
ನವದೆಹಲಿ: ‘ನರೇಗಾ’ಕ್ಕೆ ಪರ್ಯಾಯವಾಗಿ ರೂಪಿಸಿರುವ ‘ವಿಬಿ–ಜಿ ರಾಮ್ ಜಿ’ ಮಸೂದೆಗೆ ವಿರೋಧ ವ್ಯಕ್ತಪಡಿಸಿರುವ ಕರ್ನಾಟಕದ ಕಾಂಗ್ರೆಸ್ ಸರ್ಕಾರ, ಕೇಂದ್ರದ ವಿರುದ್ಧದ ತಳಮಟ್ಟದಲ್ಲಿ ಹೋರಾಟ ರೂಪಿಸುವ ಬಗ್ಗೆ ಗ್ರಾಮೀಣಾಭಿವೃದ್ಧಿ ತಜ್ಞರೊಂದಿಗೆ ಸಮಾಲೋಚನೆ ನಡೆಸಿದೆ.
ಹೆಸರು ಬದಲಿಸಿರುವ ನರೇಗಾ ಯೋಜನೆಯಡಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅನುದಾನದ ಅನುಪಾತವನ್ನು ಶೇಕಡಾ 90:10 ಬದಲು 60:40 ಮಾಡಿರುವುದರಿಂದ ರಾಜ್ಯ ಸರ್ಕಾರದ ಮೇಲೆ ಆಗುವ ಆರ್ಥಿಕ ಪ್ರತಿಕೂಲ ಪರಿಣಾಮಗಳ ಬಗ್ಗೆ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಅವರು ತಜ್ಞರ ಜತೆಗೆ ಕರ್ನಾಟಕ ಭವನದಲ್ಲಿ ಮಂಗಳವಾರ ಸಂಜೆ ಸಭೆ ನಡೆಸಿದರು. ಸಂಸದರಾದ ಶ್ರೇಯಸ್ ಪಟೇಲ್, ಜಿ. ಕುಮಾರ ನಾಯಕ ಮತ್ತಿತರರು ಭಾಗವಹಿಸಿದ್ದರು.
ನರೇಗಾ ಕಾಯ್ದೆಯನ್ನು ಕೇಂದ್ರ ಸರ್ಕಾರವು ಏಕಪಕ್ಷೀಯವಾಗಿ ರದ್ದುಗೊಳಿಸಿದ ನಂತರ ಕೈಗೊಳ್ಳಬೇಕಿರುವ ಕ್ರಮಗಳ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.
‘ನರೇಗಾ ಯೋಜನೆಯಲ್ಲೇ ಕೇಂದ್ರ ಸರ್ಕಾರ ಅರ್ಧಾಂಶದಷ್ಟು ಮೊತ್ತ ಭರಿಸುವಾಗಲೇ ಏದುಸಿರು ಬಿಡುತ್ತಿತ್ತು. ಹೊಸ ಕಾಯ್ದೆಯಡಿ ಇನ್ನಷ್ಟು ಅನುದಾನ ಕಡಿತ ಆಗುವ ಸಾಧ್ಯತೆ ಇದೆ. ರಾಜ್ಯ ಸರ್ಕಾರಗಳ ಮೇಲಿನ ಹೊರೆ ಇನ್ನಷ್ಟು ಹೆಚ್ಚಲಿದೆ. ಗ್ರಾಮ ವಿರೋಧಿಯಾಗಿರುವ ಈ ಮಸೂದೆ ವಿರುದ್ಧ ತಳಮಟ್ಟದಲ್ಲಿ ಹೋರಾಟ ನಡೆಸಬೇಕು‘ ಎಂದು ತಜ್ಞರು ಸಲಹೆ ನೀಡಿದರು.
ಪ್ರಿಯಾಂಕ್ ಖರ್ಗೆ ಮಾತನಾಡಿ, ‘ಹೊಸ ಮಸೂದೆಯು ಪಂಚಾಯತ್‌ರಾಜ್‌ಗೆ ಮಾರಕ. ಕೇಂದ್ರ ಸರ್ಕಾರ ತನ್ನ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದೆ‘ ಎಂದು ಕಿಡಿಕಾರಿದರು.
ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮಾತನಾಡಿ, ‘ಮಹಾತ್ಮಾ ಗಾಂಧಿ ಅವರ ಹೆಸರು ಬದಲಾವಣೆ ಮಾಡುತ್ತಿರುವುದು ನೋಡಿದರೆ ಕೇಂದ್ರ ಸರ್ಕಾರದ ಅಂತಿಮ ದಿನಗಳ ಆರಂಭ ಎನ್ನಬಹುದು. ಕೇಂದ್ರ ಸರ್ಕಾರ ಈ ಯೋಜನೆಯನ್ನು ಹತ್ಯೆ ಮಾಡುತ್ತಿದೆ. ಈ ಯೋಜನೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಪಾಲಿನ ಅನುಪಾತವನ್ನು 60:40ಕ್ಕೆ ಬದಲಾಯಿಸಲಾಗಿದೆ. ಬಿಜೆಪಿ ಆಡಳಿತವಿರುವ ರಾಜ್ಯ ಸರ್ಕಾರಗಳು ಸೇರಿದಂತೆ ಯಾವುದೇ ರಾಜ್ಯ ಸರ್ಕಾರಗಳು ಇದನ್ನು ಭರಿಸುವುದಿಲ್ಲ. ಇದರಿಂದಾಗಿ ಭವಿಷ್ಯದಲ್ಲಿ ಈ ಯೋಜನೆ ಸಂಪೂರ್ಣ ವಿಫಲವಾಗಲಿದೆ‘ ಎಂದು ಅಭಿಪ್ರಾಯಪಟ್ಟರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.