ADVERTISEMENT

ಗಾಂಧೀಜಿ, ಅಂಬೇಡ್ಕರ್ ಮಾರ್ಗ ಹಿಡಿವೆ: ಯು.ಟಿ.ಖಾದರ್‌

​ಪ್ರಜಾವಾಣಿ ವಾರ್ತೆ
Published 25 ಮೇ 2023, 0:53 IST
Last Updated 25 ಮೇ 2023, 0:53 IST
ಸಭಾಧ್ಯಕ್ಷರಾಗಿ ಆಯ್ಕೆಯಾದ ಯು.ಟಿ. ಖಾದರ್‌ ಅವರು ತಮ್ಮನ್ನು ಪೀಠದವರೆಗೆ ಕರೆತಂದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಕೈಮುಗಿದರು. ಹಂಗಾಮಿ ಸಭಾಧ್ಯಕ್ಷ ಆರ್‌.ವಿ.ದೇಶಪಾಂಡೆ ಇದ್ದರು
ಸಭಾಧ್ಯಕ್ಷರಾಗಿ ಆಯ್ಕೆಯಾದ ಯು.ಟಿ. ಖಾದರ್‌ ಅವರು ತಮ್ಮನ್ನು ಪೀಠದವರೆಗೆ ಕರೆತಂದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಕೈಮುಗಿದರು. ಹಂಗಾಮಿ ಸಭಾಧ್ಯಕ್ಷ ಆರ್‌.ವಿ.ದೇಶಪಾಂಡೆ ಇದ್ದರು   

ಬೆಂಗಳೂರು: ‘ಶಾಸಕರ ಹಕ್ಕುಗಳ ರಕ್ಷಿಸುವುದರ ಜತೆಗೆ ಜಾತಿ, ಮತ,ಧರ್ಮಗಳ ಗಡಿಯನ್ನು ಮೀರಿ ಸಂವಿ
ಧಾನದ ಆಶಯಕ್ಕೆ ಅನುಗುಣವಾಗಿ ಕಾರ್ಯ ನಿರ್ವಹಿಸುತ್ತೇನೆ’ ಎಂದು ವಿಧಾನಸಭೆಯ ನೂತನ ಸಭಾಧ್ಯಕ್ಷ ಯು.ಟಿ.ಖಾದರ್‌ ಹೇಳಿದರು.

ವಿಧಾನಸಭೆಯಲ್ಲಿ ಸಭಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆ ಆದ ನಂತರ ಮಾತನಾಡಿದ ಅವರು, ‘ಎಲ್ಲ ಶಾಸಕರ ಪಾಲಕ ಆಗಿರುತ್ತೇನೆ. ಗಾಂಧೀಜಿ, ಅಂಬೇಡ್ಕರ್‌ ಅವರು ಹಾಕಿಕೊಟ್ಟ ಮಾರ್ಗವೇ ಮುಖ್ಯವೆಂದು ಭಾವಿಸಿ ಆ ದಾರಿಯಲ್ಲೇ ನಡೆಯುತ್ತೇನೆ’ ಎಂದರು.

‘ನಮ್ಮ ತಾತ್ವಿಕತೆಯನ್ನು ಬದಿಗೊತ್ತಿ, ಎಲ್ಲರೂ ಸೇರಿ ರಾಜ್ಯದ ಅಭ್ಯುದಯಕ್ಕಾಗಿ
ಶ್ರಮಿಸೋಣ. ಇಲ್ಲಿ ಜನಸಾಮಾನ್ಯರ, ರೈತರ, ಶ್ರಮಿಕರ, ವಿದ್ಯಾರ್ಥಿಗಳು ಮತ್ತು ಮಹಿಳೆಯರ ಸಮಸ್ಯೆಗಳ ಬಗ್ಗೆ ಪ್ರಸ್ತಾಪಿಸೋಣ. ಈ ವಿಚಾರಗಳ ಚರ್ಚೆಗೆ ವಿಧಾನಸಭೆ ವೇದಿಕೆಯಾಗಬೇಕು’ ಎಂದು ಖಾದರ್‌ ಹೇಳಿದರು.

ADVERTISEMENT

‘ನಾನು ತುಳುನಾಡಿನವನು. ಕಿರಿಯ ವಯಸ್ಸಿನಲ್ಲೇ ಈ ಅವಕಾಶ ಸಿಕ್ಕಿರುವುದು ನನ್ನ ಸೌಭಾಗ್ಯ. ನಮ್ಮ ಜಿಲ್ಲೆಯವರಾದ ವೈಕುಂಠ ಬಾಳಿಗಾ ಅವರು ವಿಧಾನಸಭೆಯ ಸಭಾಧ್ಯಕ್ಷರಾಗಿದ್ದರು. ಕೆ.ಎಸ್‌.ಹೆಗ್ಡೆ ಲೋಕಸಭಾ ಸಭಾಧ್ಯಕ್ಷರಾಗಿ ಸಾಕಷ್ಟು ಉತ್ತಮ ಹೆಸರು ಮಾಡಿದ್ದರು. ಆ ಗೌರವವನ್ನು ಉಳಿಸುವ ಕೆಲಸ ಮಾಡುತ್ತೇನೆ’ ಎಂದು ಅವರು ಹೇಳಿದರು.

ಅವಿರೋಧ ಆಯ್ಕೆ: ಇದಕ್ಕೂ ಮುನ್ನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಖಾದರ್‌ ಹೆಸರನ್ನು ಸೂಚಿಸಿದರು. ಉಪ
ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅನುಮೋದಿಸಿದರು. ಬೇರೆ ಯಾರೂ ಕಣದಲ್ಲಿ ಇಲ್ಲದ ಕಾರಣ ಖಾದರ್‌ ಅವರು ಸರ್ವಾನುಮತದಿಂದ ಆಯ್ಕೆ ಆಗಿದ್ದಾರೆ ಎಂದು ಹಂಗಾಮಿ ಸಭಾಧ್ಯಕ್ಷ ಆರ್‌.ವಿ.ದೇಶಪಾಂಡೆ ಘೋಷಿಸಿದರು.

ಈ ಪ್ರಕ್ರಿಯೆ ಮುಗಿದ ಬಳಿಕ ಸಿದ್ದರಾಮಯ್ಯ ಮತ್ತು ನಿಕಟಪೂರ್ವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿ ಖಾದರ್ ಅವರನ್ನು ಸಭಾಧ್ಯಕ್ಷ ಪೀಠಕ್ಕೆ ಕರೆತಂದರು. ಬಿಜೆಪಿಯಿಂದ ವಿರೋಧಪಕ್ಷದ ನಾಯಕರ ಆಯ್ಕೆ ಆಗದ ಕಾರಣ ಬೊಮ್ಮಾಯಿ ಅವರನ್ನೇ ದೇಶಪಾಂಡೆ ಕರೆದರು.

ಕಲಾಪವನ್ನು ಅನಿರ್ದಿಷ್ಟ ಅವಧಿಗೆ ಮುಂದೂಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.