ADVERTISEMENT

ರಾಜಧಾನಿ ತಲುಪಿದ ಸ್ವಾಮೀಜಿ ಪಾದಯಾತ್ರೆ

ಶೇ 7.5ರಷ್ಟು ಮೀಸಲಾತಿಗೆ ವಾಲ್ಮೀಕಿ ಶ್ರೀ ಒತ್ತಾಯ; ಶಕ್ತಿ ಪ್ರದರ್ಶನ ಇಂದು

​ಪ್ರಜಾವಾಣಿ ವಾರ್ತೆ
Published 24 ಜೂನ್ 2019, 20:02 IST
Last Updated 24 ಜೂನ್ 2019, 20:02 IST
ಪಾದಯಾತ್ರೆ ಮೂಲಕ ಬೆಂಗಳೂರು ತಲುಪಿದ ವಾಲ್ಮೀಕಿ ಪ್ರಸನ್ನಾನಂದಪುರಿ ಸ್ವಾಮೀಜಿ ಜತೆ ಹಗರಿಬೊಮ್ಮನಹಳ್ಳಿ ಶಾಸಕ ಭೀಮಾನಾಯ್ಕ ಹೆಜ್ಜೆ ಹಾಕಿದರು –ಪ್ರಜಾವಾಣಿ ಚಿತ್ರ
ಪಾದಯಾತ್ರೆ ಮೂಲಕ ಬೆಂಗಳೂರು ತಲುಪಿದ ವಾಲ್ಮೀಕಿ ಪ್ರಸನ್ನಾನಂದಪುರಿ ಸ್ವಾಮೀಜಿ ಜತೆ ಹಗರಿಬೊಮ್ಮನಹಳ್ಳಿ ಶಾಸಕ ಭೀಮಾನಾಯ್ಕ ಹೆಜ್ಜೆ ಹಾಕಿದರು –ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಮೀಸಲಾತಿ ಪ್ರಮಾಣವನ್ನು ಶೇ 3ರಿಂದ ಶೇ 7.5ರಷ್ಟಕ್ಕೆ ಹೆಚ್ಚಿಸಬೇಕು’ ಎಂದು ಒತ್ತಾಯಿಸಿರಾಜನಹಳ್ಳಿ ಮಹರ್ಷಿ ವಾಲ್ಮೀಕಿ ಗುರುಪೀಠದವಾಲ್ಮೀಕಿ ಪ್ರಸನ್ನಾನಂದಪುರಿ ಸ್ವಾಮೀಜಿ ಆರಂಭಿಸಿದ್ದ ಪಾದಯಾತ್ರೆ ಸೋಮವಾರ ರಾಜಧಾನಿ ತಲುಪಿತು.

ನಗರದಲ್ಲಿ ಮಂಗಳವಾರ ಬೃಹತ್ ಪ್ರತಿಭಟನೆ ಮೂಲಕ ಸರ್ಕಾರದ ಮೇಲೆ ಒತ್ತಡ ಹೇರಲು ಸಮುದಾಯದ ಮುಖಂಡರು ಸಿದ್ಧತೆ ನಡೆಸಿದ್ದಾರೆ.

ದಾವಣಗೆರೆ ಜಿಲ್ಲೆ ರಾಜನಹಳ್ಳಿಯಿಂದ ಜೂನ್ 9ರಂದು ಪಾದಯಾತ್ರೆ ಹೊರಟ ಸ್ವಾಮೀಜಿ, ದಾವಣಗೆರೆ, ಜಗಳೂರು, ಚಿತ್ರದುರ್ಗ, ಚಳ್ಳಕೆರೆ, ಹಿರಿಯೂರು, ಶಿರಾ, ತುಮಕೂರು, ನೆಲಮಂಗಲ, ದೊಡ್ಡಬಳ್ಳಾಪುರ, ದೇವನಹಳ್ಳಿ, ಶಿಡ್ಲಘಟ್ಟ, ಹೊಸಕೋಟೆ, ಕೆ.ಆರ್.ಪುರ ಮೂಲಕ ನಗರ ಪ್ರವೇಶಿಸಿದರು.

ADVERTISEMENT

ಮಹರ್ಷಿ ವಾಲ್ಮೀಕಿ ಮತ್ತು ಅಂಬೇಡ್ಕರ್‌ ಭಾವಚಿತ್ರದೊಂದಿಗೆ ಬಿಸಿಲು-ಮಳೆ ನಡುವೆಯೂ16 ದಿನಗಳ ಕಾಲ ಪಾದಯಾತ್ರೆ ನಡೆಸಿ ದರು.ದಾರಿಯುದ್ದಕ್ಕೂ ಅಲ್ಲಲ್ಲಿ ಸಮು ದಾಯದ ಜನರು ಸ್ವಾಮೀಜಿ ಅವರನ್ನು ಬರ ಮಾಡಿಕೊಂಡು ಅವರೊಂದಿಗೆ ಹೆಜ್ಜೆ ಹಾಕಿದರು.

ಕೆ.ಆರ್.ಪುರಕ್ಕೆ ಬಂದ ಸ್ವಾಮೀಜಿಯನ್ನು ಸಮುದಾಯದ ಮುಖಂಡರು ಸ್ವಾಗತಿಸಿದರು.

‘ಸ್ಪಂದಿಸಿದರೆ ಕೃತಜ್ಞತೆ, ಇಲ್ಲವಾದರೆ ಹೋರಾಟ’

‘ಪರಿಶಿಷ್ಟ ಪಂಗಡಕ್ಕೆ ಮೀಸಲಾತಿ ಪ್ರಮಾಣವನ್ನು ಶೇ 7.5ರಷ್ಟು ಹೆಚ್ಚಿಸಬೇಕೆಂಬ ನಮ್ಮ ಬೇಡಿಕೆಗೆ ಸರ್ಕಾರ ಸ್ಪಂದಿಸಿದರೆ ಕೃತಜ್ಞತೆ ಸಲ್ಲಿಸುತ್ತೇವೆ. ಇಲ್ಲವಾದರೆ ಉಗ್ರ ಹೋರಾಟ ನಡೆಸುತ್ತೇವೆ’ ಎಂದು ವಾಲ್ಮೀಕಿ ಪ್ರಸನ್ನಾನಂದಪುರಿ ಸ್ವಾಮೀಜಿ ಹೇಳಿದರು.

ಪಾದಯಾತ್ರೆ ನಡುವೆ ಬೈಯ್ಯಪ್ಪನಹಳ್ಳಿಯಲ್ಲಿ ‘ಪ್ರಜಾವಾಣಿ’ ಜತೆ ಮಾತನಾಡಿ, ‘ಪರಿಶಿಷ್ಟ ಪಂಗಡಕ್ಕೆಕೇಂದ್ರ ಸರ್ಕಾರ ಶೇ 7.5ರಷ್ಟು ಮೀಸಲಾತಿ ನೀಡಿದೆ. ಆದರೆ, ರಾಜ್ಯ ಸರ್ಕಾರ ಶೇ 3ರಷ್ಟು ಮೀಸಲಾತಿ ನೀಡುತ್ತಿದೆ’ ಎಂದರು.

‘ಪರಿಶಿಷ್ಟ ಪಂಗಡಕ್ಕೆ ಸೇರಿದವರುರಾಜ್ಯದಲ್ಲಿ 50 ಲಕ್ಷಕ್ಕೂ ಹೆಚ್ಚು ಮಂದಿ ಇದ್ದೇವೆ.ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಪ್ರಮಾಣ ಹೆಚ್ಚಿಸಬೇಕೆಂದು ನಾವು ಕೇಳುತ್ತಿದ್ದೇವೆ. ನಮ್ಮ ಬೇಡಿಕೆಯನ್ನು ಸರ್ಕಾರಕ್ಕೆ ಮನವರಿಕೆ ಮಾಡಿಸುವ ಸಲುವಾಗಿ ಪಾದಯಾತ್ರೆ ನಡೆಸಲಾಗಿದೆ. ಸರ್ಕಾರ ಇದನ್ನುಗಂಭೀರವಾಗಿ ಪರಿಗಣಿಸಬೇಕು’ಎಂದು ಒತ್ತಾಯಿಸಿದರು.

‘ಮಂಗಳವಾರ ಬೆಳಿಗ್ಗೆ ವಿಧಾನಸೌಧದ ಆವರಣದಲ್ಲಿರುವ ಮಹರ್ಷಿ ವಾಲ್ಮಿಕಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಸ್ವತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆ ನಡೆಸಲಾಗುವುದು. ಪ‍ರಿಶಿಷ್ಟ ಪಂಗಡದ ಒಂದು ಲಕ್ಷಕ್ಕೂ ಹೆಚ್ಚು ಮಂದಿ ಭಾಗವಹಿಸಲಿದ್ದಾರೆ’ ಎಂದು ಸ್ವಾಮೀಜಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.