ಬೆಂಗಳೂರು: ‘ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಲ್ಲಿನ ಬಹುಕೋಟಿ ರೂಪಾಯಿ ದುರ್ಬಳಕೆ ಆರೋಪ ಪ್ರಕರಣದಲ್ಲಿ ರಾಜ್ಯ ಸರ್ಕಾರದ ಕೆಲವು ಪ್ರಭಾವಿ ಮಂತ್ರಿಗಳು ಮತ್ತು ಉನ್ನತ ಮಟ್ಟದ ಅಧಿಕಾರಿಗಳೂ ಭಾಗಿಯಾಗಿದ್ದಾರೆ ಎಂಬುದನ್ನು ಸಿಬಿಐ ಈವರೆಗಿನ ತನ್ನ ತನಿಖೆಯಲ್ಲಿ ಪತ್ತೆ ಮಾಡಿದೆ’ ಎಂಬ ಅಂಶವನ್ನು ಹೈಕೋರ್ಟ್ ಮಧ್ಯಂತರ ಆದೇಶದಲ್ಲಿ ಉಲ್ಲೇಖಿಸಿದೆ.
ಇದೇ ವೇಳೆ, ‘ಈ ಪ್ರಕರಣದ ತನಿಖೆಯ ಸಂದರ್ಭದಲ್ಲಿ ಇನ್ನೂ ಎರಡು ಹೊಸದಾದ, ಅಕ್ರಮ ಹಣ ವರ್ಗಾವಣೆ ಹಗರಣಗಳೂ ಬೆಳಕಿಗೆ ಬಂದಿವೆ. ಹೀಗಾಗಿ, ಹಗರಣದ ತನಿಖೆ ನಡೆಸಿರುವ ಎಲ್ಲಾ ತನಿಖಾ ಸಂಸ್ಥೆಗಳು ತನಿಖೆಯ ವೇಳೆ ಯಾವೆಲ್ಲಾ ದಾಖಲೆಗಳನ್ನು ತಮ್ಮ ಸುಪರ್ದಿಗೆ ಪಡೆದಿವೆಯೋ ಅಂತಹ ಡಿಜಿಟಲ್ ಸಾಧನ ಮತ್ತು ಪರಿಶೀಲನೆಗೆ ಒಳಪಡಿಸಿರುವ ಸಮಸ್ತ ದಸ್ತಾವೇಜುಗಳನ್ನು ಸಿಬಿಐ ವಶಕ್ಕೆ ಒಪ್ಪಿಸಬೇಕು’ ಎಂದು ಮಹತ್ವದ ಆದೇಶ ಹೊರಡಿಸಿದೆ.
‘ವಾಲ್ಮೀಕಿ ನಿಗಮ ಹಗರಣದ ತನಿಖೆಗೆ ಸಂಬಂಧಿಸಿದ ದೋಷಾರೋಪ ಪಟ್ಟಿಯನ್ನು ಶೀಘ್ರವೇ ಸಕ್ಷಮ ವಿಚಾರಣಾ ನ್ಯಾಯಾಲಯಕ್ಕೆ ಒಪ್ಪಿಸುವಂತೆ ಸಿಬಿಐಗೆ ನಿರ್ದೇಶಿಸಬೇಕು ಮತ್ತು ಸಿಬಿಐ ವಿಶೇಷ ನ್ಯಾಯಾಲಯ ಈ ಕುರಿತಂತೆ ವೇಗವಾಗಿ ವಿಚಾರಣೆ ನಡೆಸಿ ಪ್ರಕರಣ ತಾರ್ಕಿಕ ಅಂತ್ಯ ಕಾಣುವಂತೆ ತೀರ್ಮಾನ ಕೈಗೊಳ್ಳಲು ನಿರ್ದೇಶಿಸಬೇಕು’ ಎಂದು ಕೋರಲಾದ ರಿಟ್ ಅರ್ಜಿಯಲ್ಲಿ ಈ ಕುರಿತಂತೆ ಆದೇಶಿಸಲಾಗಿದೆ.
‘ಈ ಪ್ರಕರಣದ ಸಿಬಿಐ ತನಿಖೆಯನ್ನು ಹೈಕೋರ್ಟ್ ನಿಗಾದಲ್ಲಿಯೇ ನಡೆಸಬೇಕು’ ಎಂದು ಕೋರಿ ಬಿಜೆಪಿಯ ಸಮಾನ ಮನಸ್ಕ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ ಮತ್ತು ರಮೇಶ ಜಾರಕಿಹೊಳಿ, ಮಾಜಿ ಶಾಸಕರಾದ ಅರವಿಂದ ಲಿಂಬಾವಳಿ ಮತ್ತು ಕುಮಾರ್ ಬಂಗಾರಪ್ಪ ದಾಖಲಿಸಿರುವ ರಿಟ್ ಅರ್ಜಿಯಲ್ಲಿ ಸಿಬಿಐ ಎರಡು ಮಧ್ಯಂತರ ಅರ್ಜಿಗಳನ್ನು ಸಲ್ಲಿಸಿತ್ತು. ಈ ಎರಡೂ ಅರ್ಜಿಗಳನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಪುರಸ್ಕರಿಸಿದೆ.
ವಶಕ್ಕೆ ಒಪ್ಪಿಸಿ: ‘ವಾಲ್ಮೀಕಿ ನಿಗಮದ ಬಹುಕೋಟಿ ಹಣ ದುರ್ಬಳಕೆ ಆರೋಪ ಪ್ರಕರಣದಲ್ಲಿ ಅಕ್ರಮವಾಗಿ ಹಣ ವರ್ಗಾವಣೆ ನಡೆದಿದೆ ಮತ್ತು ಈ ಅಕ್ರಮದ ಒಳಸುಳಿ ಹಾಗೂ ಇದರ ಹಿಂದೆ ಅಡಗಿರುವ ಪಿತೂರಿಯನ್ನು ಬಯಲುಗೊಳಿಸಲು ಈಗಾಗಲೇ ತನಿಖೆ ನಡೆಸಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ), ಜಾರಿ ನಿರ್ದೇಶನಾಲಯ (ಇ.ಡಿ), ಕೇಂದ್ರ ವಿಧಿ ವಿಜ್ಞಾನ ಪ್ರಯೋಗಾಲಯ (ಸಿಎಫ್‌ಎಸ್‌ಎಲ್) ಮತ್ತು ರಾಜ್ಯ ವಿಧಿ ವಿಜ್ಞಾನ ಪ್ರಯೋಗಾಲಯ (ಎಸ್‌ಎಫ್‌ಎಸ್‌ಎಲ್) ಹೊಂದಿರುವ ದಾಖಲೆಗಳನ್ನು ಸಿಬಿಐ ವಶಕ್ಕೆ ಒಪ್ಪಿಸಬೇಕು’ ಎಂದು ನ್ಯಾಯಪೀಠ ತಾಕೀತು ಮಾಡಿದೆ.
‘ನಿಗಮದ ಹಣ ದುರ್ಬಳಕೆ ಪ್ರಕರಣದಲ್ಲಿ ಸರ್ಕಾರಿ ಅಧಿಕಾರಿಗಳು ಮತ್ತು ಇತರರು ಭಾಗಿಯಾಗಿರುವುದು ಮೇಲ್ನೋಟಕ್ಕೆ ಪತ್ತೆಯಾಗಿದೆ. ₹89.63 ಕೋಟಿಯನ್ನು ವಾಲ್ಮೀಕಿ ನಿಗಮದಿಂದ 700 ಖಾತೆಗಳಿಗೆ ವರ್ಗಾಯಿಸಿ, ದಾಖಲೆಗಳನ್ನು ತಿರುಚಿ, ಅದನ್ನು ಅಲ್ಲಿಂದ ಬೇರೆ ಖಾತೆಗಳಿಗೆ ವರ್ಗಾಯಿಸಿ, ಐಷಾರಾಮಿ ಕಾರುಗಳನ್ನು ಖರೀದಿಸಲು ಬಳಕೆ ಮಾಡಿರುವುದು ತನಿಖೆಯಿಂದ ಬಯಲಾಗಿದೆ’ ಎಂಬ ಅಂಶವನ್ನು ನ್ಯಾಯಪೀಠ ಆದೇಶದಲ್ಲಿ ಉಲ್ಲೇಖಿಸಿದೆ.
ಅರ್ಜಿದಾರರ ಪರ ಹೈಕೋರ್ಟ್ ವಕೀಲ ವೆಂಕಟೇಶ್ ಪಿ.ದಳವಾಯಿ ಹಾಗೂ ಸಿಬಿಐ ಪರ ವಕೀಲ ಪಿ.ಪ್ರಸನ್ನ ಕುಮಾರ್ ವಾದ ಮಂಡಿಸಿದ್ದಾರೆ.
ವಾಲ್ಮೀಕಿ ನಿಗಮಕ್ಕೆ ಸೇರಿದ ಬೆಂಗಳೂರಿನ ಸಿದ್ದಯ್ಯ ರಸ್ತೆಯಲ್ಲಿರುವ ಬ್ಯಾಂಕ್ ಆಫ್ ಬರೋಡಾ ಖಾತೆಯಲ್ಲಿದ್ದ ₹2.17 ಕೋಟಿ ಮೊತ್ತವನ್ನೂ ನೆಕ್ಕಂಟಿ ನಾಗರಾಜ್ ಖಾತೆಗೆ ವರ್ಗಾಯಿಸಿರುವುದು ಸಿಬಿಐ ತನಿಖೆ ವೇಳೆ ಪತ್ತೆಯಾಗಿದೆ
ಕೆಜಿಟಿಟಿಐಗೆ ಸೇರಿದ ಬೆಂಗಳೂರಿನ ಕೆನರಾ ಬ್ಯಾಂಕ್ ಖಾತೆಯಲ್ಲಿದ್ದ ₹95 ಲಕ್ಷ ಮೊತ್ತವನ್ನು ರಹಸ್ಯವಾಗಿ ಮಧ್ಯವರ್ತಿ ಖಾತೆಗಳ ಮುಖಾಂತರ ಮಾಜಿ ಸಚಿವ ಬಿ.ನಾಗೇಂದ್ರ ಆಪ್ತ ನೆಕ್ಕಂಟಿ ನಾಗರಾಜ್ ಖಾತೆಗೆ ವರ್ಗಾಯಿಸಿರುವುದು ಗೊತ್ತಾಗಿದೆ
700 ಖಾತೆಗಳಿಗೆ ನಿಗಮದ ಹಣವನ್ನು ವರ್ಗಾಯಿಸಿದ ಪ್ರಕರಣದಲ್ಲಿ ಹಣಕಾಸು ದಾಖಲೆಗಳನ್ನು ತಿರುಚಲಾಗಿದೆ. ಇದನ್ನು ಬಯಲಿಗೆಳೆಯಲು ಸಮಗ್ರ ತನಿಖೆಯ ಅಗತ್ಯವಿದೆ. ಈ ನಿಟ್ಟಿನಲ್ಲಿ ಎಸ್‌ಐಟಿ ಇ.ಡಿ ಮತ್ತು ಎಫ್‌ಎಸ್‌ಎಲ್‌ಗಳಲ್ಲಿ ಈಗಾಗಲೇ ಸಂಗ್ರಹಿಸಲಾಗಿರುವ ಡಿಜಿಟಲ್ ಸಾಧನಗಳು ವಿಧಿವಿಜ್ಞಾನ ಪ್ರಯೋಗಾಲಯದ ವಶದಲ್ಲಿರುವ ಚಿತ್ರಗಳು ಮತ್ತು ಜಪ್ತಿ ಮಾಡಲಾಗಿರುವ ಇತರೆ ಎಲ್ಲಾ ದಾಖಲೆಗಳನ್ನು ನಮ್ಮ ವಶಕ್ಕೆ ನೀಡುವಂತೆ ನಿರ್ದೇಶಿಸಬೇಕು
ಕರ್ನಾಟಕ ಜರ್ಮನ್ ತಾಂತ್ರಿಕ ತರಬೇತಿ ಸಂಸ್ಥೆ (ಕೆಜಿಟಿಟಿಐ) ಪರಿಶಿಷ್ಟ ಪಂಗಡ ಕಲ್ಯಾಣ ಇಲಾಖೆ ಅಧಿಕಾರಿಗಳು ಮತ್ತು ಖಾಸಗಿ ವ್ಯಕ್ತಿಗಳ ಪಾತ್ರದ ಬಗ್ಗೆ ತನಿಖೆ ನಡೆಸಲು ನ್ಯಾಯಾಲಯ ಅನುಮತಿ ನೀಡಬೇಕಿದೆ. ಸದ್ಯಕ್ಕೆ ತನಿಖೆಯು ಪ್ರಾಥಮಿಕ ಹಂತದಲ್ಲಿದೆ. ಅಪರಾಧ ದಂಡ ಪ್ರಕ್ರಿಯಾ ಸಂಹಿತೆ–1973ರ (ಸಿಆರ್‌ಪಿಸಿ) ಕಲಂ 173ರ ಅಡಿ ಸರ್ಕಾರಿ ಅಧಿಕಾರಿಗಳು ಮತ್ತು ಆರೋಪಿಗಳ ವಿರುದ್ಧ ವಿಶೇಷ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಲು ಅನುಮತಿಸಬೇಕು
ಸಿಬಿಐನ ಈ ಎರಡೂ ಕೋರಿಕೆಯುಳ್ಳ ಮಧ್ಯಂತರ ಅರ್ಜಿಗಳನ್ನು ನ್ಯಾಯಪೀಠ ಮನ್ನಿಸಿ ಆದೇಶಿಸಿದೆ
ವಾಲ್ಮೀಕಿ ನಿಗಮದ ಹಣ ದುರ್ಬಳಕೆ ಆರೋಪ ತಾರಕ ಸ್ಥಿತಿ ತಲುಪುತ್ತಿದ್ದಂತೆಯೇ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ‘ಈ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು’ ಎಂದು ಕೇಂದ್ರ ಗೃಹ ಸಚಿವಾಲಯಕ್ಕೆ 2024ರ ಜೂನ್ 1ರಂದು ಮನವಿ ಮಾಡಿದ್ದರು.
ಇನ್ನೊಂದೆಡೆ ‘ಪ್ರಕರಣದ ಎಸ್‌ಐಟಿ ತನಿಖೆಯನ್ನು ಸಿಬಿಐಗೆ ವರ್ಗಾವಣೆ ಮಾಡಬೇಕು’ ಎಂದು ಕೋರಿ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಿತ್ತು. ಈ ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ 2024ರ ನವೆಂಬರ್ 13ರಂದು ಮನವಿಯನ್ನು ವಜಾಗೊಳಿಸಿತ್ತು.
ಇದೇ ವೇಳೆ ಯತ್ನಾಳ ಜಾರಕಿಹೊಳಿ ಲಿಂಬಾವಳಿ ಮತ್ತು ಕುಮಾರ್ ಬಂಗಾರಪ್ಪ ಅವರು ಹೈಕೋರ್ಟ್‌ಗೆ ರಿಟ್ ಅರ್ಜಿಯೊಂದನ್ನು ಸಲ್ಲಿಸುವ ಮೂಲಕ ‘ಹಲವು ತಿಂಗಳುಗಳೇ ಉರುಳಿದರೂ ಸಿಬಿಐ ಇನ್ನೂ ಪ್ರಕರಣದ ತನಿಖೆ ಆರಂಭಿಸಿಲ್ಲ’ ಎಂದು ಆಕ್ಷೇಪಿಸಿದ್ದರು.
ಈ ಅರ್ಜಿಯ ವಿಚಾರಣೆ ನಡೆಸುತ್ತಿರುವ ನ್ಯಾ.ನಾಗಪ್ರಸನ್ನ ಅವರ ಪೀಠವು ‘ಪ್ರಕರಣಕ್ಕೆ ಸಂಬಂಧಿಸಿದಂತೆ ವಸ್ತುಸ್ಥಿತಿ ವರದಿ ಸಲ್ಲಿಸಿ’ ಎಂದು ಸಿಬಿಐಗೆ ನಿರ್ದೇಶಿಸಿತ್ತು.
ಈ ಹಿನ್ನೆಲೆಯಲ್ಲಿ ಸಿಬಿಐ ತನಿಖೆಯ ವಸ್ತುಸ್ಥಿತಿ ವರದಿಗಳನ್ನು ಮುಚ್ಚಿದ ಲಕೋಟೆಯಲ್ಲಿ ನಾಲ್ಕು ಕಂತುಗಳಲ್ಲಿ ನ್ಯಾಯಪೀಠಕ್ಕೆ ಸಲ್ಲಿಸಿತ್ತು. ಅಂತೆಯೇ ಮಧ್ಯಂತರ ಅರ್ಜಿಯಲ್ಲಿ ‘ರಾಜ್ಯ ಸರ್ಕಾರದ ಅಧೀನದಲ್ಲಿ ನಡೆಯುತ್ತಿರುವ ತನಿಖಾ ಸಂಸ್ಥೆಗಳ ಸುಪರ್ದಿಯಲ್ಲಿ ಕೆಲವು ಮಹತ್ವದ ದಾಖಲೆಗಳಿದ್ದು ಅವುಗಳನ್ನು ನಮ್ಮ ವಶಕ್ಕೆ ಒಪ್ಪಿಸುವಂತೆ ನಿರ್ದೇಶಿಸಬೇಕು’ ಎಂದು ಕೋರಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.