ADVERTISEMENT

ಲಿಂಗಾಯತ: ಶಿಫಾರಸು ತಿರಸ್ಕಾರ

ವಿಧಾನಸಭೆ ಚುನಾವಣೆ ವೇಳೆ ಹೋಗಿತ್ತು ಪ್ರಸ್ತಾವ l ಲೋಕಸಭೆ ಚುನಾವಣೆ ಹತ್ತಿರದಲ್ಲಿ ಬಂತು ಉತ್ತರ

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2018, 20:26 IST
Last Updated 10 ಡಿಸೆಂಬರ್ 2018, 20:26 IST
ಸಾಂದರ್ಭಿಕ ಚಿತ್ರ.
ಸಾಂದರ್ಭಿಕ ಚಿತ್ರ.   

ಬೆಂಗಳೂರು: ಕಳೆದ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಲಿಂಗಾಯತ, ವೀರಶೈವ ಲಿಂಗಾಯತರಿಗೆ ಧಾರ್ಮಿಕ ಅಲ್ಪಸಂಖ್ಯಾತ ಸ್ಥಾನಮಾನ ನೀಡುವ ಸಂಬಂಧ ಹಿಂದಿನ ಕಾಂಗ್ರೆಸ್‌ ಸರ್ಕಾರ ಮಾಡಿದ್ದ ಶಿಫಾರಸನ್ನು ಲೋಕಸಭೆ ಚುನಾವಣೆ ಹತ್ತಿರವಾಗುತ್ತಿರುವ ಈ ಸಂದರ್ಭದಲ್ಲಿ ಕೇಂದ್ರದ ಎನ್‌ಡಿಎ ಸರ್ಕಾರ ತಿರಸ್ಕರಿಸಿದೆ.

ಈ ಕುರಿತಂತೆ ರಾಜ್ಯ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಗೆ, ಕೇಂದ್ರ ಗೃಹ ಸಚಿವಾಲಯ ಬರೆದಿರುವ ಪತ್ರವನ್ನು ಹೆಚ್ಚುವರಿ ಸಾಲಿಸಿಟರ್ ಜನರಲ್‌ ಪ್ರಭುಲಿಂಗ ಕೆ.ನಾವದಗಿ ಅವರು ಸೋಮವಾರ ಹೈಕೋರ್ಟ್‌ಗೆ ಸಲ್ಲಿಸಿದರು.

ಕಳೆದ ನವೆಂಬರ್ 13ರಂದು ರಾಜ್ಯ ಸರ್ಕಾರಕ್ಕೆ ಈ ಪತ್ರವನ್ನು ಬರೆಯಲಾಗಿದ್ದು, ಇದರಿಂದಾಗಿ ಲಿಂಗಾಯತ ಧರ್ಮಕ್ಕೆ ಪ್ರತ್ಯೇಕ ಧರ್ಮ ಮಾನ್ಯತೆ ನೀಡಬೇಕೆಂಬ ಬೇಡಿಕೆಗೆ ಹಿನ್ನಡೆ ಆದಂತಾಗಿದೆ.

ADVERTISEMENT

ಲಿಂಗಾಯತರಿಗೆ ಸ್ವತಂತ್ರ ಧರ್ಮದ ಮಾನ್ಯತೆ ನೀಡುವ ಪ್ರಸ್ತಾವ ವಿರೋಧಿಸಿ ಹೈಕೋರ್ಟ್‌ನಲ್ಲಿ ನಾಲ್ಕು ಪ್ರತ್ಯೇಕ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳು (ಪಿಐಎಲ್‌) ದಾಖಲಾಗಿದ್ದವು.

ಈ ಅರ್ಜಿಗಳಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ಮೆಮೊ (ಜ್ಞಾಪನಾ ಪತ್ರ) ದಾಖಲಿಸಿಕೊಂಡ ಮುಖ್ಯ ನ್ಯಾಯಮೂರ್ತಿ ದಿನೇಶ್ ಮಾಹೇಶ್ವರಿ ಹಾಗೂ ನ್ಯಾಯಮೂರ್ತಿ ಎಸ್‌.ಸುಜಾತ ಅವರಿದ್ದ ವಿಭಾಗೀಯ ನ್ಯಾಯಪೀಠ, ‘ಈ ಅರ್ಜಿಗಳನ್ನು ಮೆರಿಟ್‌ ಮೇಲೆ ವಿಚಾರಣೆ ನಡೆಸುವ ಅಗತ್ಯವಿಲ್ಲ’ ಎಂಬ ಅಭಿಪ್ರಾಯದೊಂದಿಗೆ ವಿಲೇವಾರಿ ಮಾಡಿದೆ.

ತಿರಸ್ಕರಿಸಿದ್ದು ಏಕೆ?
ಶಿಫಾರಸನ್ನು ತಿರಸ್ಕಾರ ಮಾಡಿರುವುದಕ್ಕೆ ಕೇಂದ್ರ ಸರ್ಕಾರ ಎರಡು ಕಾರಣಗಳನ್ನು ನೀಡಿದೆ:

1)ಲಿಂಗಾಯತ-ವೀರಶೈವರು ಹಿಂದೂ ಧರ್ಮದ ಶಾಖೆ ಎಂಬುದು ಸದಾ ಒಪ್ಪಿಕೊಂಡು ಬಂದಿರುವ ಸಂಗತಿ. ಈ ಅಂಶವನ್ನು 1871ರಲ್ಲಿ ನಡೆಸಲಾದ ಮೊದಲ ಮತ್ತು ಅಧಿಕೃತ ಜನಗಣತಿ ವೇಳೆಯಲ್ಲಿ ಪರಿಗಣಿಸಲಾಗಿದೆ

2)ಒಂದು ವೇಳೆ ಶಿಫಾರಸು ಮಾನ್ಯ ಮಾಡಿದರೆ ಈಗಾಗಲೇ ಲಿಂಗಾಯತ-ವೀರಶೈವ ಪಂಗಡಗಳಲ್ಲಿ ಪರಿಶಿಷ್ಟ ಜಾತಿ (ಎಸ್‌.ಸಿ) ಅಡಿ ಸೌಲಭ್ಯ ಪಡೆಯುತ್ತಿರುವವರು, ಅದರಿಂದ ವಂಚಿತರಾಗುತ್ತಾರೆ

ಅಡ್ಡಗೋಡೆ ಮೇಲಿನ ನಿರ್ಣಯ
ಮೇಲಿನ ಎರಡೂ ಕಾರಣಗಳಿಂದ ರಾಜ್ಯದ ಶಿಫಾರಸನ್ನು ಮಾನ್ಯ ಮಾಡಲು ಸಾಧ್ಯವಾಗದಿರಬಹುದು ಎಂದು ಕೇಂದ್ರದಿಂದ ರಾಜ್ಯ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗೆ ಬರೆದ ಪತ್ರದಲ್ಲಿ ತಿಳಿಸಲಾಗಿದೆ. ‘ಇದೊಂದು ಅಡ್ಡಗೋಡೆ ಮೇಲಿನ ನಿರ್ಣಯ. ಕೇಂದ್ರ ಶಿಫಾರಸನ್ನು ತಿರಸ್ಕರಿಸಿಯೂ ಇಲ್ಲ, ಪುರಸ್ಕರಿಸಿಯೂ ಇಲ್ಲ’ ಎಂದು ಪ್ರತ್ಯೇಕ ಧರ್ಮಕ್ಕಾಗಿ ಹೋರಾಡುತ್ತಿರುವವರು ವ್ಯಾಖ್ಯಾನಿಸುತ್ತಿದ್ದಾರೆ.

ವಿರೋಧದ ನಡುವೆ ಶಿಫಾರಸು
ವಿಧಾನಸಭೆ ಚುನಾವಣೆ ಹೊತ್ತಿಗೆ ಲಿಂಗಾಯತ ಪ್ರತ್ಯೇಕ ಧರ್ಮದ ದಾಳ ಉರುಳಿಸಿದ್ದ ಆಗಿನ ಸಿದ್ದರಾಮಯ್ಯ ನೇತೃತ್ವದ ಸರ್ಕಾರ, ಮತಬ್ಯಾಂಕ್‌ ಭದ್ರಗೊಳಿಸಲು ಮುಂದಾಗಿತ್ತು. ವೀರಶೈವ–ಲಿಂಗಾಯತ ಮಠಾಧೀಶರು, ವೀರಶೈವ ಮಹಾಸಭಾದ ಮುಖಂಡರ ಪ್ರಬಲ ವಿರೋಧದ ನಡುವೆಯೂ ಶಿಫಾರಸನ್ನು ಕಳುಹಿಸಲಾಗಿತ್ತು.

ಪ್ರತ್ಯೇಕ ಧರ್ಮಕ್ಕಾಗಿ ಮಾಡಿದ ಈ ಶಿಫಾರಸಿನಿಂದ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಯಾವುದೇ ಲಾಭ ಆಗಿರಲಿಲ್ಲ. ಫಲಿತಾಂಶದ ವಿಶ್ಲೇಷಣೆಗೆ ಸೇರಲಾಗಿದ್ದ ಪಕ್ಷದ ಆಂತರಿಕ ಸಭೆಯಲ್ಲಿ ಧರ್ಮದ ವಿಷಯಕ್ಕೆ ಕೈಹಾಕಿ ತಪ್ಪು ಮಾಡಲಾಯಿತು ಎಂದು ಬಹುತೇಕ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದರು. ‘ಧರ್ಮದ ವಿಚಾರಕ್ಕೆ ಕೈಹಾಕಿದ್ದು ನಮ್ಮ ತಪ್ಪು’ ಎಂದು ಸಚಿವ ಡಿ.ಕೆ.ಶಿವಕುಮಾರ್‌ ಇತ್ತೀಚೆಗೆ ಬಹಿರಂಗವಾಗಿ ಹೇಳಿದ್ದರು. ಅದಕ್ಕೆ ಸಿದ್ದರಾಮಯ್ಯನವರೂ ಧ್ವನಿಗೂಡಿಸಿದ್ದರು.

ಶಿಫಾರಸಿಗೆ ಸಂಬಂಧಿಸಿದಂತೆ ಚುನಾವಣೆ ಮುಗಿಯುವವರೆಗೆ ಸುಮ್ಮನಿದ್ದ ಕೇಂದ್ರದ ಬಿಜೆಪಿ ಸರ್ಕಾರ ಈಗ ತನ್ನ ದಾಳ ಉರುಳಿಸಿದೆ.

***

ಕೇಂದ್ರದ ನಿರ್ಧಾರ ನಮಗೆ ಹರ್ಷ ಉಂಟುಮಾಡಿದೆ. ಇದು ಧರ್ಮಕ್ಕೆ, ಸತ್ಯಕ್ಕೆ ದೊರೆತ ಜಯ. ಲಿಂಗಾಯತ–ವೀರಶೈವರನ್ನು ಯಾರೂ ಎಂದೂ ಬೇರ್ಪಡಿಸಲು ಸಾಧ್ಯವಿಲ್ಲ ಮತ್ತು ಯಾರಿಗೂ ಅಧಿಕಾರವಿಲ್ಲ. ರಾಜಕಾರಣಿಗಳು ಧರ್ಮ, ಜಾತಿ ಒಡೆಯುವ ಕೆಲಸ ಬಿಟ್ಟು ಬಡವರ, ರೈತರ ಉದ್ಧಾರಕ್ಕೆ ರಚನಾತ್ಮಕ ಕೆಲಸ ಮಾಡಲಿ.
-ರಂಭಾಪುರಿ ಪೀಠದ ವೀರಸೋಮೇಶ್ವರ ಸ್ವಾಮೀಜಿ, ಬಾಳೆಹೊನ್ನೂರು
*
ನಾವು ಕೇವಲ ಲಿಂಗಾಯತ ಪದದ ಮೇಲೆ ಸ್ವತಂತ್ರ ಧರ್ಮ ಕೇಳಿದ್ದೇವೆ. ಇದನ್ನು ತಜ್ಞರ ಸಮಿತಿ ಸಿದ್ಧಪಡಿಸಿದೆ. ಹಾಗಾಗಿ 1871ರ ಜನಗಣತಿ ಇಲ್ಲಿ ಅನ್ವಯ ಆಗೋದಿಲ್ಲ. ಲಿಂಗಾಯತರಲ್ಲಿ ಎಸ್‌.ಸಿ ಎಸ್‌.ಟಿಗಳೇ ಇಲ್ಲ. ಆದ್ದರಿಂದ ಅವರು ಎಸ್‌ಸಿ ಎಸ್‌ಟಿ ಸೌಲಭ್ಯ ವಂಚಿತರಾಗುತ್ತಾರೆ ಎಂಬ ಪ್ರಶ್ನೆಯೇ ಉದ್ಭವಿಸುವುದಿಲ್ಲ.
-ಮಾತೆ ಮಹಾದೇವಿ, ಬಸವ ಧರ್ಮ ಪೀಠಾಧ್ಯಕ್ಷೆ
*
ಕೇಂದ್ರದ ನಿಲುವಿನಿಂದ ಬಸವ ಮತ್ತು ಲಿಂಗಾಯತ ಧರ್ಮದ ಅನುಯಾಯಿಗಳು ಯಾವುದೇ ರೀತಿಯಲ್ಲೂ ಆತಂಕಪಡುವ ಅಗತ್ಯವಿಲ್ಲ. ಬಸವ ಧರ್ಮ ಪ್ರತ್ಯೇಕ ಧರ್ಮದ ಅರ್ಹತೆ ಹೊಂದಿದೆ. ಇಂದಲ್ಲಾ ನಾಳೆ ಮಾನ್ಯತೆ ಪಡೆದೇ ತೀರುತ್ತದೆ
-ಎಂ.ಬಿ. ಪಾಟೀಲ, ಶಾಸಕ
*
ಈ ಹಿಂದೆ ರಾಜ್ಯ ಸರ್ಕಾರ ಮಾಡಿದ್ದ ಶಿಫಾರಸನ್ನು ಕೇಂದ್ರ ತಿರಸ್ಕರಿಸಿರುವುದು ಒಂದು ಎಚ್ಚರಿಕೆ ಗಂಟೆ. ಪ್ರತ್ಯೇಕ ಧರ್ಮದ ಮಾನ್ಯತೆ ಪಡೆಯುವ ಎಲ್ಲ ಅರ್ಹತೆಯಿದ್ದರೂ ಒಗ್ಗಟ್ಟಿನ ಕೊರತೆಯಿಂದಾಗಿ ನಮ್ಮ ಹಕ್ಕು ಸರಿಯಾಗಿ ಮಂಡನೆಯಾಗದೇ ತಿರಸ್ಕೃತಗೊಂಡಿದೆ. ಈಗಲಾದರೂ ವೀರಶೈವ–ಲಿಂಗಾಯತ ಒಂದೇ ಎಂದು ಒಪ್ಪಬೇಕು.
–ಶಾಮನೂರು ಶಿವಶಂಕರಪ್ಪ, ಅಧ್ಯಕ್ಷ, ಅಖಿಲ ಭಾರತ ವೀರಶೈವ ಮಹಾಸಭಾ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.