ADVERTISEMENT

ಶಾ, ನಡ್ಡಾ ಭೇಟಿಯಾದ ವಿ.ಸೋಮಣ್ಣ: ರಾಜ್ಯಸಭಾ ಸ್ಥಾನಕ್ಕೆ ಬೇಡಿಕೆ

​ಪ್ರಜಾವಾಣಿ ವಾರ್ತೆ
Published 13 ಜನವರಿ 2024, 14:35 IST
Last Updated 13 ಜನವರಿ 2024, 14:35 IST
ಗೃಹ ಸಚಿವ ಅಮಿತ್‌ ಶಾ ಅವರಿಗೆ ವಿ.ಸೋಮಣ್ಣ ಹೂಗುಚ್ಛ ನೀಡಿದರು. 
ಗೃಹ ಸಚಿವ ಅಮಿತ್‌ ಶಾ ಅವರಿಗೆ ವಿ.ಸೋಮಣ್ಣ ಹೂಗುಚ್ಛ ನೀಡಿದರು.    

ನವದೆಹಲಿ: ಕರ್ನಾಟಕದ ಬಿಜೆಪಿಯ ಕೆಲವು ನಾಯಕರ ನಡೆಯಿಂದ ಅಸಮಾಧಾನಗೊಂಡಿರುವ ಮಾಜಿ ಸಚಿವ ವಿ.ಸೋಮಣ್ಣ ಅವರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಹಾಗೂ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಿದರು. ತಮ್ಮನ್ನು ರಾಜ್ಯಸಭಾ ಸದಸ್ಯರನ್ನಾಗಿ ಮಾಡುವಂತೆ ವರಿಷ್ಠರಲ್ಲಿ ಮನವಿ ಮಾಡಿದರು. 

ಜನವರಿ 8ರಂದು (ಸೋಮವಾರ) ದೆಹಲಿಗೆ ಬಂದಿದ್ದ ಸೋಮಣ್ಣ ಅವರು ವರಿಷ್ಠರ ಭೇಟಿಗೆ ನಿರಂತರ ಪ್ರಯತ್ನ ನಡೆಸಿದ್ದರು. ಶುಕ್ರವಾರ ತಡರಾತ್ರಿ ವರಿಷ್ಠರನ್ನು ಭೇಟಿ ಮಾಡಿ ಚರ್ಚಿಸಿದರು. ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಕೆಲವು ಮುಖಂಡರು ದ್ವೇಷದ ರಾಜಕಾರಣ ಮಾಡಿ ತಮ್ಮನ್ನು ಸೋಲಿಸಿದರು ಎಂದು ಸೋಮಣ್ಣ ಅವರು ವರಿಷ್ಠರ ಗಮನಕ್ಕೆ ತಂದರು. 

‘ಕರ್ನಾಟಕದಿಂದ ರಾಜ್ಯಸಭೆಗೆ ಚುನಾಯಿತರಾಗಿರುವ ನಾಲ್ವರು ಸದಸ್ಯರು ಮಾರ್ಚ್‌ನಲ್ಲಿ ನಿವೃತ್ತರಾಗಲಿದ್ದಾರೆ. ವಿಧಾನಸಭೆಯ ಬಲಾಬಲದ ಆಧಾರದಲ್ಲಿ ಬಿಜೆ‍ಪಿ ಒಂದು ಸ್ಥಾನ ಗೆಲ್ಲಲಿದೆ. ನನ್ನನ್ನು ಬಿಜೆಪಿಯ ಅಭ್ಯರ್ಥಿಯನ್ನಾಗಿ ಮಾಡಬೇಕು. ಬಳಿಕ ನಡೆಯುವ ಲೋಕಸಭಾ ಚುನಾವಣೆಯಲ್ಲಿ ಕಷ್ಟದ ಮೂರು ಕ್ಷೇತ್ರಗಳ ಹೊಣೆಯನ್ನು ನನಗೆ ನೀಡಿ. ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸುವ ಜವಾಬ್ದಾರಿ ನನ್ನದು’ ಎಂದು ಸೋಮಣ್ಣ ಅವರು ಅಮಿತ್ ಶಾ ಅವರಿಗೆ ತಿಳಿಸಿದರು. 

ADVERTISEMENT

‘ಹೈಕಮಾಂಡ್‌ ಸೂಚನೆಯ ಹಿನ್ನೆಲೆಯಲ್ಲಿ ವಿಧಾನಸಭಾ ಚುನಾವಣೆಯಲ್ಲಿ ನೀವು ಎರಡು ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಿದ್ದೀರಿ. ನಿಮ್ಮ ಸೋಲಿಗೆ ಯಾರು ಕಾರಣ ಎಂಬ ಕುರಿತು ನಮ್ಮಲ್ಲಿ ಮಾಹಿತಿ ಇದೆ. ನಿಮ್ಮ ನೋವು ನಮಗೆ ಅರ್ಥವಾಗಿದೆ. ಅದನ್ನೆಲ್ಲ ಸದ್ಯಕ್ಕೆ ಮರೆತುಬಿಡಿ. ಮುಂದಿನ ದಿನಗಳಲ್ಲಿ ನಿಮಗೆ ಸೂಕ್ತ ಸ್ಥಾನಮಾನ ಸಿಗಲಿದೆ. ನಿಮ್ಮ ಸೇವೆಯನ್ನು ಪಕ್ಷ 10–15 ವರ್ಷಗಳ ಕಾಲ ಬಳಸಿಕೊಳ್ಳಲಿದೆ. ದುಡುಕಿನ ನಿರ್ಧಾರ ತೆಗೆದುಕೊಳ್ಳಬೇಡಿ’ ಎಂಬ ಕಿವಿಮಾತನ್ನು ಶಾ ಹೇಳಿದರು ಎಂದು ಮೂಲಗಳು ತಿಳಿಸಿವೆ. 

ಸುದ್ದಿಗಾರರ ಜತೆಗೆ ಮಾತನಾಡಿದ ಸೋಮಣ್ಣ, ‘ವಿಧಾನಸಭಾ ಚುನಾವಣೆಯ ಸೋಲಿನ ಕುರಿತು ಸಂಪೂರ್ಣ ಮಾಹಿತಿ ನೀಡಿದ್ದೇನೆ. ನನ್ನ ಅಂತರಂಗದ ಮಾತುಗಳನ್ನು ಹೇಳಿದ್ದೇನೆ. ರಾಜ್ಯದಲ್ಲಿ ಪಕ್ಷ ಸಂಘಟನೆ ಮಾಡುವಂತೆ ವರಿಷ್ಠರು ಸೂಚಿಸಿದ್ದಾರೆ. ಮುಂದಿನ ದಿನಗಳಲ್ಲಿ ಸ್ಥಾನಮಾನ ನೀಡುವುದಾಗಿಯೂ ಭರವಸೆ ನೀಡಿದ್ದಾರೆ’ ಎಂದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.