ADVERTISEMENT

ವರ್ಷಾಂತ್ಯದೊಳಗೆ 50 ಸಾವಿರ ನಿವೇಶನ ಹಂಚಿಕೆ: ವಸತಿ ಸಚಿವ ವಿ. ಸೋಮಣ್ಣ

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2022, 15:35 IST
Last Updated 19 ಆಗಸ್ಟ್ 2022, 15:35 IST
ವಿ.ಸೋಮಣ್ಣ
ವಿ.ಸೋಮಣ್ಣ   

ಬೆಂಗಳೂರು: ರಾಜ್ಯದ ವಿವಿಧೆಡೆ ಕರ್ನಾಟಕ ಗೃಹ ಮಂಡಳಿ (ಕೆಎಚ್‌ಬಿ) ಕೈಗೆತ್ತಿಕೊಂಡಿರುವ 18 ವಸತಿ ಯೋಜನೆಗಳ ಭೂಸ್ವಾಧೀನ ಪ್ರಕ್ರಿಯೆಯಲ್ಲಿನ ತೊಡಕುಗಳ ನಿವಾರಣೆಯಾಗಿದ್ದು, ವರ್ಷಾಂತ್ಯದೊಳಗೆ ಮಂಡಳಿಯಿಂದ 50 ಸಾವಿರ ನಿವೇಶನಗಳನ್ನು ಹಂಚಿಕೆ ಮಾಡಲಾಗುವುದು ಎಂದು ವಸತಿ ಸಚಿವ ವಿ. ಸೋಮಣ್ಣ ತಿಳಿಸಿದರು.

ಸುದ್ದಿಗಾರರ ಜತೆ ಶುಕ್ರವಾರ ಮಾತನಾಡಿದ ಅವರು, ‘ಭೂಸ್ವಾಧೀನಕ್ಕೆ ಸಂಬಂಧಿಸಿದಂತೆ ಬಾಕಿ ಇದ್ದ 103 ಪ್ರಕರಣಗಳು ಇತ್ಯರ್ಥಗೊಂಡಿವೆ. 600 ಎಕರೆಯಷ್ಟು ಜಮೀನು ಮಂಡಳಿಯ ಸ್ವಾಧೀನಕ್ಕೆ ಬಂದಿದ್ದು, ಬಡಾವಣೆಗಳ ನಿರ್ಮಾಣಕ್ಕೆ ಇದ್ದ ತೊಡಕು ನಿವಾರಣೆಯಾಗಿದೆ’ ಎಂದರು.

ಅಭಿವೃದ್ಧಿಪಡಿಸಿದ ಜಮೀನಿನಲ್ಲಿ ಶೇಕಡ 50ರಷ್ಟನ್ನು ಭೂಮಾಲೀಕರಿಗೆ ಪರಿಹಾರ ರೂಪದಲ್ಲಿ ನೀಡುವ ತೀರ್ಮಾನ ಕೈಗೊಳ್ಳಲಾಗಿದೆ. ಇದರಿಂದ ರೈತರಿಗೂ ಲಾಭ ಆಗಲಿದೆ. ಬೆಂಗಳೂರು, ತುಮಕೂರು, ಶಿವಮೊಗ್ಗ, ಚಿಕ್ಕಮಗಳೂರು, ಗದಗ, ಹುಬ್ಬಳ್ಳಿ– ಧಾರವಾಡ, ಬಳ್ಳಾರಿ, ದಾವಣಗೆರೆ, ಮೈಸೂರು, ಬೆಳಗಾವಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಕೆಎಚ್‌ಬಿ ವಸತಿ ಯೋಜನೆಗಳು ಶೀಘ್ರದಲ್ಲಿ ಪೂರ್ಣಗೊಳ್ಳಲಿವೆ ಎಂದು ತಿಳಿಸಿದರು.

ಕೆಎಚ್‌ಬಿ ಬಡಾವಣೆಗಳಲ್ಲಿನ ನಿವೇಶನ ಹಂಚಿಕೆಯನ್ನು ಅತ್ಯಂತ ಪಾರದರ್ಶಕವಾಗಿ ಮಾಡಲಾಗುವುದು. ಬೆಂಗಳೂರಿನ ಸೂರ್ಯನಗರ ಎರಡು ಮತ್ತು ಮೂರನೇ ಹಂತ, ಜಿಗಣಿ ಹಾಗೂ ನೆಲಮಂಗಲ ಬಡಾವಣೆಗಳಲ್ಲೂ ನಿವೇಶನ ಹಂಚಿಕೆ ಮಾಡಲಾಗುವುದು. ಸ್ವಾತಂತ್ರ್ಯ ಯೋಧರು, ವಿಧವೆಯರು, ಅಂಗವಿಕಲರು ಮತ್ತಿತರರಿಗೆ ಶೇ 5ರಷ್ಟು ನಿವೇಶನಗಳನ್ನು ವಿವೇಚನಾ ಕೋಟಾದಡಿ ಹಂಚಿಕೆ ಮಾಡಲಾಗುವುದು ಎಂದರು.

ಬೆಂಗಳೂರಿನಲ್ಲಿ ಮುಖ್ಯಮಂತ್ರಿಯವರ ಒಂದು ಲಕ್ಷ ಮನೆ ಯೋಜನೆಯಡಿ 40 ಸಾವಿರ ಮನೆಗಳ ಹಂಚಿಕೆಯ ಗುರಿ ಇದೆ. ಮೊದಲ ಹಂತದಲ್ಲಿ ಎರಡು ಸಾವಿರ ಮನೆ ಹಂಚಿಕೆ ಮಾಡಲು ಶೀಘ್ರದಲ್ಲಿ ಸಭೆ ನಡೆಸಲಾಗುವುದು. ಈ ಸರ್ಕಾರದ ಅವಧಿಯಲ್ಲೇ ಎಲ್ಲ ಮನೆಗಳನ್ನೂ ಹಂಚಿಕೆ ಮಾಡಲಾಗುವುದು ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.