ಕಚೇರಿಗೆ ಮನವಿ ಸಲ್ಲಿಸಲಾಗಿತ್ತು. ಈ ಕಚೇರಿಯು ಆರಂಭದಲ್ಲಿ ಅಮೆರಿಕ ಪ್ರಜೆಗಳ ಸಹಾಯ ಮತ್ತು ಇತರ ಸೇವೆಗಳ ಕೇಂದ್ರವಾಗಿ ಕೆಲಸ ಮಾಡಲಿದೆ. ನಂತರದ ದಿನಗಳಲ್ಲಿ ವೀಸಾ ಸೇವೆಯನ್ನೂ ಆರಂಭಿಸಲಿದೆ ಎಂದು ಮೂಲಗಳು ಹೇಳಿವೆ.

ADVERTISEMENT

ಕಚೇರಿ ಆರಂಭವಾಗುತ್ತಿರುವ ಕುರಿತು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿ, ಎಸ್‌.ಜೈಶಂಕರ್ ಅವರಿಗೆ ಅಭಿನಂದನೆ ಹೇಳಿದ್ದರು. ಅದರ ಬೆನ್ನಲ್ಲೇ ರಾಜ್ಯ ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಖ್‌ ಖರ್ಗೆ, ‘ಬೆಂಗಳೂರಿನ ಬ್ರ್ಯಾಂಡ್ ಹೆಸರು ಮತ್ತು ನಗರದ ಸಾಮರ್ಥ್ಯದ ಕಾರಣಕ್ಕೆ ಕಾನ್ಸುಲ್‌ ಕಚೇರಿ ಆರಂಭವಾಗುತ್ತಿದೆ. ಯಾರೊ ಒಬ್ಬರ ಕಾರಣಕ್ಕೆ ಇದು ನಡೆದಿಲ್ಲ’ ಎಂದು ‘ಎಕ್ಸ್‌’ನಲ್ಲೇ ಪ್ರತಿಕ್ರಿಯೆ ನೀಡಿದ್ದರು.

ಕೇಂದ್ರ ಬೃಹತ್ ಕೈಗಾರಿಕಾ ಸಚಿವ ಎಚ್‌.ಡಿ.ಕುಮಾರಸ್ವಾಮಿ, ‘ನಾನು ಹಿಂದೆ ಎರಡು ಬಾರಿ ಮುಖ್ಯಮಂತ್ರಿಯಾಗಿದ್ದಾಗ ಈ ಕುರಿತು ಮನವಿ ಸಲ್ಲಿಸಿದ್ದೆ. ಬೆಂಗಳೂರಿನಲ್ಲಿ ಅಮೆರಿಕ ಕಾನ್ಸುಲೇಟ್‌ ಆರಂಭವಾಗುವುದರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಒತ್ತಾಸೆ ಇದೆ. ವಿದೇಶಾಂಗ ಸಚಿವ ಎಸ್‌.ಜೈಶಂಕರ್ ಅವರ ಸಹಕಾರವೂ ಇದೆ’ ಎಂದು ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.