ADVERTISEMENT

ಎಸ್ಸಿ, ಎಸ್ಟಿ ವಿದ್ಯಾರ್ಥಿಗಳಿಗೂ ವೇದಗಣಿತ ಕಲಿಕೆ: ಇಲಾಖೆ ಆದೇಶ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2022, 19:33 IST
Last Updated 14 ಸೆಪ್ಟೆಂಬರ್ 2022, 19:33 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ರಾಜ್ಯದ ವಿವಿಧ ಶಾಲೆಗಳ 5ರಿಂದ 8ನೇ ತರಗತಿವರೆಗಿನ ಮಕ್ಕಳಿಗೆ ವೇದಗಣಿತ ಕಲಿಸಲು ಹಾಗೂ ಅದಕ್ಕೆ ಅಗತ್ಯವಾದ ಸಮವಸ್ತ್ರ ಒದಗಿಸಲು ಗ್ರಾಮ ಪಂಚಾಯತಿಗಳಲ್ಲಿನ ಪರಿಶಿಷ್ಟರಿಗೆ ಮೀಸಲಾದ ಶೇ 25ರ ಅನುದಾನ ಬಳಸಿಕೊಳ್ಳಲು ಗ್ರಾಮೀಣಾಭಿವೃದ್ಧಿ ಇಲಾಖೆ ಆದೇಶ ಹೊರಡಿಸಿದೆ.

ಕೆಲ ತಿಂಗಳ ಹಿಂದೆಯೇ ಗ್ರಾಮೀಣಾಭಿವೃದ್ಧಿ ಇಲಾಖೆ ಹೊರಡಿಸಿದ್ದ ಈ ಆದೇಶದ ಅನ್ವಯ ಇತರೆ ಮಕ್ಕಳಂತೆ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಮಕ್ಕಳಿಗೂ ವೇದಗಣಿತ ಕಲಿಕೆಗೆ ಅವಕಾಶ ಮಾಡಿಕೊಡಲುಶಿಕ್ಷಣ ಇಲಾಖೆ ಕ್ರಮ ಕೈಗೊಂಡಿದೆ. ಆಯಾ ಗ್ರಾಮ ಪಂಚಾಯತಿಗಳು ನೀಡಿದ ಅನುದಾನ ಬಳಸಿಕೊಂಡು ಸ್ಥಳೀಯ ಅಕಾಡೆಮಿ, ಶಿಕ್ಷಣ ಸಂಸ್ಥೆಗಳ ಸಹಯೋಗದಲ್ಲಿ ಕಲಿಕೆ ಆರಂಭಿಸಲಾಗಿದೆ. ಸರ್ಕಾರಿ ಶಾಲೆಯ ಶಿಕ್ಷಕರಿಗೂ ಅಗತ್ಯ ತರಬೇತಿ ನೀಡುತ್ತಿದ್ದು, ತರಗತಿಗಳಿಗೆ ನಿಯೋಜಿಸಲಾಗುತ್ತಿದೆ.

ವೇದಗಣಿತವು ಪುರಾತನಗಣಿತದ ವಿಧಾನ. ಈ ಗಣಿತದ ಪ್ರಕಾರ ಗಣಿತದ ಯಾವುದೇ ಕ್ಲಿಷ್ಟಕರ ಸಮಸ್ಯೆಯನ್ನು ಮನಸ್ಸಿನಲ್ಲೇ ಯೋಚಿಸಿ, ಬರವಣಿಗೆಯಿಲ್ಲದೇ ವೇಗವಾಗಿ ಬಗೆಹರಿಸಬಹುದು. 16 ಸಂಸ್ಕೃತದ ಗಣಿತ ಸೂತ್ರಗಳಿಂದ ಹಾಗೂ ಅವುಗಳಿಂದ ದೊರಕುವ ಫಲಿತಾಂಶಗಳಿಂದ ಗಣಿತದ ಹಲವು ಸಮಸ್ಯೆಗಳಿಗೆ ಉತ್ತರ ಕಂಡು ಹಿಡಿಯಬಹುದು. ಕಳೆದು ಹೋಗಿದ್ದ ಈ ಸೂತ್ರಗಳನ್ನು ಭಾರತೀ ಕೃಷ್ಣ ತೀರ್ಥಜಿ ಮಹಾರಾಜ ಅವರು 1911–18ರ ಅವಧಿಯಲ್ಲಿ ವೇದ ಅಧ್ಯಯನ ಮೂಲಕ ಮತ್ತೆ ಪರಿಶೋಧನೆ ಮಾಡಿದರು ಎನ್ನಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.