ADVERTISEMENT

ವಾಲ್ಮೀಕಿ ನಿಗಮದ ಹಗರಣ: ನಾಗೇಂದ್ರಗೆ ಸೇರಿದ ₹8 ಕೋಟಿ ಮೌಲ್ಯದ ಆಸ್ತಿ ಜಪ್ತಿ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2025, 15:21 IST
Last Updated 19 ಡಿಸೆಂಬರ್ 2025, 15:21 IST
ಬಿ.ನಾಗೇಂದ್ರ 
ಬಿ.ನಾಗೇಂದ್ರ    

ಬೆಂಗಳೂರು: ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ (ಕೆಎಂವಿಎಸ್‌ಟಿಡಿಸಿಎಲ್‌) ಬ್ಯಾಂಕ್ ಖಾತೆಯಿಂದ ಹಣ ಅಕ್ರಮ ವರ್ಗಾವಣೆ ಹಾಗೂ ಹಣ ದುರುಪಯೋಗ ಆರೋಪಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಬಿ.ನಾಗೇಂದ್ರಗೆ ಸೇರಿದ ಅಂದಾಜು ₹8.07 ಕೋಟಿ ಮೌಲ್ಯದ ಆಸ್ತಿಯನ್ನು ಜಾರಿ ನಿರ್ದೇಶನಾಲಯ ಜಪ್ತಿ ಮಾಡಿದೆ. ಈ ಪ್ರಕರಣದಲ್ಲಿ ಈವರೆಗೆ ಜಪ್ತಿ ಮಾಡಿದ ಒಟ್ಟು ಮೊತ್ತ ₹13.01 ಕೋಟಿಯಾಗಿದೆ.

2002ರ ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿ ನಾಗೇಂದ್ರ ಅವರಿಗೆ ಸೇರಿದ ವಸತಿ, ವಾಣಿಜ್ಯ ಭೂಮಿ ಮತ್ತು ಕಟ್ಟಡ ಸೇರಿ ನಾಲ್ಕು ಸ್ಥಿರ ಆಸ್ತಿಗಳನ್ನು ತಾತ್ಕಾಲಿಕವಾಗಿ ಜಪ್ತಿ ಮಾಡಲಾಗಿದೆ ಎಂದು ಜಾರಿ ನಿರ್ದೇಶನಾಲಯ (ಇ.ಡಿ.) ತಿಳಿಸಿದೆ.

ಕೆಎಂವಿಎಸ್‌ಟಿಡಿಸಿಎಲ್‌ ಹಣ ದುರುಪಯೋಗ ಹಾಗೂ ಹಣ ಅಕ್ರಮ ವರ್ಗಾವಣೆಗೆ ಸಂಬಂಧಿಸಿದಂತೆ ಕೇಂದ್ರ ತನಿಖಾ ದಳ (ಸಿಬಿಐ) ಮತ್ತು ರಾಜ್ಯದ ಪೊಲೀಸರು ದಾಖಲಿಸಿದ್ದ ಎಫ್‌ಐಆರ್‌ ಆಧಾರದ ಮೇಲೆ ಇ.ಡಿ ತನಿಖೆ ಆರಂಭಿಸಿತ್ತು. ಮೊದಲು ಕರ್ನಾಟಕ ಹಾಗೂ ಇತರೆ ರಾಜ್ಯಗಳ ವಿವಿಧ ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಿತ್ತು.

ADVERTISEMENT

ಪ್ರಕರಣದಲ್ಲಿ ಬಿ.ನಾಗೇಂದ್ರ ಸೇರಿ 6 ಮಂದಿಯನ್ನು ಬಂಧಿಸಿತ್ತು. ನಂತರ ನಾಗೇಂದ್ರ ಸೇರಿ 25 ಮಂದಿ ವಿರುದ್ಧ 2024ರ ಸೆಪ್ಟೆಂಬರ್ 9ರಂದು ನಗರ ಪ್ರಧಾನ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ದೂರು ದಾಖಲಿಸಲಾಗಿತ್ತು.

2025ರ ಆಗಸ್ಟ್‌ 26ರಂದು ಆರೋಪಿಗಳಿಗೆ ಸೇರಿದ ₹4.94 ಕೋಟಿ ಮೌಲ್ಯದ ಚರ ಹಾಗೂ ಸ್ಥಿರ ಆಸ್ತಿಗಳನ್ನು ಜಪ್ತಿ ಮಾಡಲಾಗಿತ್ತು.  

ನಾಗೇಂದ್ರ ಅವರು ಅಕ್ರಮವಾಗಿ ಗಳಿಸಿರುವ ಹಣವನ್ನು ಪತ್ತೆ ಮಾಡಲು ಎಲ್ಲ ರೀತಿಯ ಪ್ರಯತ್ನ ಮಾಡಲಾಯಿತು. ಅವರು ಬಹತೇಕ ಹಣವನ್ನು ಖರ್ಚು ಮಾಡಿರಬಹುದು ಅಥವಾ ಬಚ್ಚಿಟಿರಬಹುದು. ಹಾಗಾಗಿ ಅಪರಾಧ ಕೃತ್ಯದಿಂದ ಸಂಪಾದಿಸಿದ್ದ ಅಷ್ಟೇ ಮೊತ್ತದ ಇತರೆ ಸ್ವತ್ತುಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದ್ದು, ತನಿಖೆ ಮುಂದುವರಿದಿದೆ ಎಂದು ಹೇಳಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.