ADVERTISEMENT

ಮಂದಿರ: ಸುಗ್ರೀವಾಜ್ಞೆಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 10 ನವೆಂಬರ್ 2018, 20:00 IST
Last Updated 10 ನವೆಂಬರ್ 2018, 20:00 IST

ಬೆಂಗಳೂರು: ರಾಮಜನ್ಮಭೂಮಿಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಇರುವ ಕಾನೂನಿನ ತೊಡಕು ನಿವಾರಿಸಲು ಸುಗ್ರೀವಾಜ್ಞೆ ತರಬೇಕೆಂದು ಕೇಂದ್ರ ಸರ್ಕಾರಕ್ಕೆವಿಶ್ವ ಹಿಂದೂ ಪರಿಷತ್‌ ಒತ್ತಾಯಿಸಿದೆ.

ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕಾಗಿ ಒತ್ತಾಯಿಸಲು ಈ ತಿಂಗಳ 25ರಂದು ಭಾನುವಾರ ಸಂಜೆ 4 ಗಂಟೆಗೆ ಬಸವನಗುಡಿಯ ನ್ಯಾಷನಲ್‌ ಕಾಲೇಜು ಮೈದಾನದಲ್ಲಿ ಜನಾಗ್ರಹ ಸಭೆ ಏರ್ಪಡಿಸಲಾಗಿದೆ. ಬಹಳಷ್ಟು ಸಾಧುಗಳು ಮತ್ತು ಸಂತರು ಭಾಗವಹಿಸಲಿದ್ದಾರೆ ಎಂದು ವಿಶ್ವ ಹಿಂದೂ ಪರಿಷತ್‌ನ ರಾಷ್ಟ್ರೀಯ ಸಂಘಟನಾ ಮಹಾಮಂತ್ರಿ ಮಿಲಿಂದ ಪರಾನಡೆ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ನಾವು ಸುಪ್ರೀಂ ಕೋರ್ಟ್‌ ಅನ್ನು ಗೌರವಿಸುತ್ತೇವೆ. ಆದರೆ, ಗೌರವ ನೀಡುವುದೆಂದರೆ ನ್ಯಾಯಕ್ಕಾಗಿ ಶಾಶ್ವತವಾಗಿ ಕಾಯುತ್ತಲೇ ಇರುತ್ತೇವೆ ಎಂದಲ್ಲ. ಈ ಪ್ರಕರಣ ಅಕ್ಟೋಬರ್‌ 29ರಂದು ವಿಚಾರಣೆಗೆ ಬಂದಿದ್ದಾಗ ನಾಲ್ಕೈದು ನಿಮಿಷಗಳನ್ನು ಮಾತ್ರ ನೀಡಿದ್ದ ನ್ಯಾಯಮೂರ್ತಿಗಳು, ನಮಗೆ ಇದಕ್ಕಿಂತಲೂ ಪ್ರಮುಖ ಆದ್ಯತೆಗಳಿವೆ ಎಂದು ಹೇಳಿ ಜನವರಿಗೆ ಮುಂದೂಡಿದರು. ಇದರಿಂದ ಹಿಂದೂ ಸಮಾಜಕ್ಕೆ ಅಪಮಾನ ಆದಂತಾಗಿದೆ’ ಎಂದು ಪರಾನಡೆ ಅಸಮಾಧಾನ ವ್ಯಕ್ತಪಡಿಸಿದರು.

ADVERTISEMENT

ನವೆಂಬರ್‌, ಡಿಸೆಂಬರ್‌ ತಿಂಗಳಲ್ಲಿ ಎಲ್ಲ ರಾಜ್ಯಗಳಲ್ಲೂ ರಾಮಮಂದಿರ ನಿರ್ಮಾಣಕ್ಕಾಗಿ ಆಗ್ರಹಿಸಿ ಸಭೆಗಳು ನಡೆಯಲಿವೆ. ರಾಜ್ಯದ ಹುಬ್ಬಳ್ಳಿ ಹಾಗೂ ಮಂಗಳೂರಿನಲ್ಲೂ ಸಭೆ ನಡೆಯಲಿವೆ. ಎಲ್ಲ ತಾಲೂಕು ಮಟ್ಟದಲ್ಲೂ ಇಂತಹದೇ ಸಭೆಗಳನ್ನು ಏರ್ಪಡಿಸಿ ರಾಜ್ಯಪಾಲರಿಗೆ ಮನವಿ ಸಲ್ಲಿಸುವ ಕಾರ್ಯಕ್ರಮವಿದೆ ಎಂದೂ ವಿವರಿಸಿದರು.

‘ನ್ಯಾಯಾಲಯದ ತೀರ್ಪಿಗಾಗಿ ಕಾಯುವುದಿಲ್ಲ ಎಂದಾಕ್ಷಣ ನಾವು ಸಂವಿಧಾನ ವಿರೋಧಿಗಳಲ್ಲ. ಸಂವಿಧಾನದ ಚೌಕಟ್ಟಿನೊಳಗೇ ಮಂದಿರ ನಿರ್ಮಾಣಕ್ಕೆ ಸುಗ್ರೀವಾಜ್ಞೆ ತರಬೇಕೆಂದು ಒತ್ತಾಯಿಸುತ್ತೇವೆ ಎಂದರು.

**

ಟಿಪ್ಪು ಜಯಂತಿಗೆ ವಿರೋಧ

ಕರ್ನಾಟಕ ಸರ್ಕಾರ ಟಿಪ್ಪು ಜಯಂತಿ ಆಚರಿಸುವ ಮೂಲಕ ಹಿಂದೂ ಸಮಾಜಕ್ಕೆ ಅಪಮಾನ ಮಾಡಿದೆ ಎಂದು ಮಿಲಿಂದ ಪರಾನಡೆ ಆಕ್ರೋಶ ವ್ಯಕ್ತಪಡಿಸಿದರು.

ನೂರಾರು ಹಿಂದೂಗಳನ್ನು ಟಿಪ್ಪು ಹತ್ಯೆ ಮಾಡಿದ್ದಾನೆ. ಲೆಕ್ಕವಿಲ್ಲದಷ್ಟು ದೇವಾಲಯಗಳನ್ನು ನೆಲಸಮ ಮಾಡಿದ್ದಾನೆ. ಈತ ಕನ್ನಡ ಭಾಷೆಯ ವಿರೋಧಿಯೂ ಆಗಿದ್ದ ಎಂಬುದಕ್ಕೆ ಬೇಕಾದಷ್ಟುಪುರಾವೆಗಳು ಇವೆ ಎಂದರು.

ಮುಸ್ಲಿಂ ಸಮುದಾಯವನ್ನು ಓಲೈಸಲು ರಾಜ್ಯ ಸರ್ಕಾರ ಟಿಪ್ಪು ಜಯಂತಿ ಆಚರಿಸುತ್ತಿದೆ ಎಂದೂ ಅವರು ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.