ADVERTISEMENT

ನೀಟ್‌ನಿಂದ ದಕ್ಷಿಣ ರಾಜ್ಯಗಳ ವಿದ್ಯಾರ್ಥಿಗಳಿಗೆ ಅನ್ಯಾಯ: ವೀರಪ್ಪ ಮೊಯಿಲಿ

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2022, 0:51 IST
Last Updated 10 ಮಾರ್ಚ್ 2022, 0:51 IST
ವೀರಪ್ಪ ಮೊಯಿಲಿ
ವೀರಪ್ಪ ಮೊಯಿಲಿ   

ಬೆಂಗಳೂರು‌: ‘ವೈದ್ಯಕೀಯ ಸೀಟುಗಳ ಹಂಚಿಕೆಗೆ ನಡೆಯುವ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯಿಂದ (ನೀಟ್) ಕರ್ನಾಟಕ ಸೇರಿ ದಕ್ಷಿಣ ರಾಜ್ಯಗಳ ವಿದ್ಯಾರ್ಥಿಗಳಿಗೆ ಅನ್ಯಾಯವಾಗತ್ತಿದೆ. ಈ ಕುರಿತು ಮರುವಿಮರ್ಶೆ ಮಾಡಬೇಕಾದ ಅಗತ್ಯವಿದೆ’ ಎಂದು ಕಾಂಗ್ರೆಸ್‌ ಮುಖಂಡ ಎಂ. ವೀರಪ್ಪ ಮೊಯಿಲಿ ಹೇಳಿದರು.

ಸುದ್ದಿಗಾರರ ಜೊತೆ ಬುಧವಾರ ಮಾತನಾಡಿದ ಅವರು, ‘ನಾನು ಶಿಕ್ಷಣ ಸಚಿವ ಆಗಿದ್ದ ಸಂದರ್ಭದಲ್ಲಿ ಸಿಇಟಿ ಪರೀಕ್ಷೆ ಪರಿಚಯಿಸಿದ್ದೆ. ಪಿಯು ಅಂಕಗಳಿಂದ ಮತ್ತು ಸಿಇಟಿಯಿಂದತಲಾ ಶೇ 50ರಷ್ಟು ಅಂಕಗಳನ್ನು ಪರಿಗಣಿಸಿ ವೈದ್ಯಕೀಯ ಮತ್ತು ಎಂಜಿನಿಯರಿಂಗ್ ಕೋರ್ಸ್‌ ಪ್ರವೇಶಕ್ಕೆ ಅವಕಾಶ ಕಲ್ಪಿಸಿದ್ದೆ. ಉತ್ತಮ ಅಂಕಗಳನ್ನು ಗಳಿಸಿದ್ದಎಲ್ಲ ವರ್ಗಗಳ ಪ್ರತಿಭಾವಂತವಿದ್ಯಾರ್ಥಿಗಳಿಗೆ ಅರ್ಹತೆ ಆಧಾರದಲ್ಲಿ ಸೀಟ್‌ಗಳು ಸಿಗುತ್ತಿತ್ತು. ಆದರೆ, ಇದೀಗ ಉತ್ತಮ ಅಂಕ ಗಳಿಸುವ ವಿದ್ಯಾರ್ಥಿಗಳಿಗೆ ವೈದ್ಯಕೀಯ ಸೀಟು ಲಭ್ಯವಾಗದಸ್ಥಿತಿ ನಿರ್ಮಾಣವಾಗಿದೆ‘ ಎಂದು ಹೇಳಿದರು.

‘ಈಗ ಶೇ 97ರಷ್ಟು ಅಂಕ ಗಳಿಸಿದ್ದರೂ ದೇಶದಲ್ಲಿ ವೈದ್ಯಕೀಯ ಸೀಟು ಸಿಗದಂತಾಗಿದೆ. ಹೀಗಾಗಿ, ಹೊರದೇಶಗಳಿಗೆ ಹೋಗಬೇಕಾದ ಅನಿವಾರ್ಯತೆ ನಿರ್ಮಾಣವಾಗಿದೆ. ಸಿಇಟಿ ಪರಿಚಯಿಸಿದ ಸಂದರ್ಭದಲ್ಲಿ ಎಂಜನಿಯರಿಂಗ್‌ಗೆ ₹ 5 ಸಾವಿರ, ವೈದ್ಯಕೀಯಕ್ಕೆ ₹ 12 ಸಾವಿರ ಶುಲ್ಕ ನಿಗದಿ ಮಾಡಲಾಗಿತ್ತು. ನೀಟ್ ಜಾರಿಯಿಂದ ಶುಲ್ಕವೂ ಹೆಚ್ಚಾಗಿದೆ. ಜತೆಗೆ, 12 ವರ್ಷ ಕಲಿತ ಶಿಕ್ಷಣಕ್ಕೆ ಬೆಲೆಯೇ ಇಲ್ಲದಂತಾಗಿದೆ. ಈ ಬೆಳವಣಿಗೆ ಹಲವು ಸಂಶಯಗಳಿಗೆ ಕಾರಣವಾಗಿದೆ. ಹೀಗಾಗಿ, ಆಯಾ ರಾಜ್ಯಗಳು ಈ ನೀಟ್ ಜಾರಿಗೆ ಸಂಬಂಧಿಸಿದಂತೆ ಪುನರ್ ವಿಮರ್ಶೆ ಮಾಡಬೇಕಾದ ಅಗತ್ಯವಿದೆ’ ಎಂದು ಮೊಯಿಲಿ ಅವರು ಹೇಳಿದರು.

ADVERTISEMENT

‘ಲಕೋಟೆ ಮುಖ್ಯಮಂತ್ರಿ’

ಬೆಂಗಳೂರು: ‘ನಾನು ಮುಖ್ಯಮಂತ್ರಿಯಾದ ಸಂದರ್ಭದಲ್ಲಿ ಪಕ್ಷದ ಹೈಕಮಾಂಡ್ ಮೂವರು ವೀಕ್ಷಕರನ್ನು ರಾಜ್ಯಕ್ಕೆ ಕಳುಹಿಸಿಕೊಟ್ಟಿತ್ತು. ಅತ್ಯಧಿಕ ಬೆಂಬಲ ಹೊಂದಿರುವ ವೀರಪ್ಪ ಮೊಯಿಲಿ ಅವರನ್ನೇ ಮುಖ್ಯಮಂತ್ರಿಯನ್ನಾಗಿ ಮಾಡಲು ಸೂಚಿಸಿದ ಪತ್ರವನ್ನು ಎಐಸಿಸಿ ಅಧ್ಯಕ್ಷರು ಲಕೋಟೆಯಲ್ಲಿ ಕಳುಹಿಸಿಕೊಟ್ಟಿದ್ದರು. ನಂತರ ಇದನ್ನೇ ಮುಂದಿಟ್ಟು ಹಲವರು ಲಕೋಟೆ ಮುಖ್ಯಮಂತ್ರಿ ಎಂದು ಟೀಕಿಸಿದ್ದರು’ ಎಂದು ಕಾಂಗ್ರೆಸ್‌ ಮುಖಂಡ ವೀರಪ್ಪ ಮೊಯಿಲಿ ಹೇಳಿದರು. ತಮ್ಮ ಆತ್ಮಕಥೆ ‘ನನ್ನ ಬೊಗಸೆಯ ಆಕಾಶ’ ಇದೇ 12ರಂದು ಬಿಡುಗಡೆಯಾಗಲಿದ್ದು, ಅದರಲ್ಲಿ ಈ ವಿಷಯವನ್ನು ಬರೆದುಕೊಂಡಿರುವುದಾಗಿ ಮೊಯಿಲಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.