
ಬೆಂಗಳೂರು: ಪಶುಪಾಲನಾ ಮತ್ತು ಪಶು ವೈದ್ಯ ಸೇವಾ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಗ್ರಾಮೀಣ ಪ್ರದೇಶದ ಪಶು ವೈದ್ಯರ ಬೇಡಿಕೆಗಳನ್ನು ಈಡೇರಿಸದೇ ಇದ್ದರೆ, ಇದೇ 17 ರಿಂದ ಕಾಲು ಬಾಯಿ ಜ್ವರಕ್ಕೆ ಲಸಿಕೆ ಹಾಕುವ ಅಭಿಯಾನವನ್ನು ಸಂಪೂರ್ಣ ನಿಲ್ಲಿಸಲಾಗುವುದು ಎಂದು ಕರ್ನಾಟಕ ಪಶುವೈದ್ಯಕೀಯ ಸಂಘ ಎಚ್ಚರಿಸಿದೆ.
‘ದೀರ್ಘಕಾಲದಿಂದ ಬಾಕಿ ಉಳಿದಿರುವ ಸೇವಾ ಸೌಲಭ್ಯಗಳ ಬೇಡಿಕೆಗಳ ಈಡೇರಿಸಿಲ್ಲ. ಆದ್ದರಿಂದ ಲಸಿಕೆ ಕಾರ್ಯಕ್ರಮದ ವರದಿಯನ್ನು ಸರ್ಕಾರಕ್ಕೆ ಸಲ್ಲಿಸುವುದನ್ನು ಮಂಗಳವಾರದಿಂದ ನಿಲ್ಲಿಸಲಾಗಿದೆ’ ಎಂದು ಸಂಘ ಅಧ್ಯಕ್ಷ ಡಾ.ಶಿವಶರಣಪ್ಪ ಜಿ.ಯಲಗೋಡ ಅವರು ಹೇಳಿದ್ದಾರೆ.
ಪಶು ವೈದ್ಯ ಸೇವಾ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪಶು ವೈದ್ಯರಿಗೆ 2012 ರ ಡಿಸೆಂಬರ್ 31 ರಿಂದ ಪೂರ್ವಾನ್ವಯವಾಗುವಂತೆ 6 ಮತ್ತು 13 ವರ್ಷಗಳ ಪದೋನ್ನತಿ ನೀಡಬೇಕು ಮತ್ತು ಅರ್ಹ ಪಶು ವೈದ್ಯರಿಗೆ 6 ಮತ್ತು 13 ವರ್ಷಗಳ ಕಾಲಮಿತಿ ಬಡ್ತಿ ನೀಡಬೇಕು ಎಂದು ಅವರು ಮುಖ್ಯಮಂತ್ರಿ ಅವರಿಗೆ ಬರೆದಿರುವ ಪತ್ರದಲ್ಲಿ ಒತ್ತಾಯಿಸಿದ್ದಾರೆ.
ನಿವೃತ್ತಿ ಹೊಂದಿದ ಪಶುವೈದ್ಯರಿಗೆ ನಿಯಮಿತವಾಗಿ ನಿವೃತ್ತಿ ಸೌಲಭ್ಯದ ಪಸ್ತಾವನೆಗಳು ಮತ್ತು ಅರ್ಹ ನಿವೃತ್ತ ಪಶು ವೈದ್ಯರಿಗೆ ಕರ್ನಾಟಕ ನಾಗರಿಕ ಸೇವಾ ನಿಯಮಗಳು 247–ಎ ರಂತೆ ಅರ್ಹತಾದಾಯಕ ಸೇವೆಯನ್ನು ಪಿಂಚಣಿ ಉದ್ದೇಶಕ್ಕೆ ಪರಿಗಣಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಇಲಾಖೆಯ ಸಚಿವರು, ಕಾರ್ಯದರ್ಶಿ ಮತ್ತು ಆಯುಕ್ತರ ನೇತೃತ್ವದಲ್ಲಿ ಕಳೆದ 2 ವರ್ಷಗಳಲ್ಲಿ ಸುಮಾರು 7 ಸಭೆಗಳಾಗಿವೆ. ಇದೇ ವೇಳೆ 6 ಜನ ಕಾರ್ಯದರ್ಶಿಗಳು ಬದಲಾವಣೆ ಆಗಿದ್ದಾರೆ. ಇದರ ಪರಿಣಾಮವಾಗಿ, ಕಾಲಬದ್ಧ ಬಡ್ತಿಯನ್ನು ಕೊಟ್ಟಿಲ್ಲ. ಮೇಲ್ಮಟ್ಟದ ಹುದ್ದೆಗಳಿಗೆ ನಿರಂತರವಾಗಿ ಪದೋನ್ನತಿ ನೀಡಲಾಗುತ್ತಿದೆ. ಆದರೆ, ಪಶುವೈದ್ಯರಿಗೆ ನಿರಂತರವಾಗಿ ಅನ್ಯಾಯವಾಗುತ್ತಿದೆ. ಆದ್ದರಿಂದ ಅನಿವಾರ್ಯವಾಗಿ ಹೋರಾಟದ ಹಾದಿ ಹಿಡಿಯಬೇಕಾಗಿದೆ ಎಂದಿದ್ದಾರೆ.
ಗಡುವು: ‘ಸೇವಾ ಸೌಲಭ್ಯಗಳ ಈಡೇರಿಕೆಗೆ ಇದೇ 16 ರವರೆಗೆ ಗಡುವು ನೀಡಲಾಗಿದೆ. ಸಾರ್ವಜನಿಕ ಹಿತದೃಷ್ಟಿಯಿಂದ ಇದೇ 16 ರವರೆಗೆ 8 ನೇ ಸುತ್ತಿನ ಕಾಲುಬಾಯಿ ಜ್ವರ ಲಸಿಕೆ ನೀಡುವ ಕಾರ್ಯಕ್ರಮದಲ್ಲಿ ಭಾಗವಹಿಸುತ್ತೇವೆ. ಆದರೆ, ಇದೇ 11 ರಿಂದ 16 ರವರೆಗೆ ನಡೆಸುವ ಲಸಿಕಾ ಕಾರ್ಯಕ್ರಮದ ಪ್ರಗತಿ ವರದಿಯನ್ನು ಸಲ್ಲಿಸುವುದಿಲ್ಲ. 16 ಒಳಗೆ ಬೇಡಿಕೆ ಈಡೇರಿಸದಿದ್ದರೆ, ಅನಿವಾರ್ಯವಾಗಿ ಇದೇ 17 ರಿಂದ ಕಾಲುಬಾಯಿ ಲಸಿಕಾ ಕಾರ್ಯಕ್ರಮವನ್ನು ಸಂಪೂರ್ಣವಾಗಿ ನಿಲ್ಲಿಸಲಾಗುವುದು’ ಎಂದು ಶಿವಶರಣಪ್ಪ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.