ಬೆಂಗಳೂರು: ಸಚಿವರ ಕಾರ್ಯವೈಖರಿ ವಿರುದ್ಧ ಪಕ್ಷದ ‘ಉಸ್ತುವಾರಿ’ ರಣದೀಪ್ ಸಿಂಗ್ ಸುರ್ಜೇವಾಲಾ ಅವರ ಮುಂದೆ ಕಾಂಗ್ರೆಸ್ ಶಾಸಕರು ದೂರುಗಳ ಸುರಿಮಳೆ ಸುರಿಸಿದ್ದಾರೆ. ಯಾವ್ಯಾವ ಇಲಾಖೆಗಳಿಂದ ಅಭಿವೃದ್ಧಿ ಕೆಲಸಕ್ಕೆ ಹಿನ್ನಡೆಯಾಗಿದೆ ಎಂಬುದನ್ನು ದಾಖಲೆಗಳ ಸಹಿತ ಕೆಲವು ಶಾಸಕರು ವಿವರಿಸಿದ್ದಾರೆ. ಸ್ಪಂದಿಸದ ಸಚಿವರಿಗೆ ಮುಖ್ಯಮಂತ್ರಿಯ ಮೂಲಕ ಸೂಚನೆ ಕೊಡಿಸಬೇಕು ಎಂದೂ ಬಿನ್ನವಿಸಿದ್ದಾರೆ.
ಶಾಸಕರ ದೂರುಗಳಿಗೆ ಸ್ಪಂದಿಸಿದ ಸುರ್ಜೇವಾಲಾ, ಕೆಲವು ಸಚಿವರಿಗೆ ದೂರವಾಣಿ ಕರೆ ಮಾಡಿ ಸಮಸ್ಯೆಗಳನ್ನು ಗಮನಕ್ಕೆ ತಂದಿದ್ದಾರೆ. ‘ಶಾಸಕರು ಸಮಸ್ಯೆಗಳನ್ನು ಹೇಳಿಕೊಂಡಿದ್ದಾರೆ. ನಿಮ್ಮ ಇಲಾಖೆಗೆ ಸಂಬಂಧಿಸಿದ ಕೆಲಸ ಇನ್ನೂ ಬಾಕಿಯಿದೆ. ಅವುಗಳನ್ನು ಆದಷ್ಟು ಬೇಗ ಮುಗಿಸಿಕೊಡಿ’ ಎಂದು ಶಾಸಕರ ಮುಂದೆಯೇ ಸಚಿವರಿಗೆ ಸುರ್ಜೇವಾಲಾ ಕಿವಿಮಾತು ಹೇಳಿದ್ದಾರೆ ಎಂದು ಗೊತ್ತಾಗಿದೆ.
ಸುರ್ಜೇವಾಲಾ ಭೇಟಿ ಬಳಿಕ ಮಾತನಾಡಿದ ಶಾಸಕ ಯು.ಬಿ. ಬಣಕಾರ್, ‘ಕ್ಷೇತ್ರದ ಸಮಸ್ಯೆಗಳನ್ನು ಗಮನಕ್ಕೆ ತಂದಿದ್ದೇನೆ. ರಾಜಕೀಯ ಬೆಳವಣಿಗೆ ಬಗ್ಗೆಯೂ ಮಾಹಿತಿ ಹಂಚಿಕೊಂಡಿದ್ದೇನೆ. ಕ್ಷೇತ್ರಕ್ಕೆ ಅನುದಾನದ ಕೊರತೆ ಇಲ್ಲ. ಮುಖ್ಯಮಂತ್ರಿ ₹50 ಕೋಟಿ, ನೀರಾವರಿಗೆ ಉಪ ಮುಖ್ಯಮಂತ್ರಿ ₹ 50 ಕೋಟಿ ಕೊಟ್ಟಿದ್ದಾರೆ. ಹೀಗಾಗಿ ನನ್ನ ಕ್ಷೇತ್ರಕ್ಕೆ (ಹಿರೇಕೆರೂರು) ಯಾವುದೇ ಸಮಸ್ಯೆ ಇಲ್ಲ’ ಎಂದರು.
ಶಾಸಕ ಪ್ರಕಾಶ್ ಕೋಳಿವಾಡ ಮಾತನಾಡಿ, ‘ಸುರ್ಜೇವಾಲಾ ಅವರ ಮುಂದೆ ಕೆಲವು ವಿಚಾರಗಳನ್ನು ಪ್ರಸ್ತಾಪಿಸಿದ್ದೇನೆ. ಸಿದ್ದರಾಮಯ್ಯ ಉತ್ತಮ ಸರ್ಕಾರ ನೀಡುತ್ತಿದ್ದಾರೆ. ಗ್ಯಾರಂಟಿ ಯೋಜನೆಗಳನ್ನು ಜನ ನೆನಪಿಸಿಕೊಳ್ಳುತ್ತಿದ್ದಾರೆ. ಸರ್ಕಾರದ ಮೇಲೆ ಜನರಿಗೆ ನಂಬಿಕೆ ಬಂದಿದೆ’ ಎಂದರು.
‘ಸುರ್ಜೇವಾಲಾ ಅವರು ಗ್ಯಾರಂಟಿ ಯೋಜನೆಗಳ ಬಗ್ಗೆ ಕೇಳಿದರು. ಅದರ ಬಗ್ಗೆ ಅವರಿಗೆ ಸಂಪೂರ್ಣ ಮಾಹಿತಿ ಕೊಟ್ಟಿದ್ದೇನೆ. ಕ್ಷೇತ್ರದ ಅಭಿವೃದ್ಧಿ ಕೆಲಸಗಳ ಬಗ್ಗೆಯೂ ಹೇಳಿದ್ದೇನೆ. ನಾನು ಕೂಡ ಸಚಿವ ಸ್ಥಾನದ ಆಕಾಂಕ್ಷಿ. ಕೊಡುವುದು, ಬಿಡುವುದು ಹೈಕಮಾಂಡ್‌ಗೆ ಬಿಟ್ಟಿದ್ದು’ ಎಂದು ಶಾಸಕ ಬಸಂತಪ್ಪ ಹೇಳಿದರು.
ಸುರ್ಜೇವಾಲಾ ಅವರ ಮುಂದೆ ಭದ್ರಾವತಿ ಶಾಸಕ ಸಂಗಮೇಶ್ ಅವರು ಸಚಿವ ಸ್ಥಾನಕ್ಕೆ ಬೇಡಿಕೆ ಇಟ್ಟರು. ‘ನಾನು ಮೂರು ಬಾರಿ ಶಾಸಕನಾದವನು. ಆದರೆ, ಸಂಪುಟದಲ್ಲಿ ಅವಕಾಶ ಸಿಕ್ಕಿಲ್ಲ. ಶಿವಮೊಗ್ಗದಲ್ಲಿ ಹಿಂದೆ ನಾನೊಬ್ಬನೇ ಗೆದ್ದಿದ್ದೆ. ಆಗಲೂ ಸಚಿವ ಸ್ಥಾನ ಕೊಡುವುದಾಗಿ ಭರವಸೆ ನೀಡಿ ಕೊನೆಯಲ್ಲಿ ಕೊಡಲಿಲ್ಲ. ಸಂಪುಟ ಪುನಾರಚನೆ ವೇಳೆ ಪರಿಗಣಿಸಬೇಕು’ ಎಂದು ಮನವಿ ಮಾಡಿದರು.
ಅನಾರೋಗ್ಯದ ಕಾರಣ ಸಭೆಗೆ ಹಾಜರಾಗದೆ ದೂರವಾಣಿ ಕರೆ ಮಾಡಿ ಸುರ್ಜೇವಾಲಾ ಜೊತೆ ಶಾಮನೂರು ಶಿವಶಂಕರಪ್ಪ ಅವರು ಮಾತನಾಡಿದರು. ವಿದೇಶದಲ್ಲಿರುವ ಕಾರಣ ದೆಹಲಿಗೆ ಬಂದು ಭೇಟಿಯಾಗು
ವುದಾಗಿ ಸುರ್ಜೇವಾಲಾಗೆ ಬಸವರಾಜ್ ಶಿವಗಂಗಾ ತಿಳಿಸಿದ್ದಾರೆ.
ಕಾಂಗ್ರೆಸ್ ಶಾಸಕ ಸಿ.ಪಿ. ಯೋಗೇಶ್ವರ್ ಅವರ ಪುತ್ರಿ ನಿಶಾ ಯೋಗೇಶ್ವರ್ ಹಾಗೂ ಮೊದಲ ಪತ್ನಿ ಸುರ್ಜೇವಾಲಾ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ನಿಶಾ, ‘ಯಾರೂ ನಮಗೆ ನ್ಯಾಯ ಕೊಡಿಸಿಲ್ಲ. ದೊಡ್ಡ ವ್ಯಕ್ತಿಯೊಬ್ಬರನ್ನು ಪ್ರಶ್ನೆ ಮಾಡುವುದು ಸುಲಭವಲ್ಲ. ಅನ್ಯಾಯವನ್ನು ಎಷ್ಟೆಂದು ಸಹಿಸುವುದು' ಎಂದರು.
‘ಸುರ್ಜೇವಾಲಾ ಅವರಿಗೆ ಮಾಹಿತಿ ನೀಡಿದ್ದೇವೆ. ನಮ್ಮ ಜೀವನ ಕಷ್ಟ ಆಗಿದೆ. ಅವರು (ಸಿ.ಪಿ. ಯೋಗೇಶ್ವರ್) ನಮಗೆ ಸಹಾಯ ಮಾಡುತ್ತಿಲ್ಲ. ಇದು ರಾಜಕೀಯ ಅಲ್ಲ, ಬದಲಾಗಿ ನ್ಯಾಯದ ಪ್ರಶ್ನೆ. ಈ ವಿಚಾರವಾಗಿ ಮಾತನಾಡುತ್ತೇನೆ ಎಂದು ಸುರ್ಜೇವಾಲಾ ಅವರು ಭರವಸೆ ನೀಡಿದ್ದಾರೆ. ನ್ಯಾಯಾಲಯದ ಮೂಲಕವೂ ಹೋರಾಟ ಮಾಡುತ್ತಿದ್ದೇವೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.