ADVERTISEMENT

ಮತ ವಿಭಜನೆಯಿಂದ ಕಡಿಮೆಯಾದ ಗೆಲುವಿನ ಅಂತರ: ಸಚಿವ ಪ್ರಲ್ಹಾದ ಜೋಶಿ

​ಪ್ರಜಾವಾಣಿ ವಾರ್ತೆ
Published 2 ಮೇ 2021, 14:55 IST
Last Updated 2 ಮೇ 2021, 14:55 IST
ಕೇಂದ್ರ ಸಚಿವ ಪ್ರಲ್ಹಾದ ಜೋಶಿ
ಕೇಂದ್ರ ಸಚಿವ ಪ್ರಲ್ಹಾದ ಜೋಶಿ   

ಹುಬ್ಬಳ್ಳಿ: ಮತದಾನದ ಪ್ರಮಾಣ ಕಡಿಮೆಯಾಗಿದ್ದು ಮತ್ತು ಮತಗಳು ವಿಭಜನೆಯಾಗಿದ್ದು ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆಯ ಮೇಲೆ ಪರಿಣಾಮ ಬೀರಿವೆ. ಹೀಗಾಗಿ ನಮ್ಮ ಪಕ್ಷದ ಅಭ್ಯರ್ಥಿಯ ಗೆಲುವಿನ ಅಂತರ ಕಡಿಮೆಯಾಗಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.

ಭಾನುವಾರ ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು ‘ನಮ್ಮ ಪರಂಪರಾಗತ ಮರಾಠರ ಮತಗಳನ್ನು ಎಂಇಎಸ್‌ ವಿಭಜಿಸಿದೆ. ಮುಂದಿನ ದಿನಗಳಲ್ಲಿ ಇದನ್ನು ಸರಿಪಡಿಸುತ್ತೇವೆ. ರೋಚಕ ಹಣಾಹಣಿ ನಡುವೆಯೂ ಬೆಳಗಾವಿಯ ಜನ ನಮ್ಮನ್ನು ಕೈ ಹಿಡಿದಿದ್ದಾರೆ. ಇದು ಕ್ಷೇತ್ರದ ಜನ ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ಇಟ್ಟಿರುವ ವಿಶ್ವಾಸಕ್ಕೆ ಸಾಕ್ಷಿಯಾಗಿದೆ. ನನ್ನ ಅಂದಾಜಿನ ಪ್ರಕಾರ ನಮ್ಮ ಅಭ್ಯರ್ಥಿ 50ರಿಂದ 60 ಸಾವಿರ ಮತಗಳ ಅಂತರದಿಂದ ಗೆಲ್ಲಬೇಕಿತ್ತು’ ಎಂದರು.

‘ಹಿಂದಿನ, ಈಗಿನ ಹಾಗೂ ಮುಂದಿನ ಯಾವ ಉಪ ಚುನಾವಣೆಗಳು ಸಾರ್ವತ್ರಿಕ ಚುನಾವಣೆಗೆ ದಿಕ್ಸೂಚಿಯಲ್ಲ. ಈಗಿನ ಫಲಿತಾಂಶಗಳು ಮುಂದೆ ಯಾವ ಪರಿಣಾಮ ಬೀರುವುದೂ ಇಲ್ಲ. ಈಗಿನ ಫಲಿತಾಂಶದ ಬಗ್ಗೆ ಪಕ್ಷದ ವೇದಿಕೆಯಲ್ಲಿ ವಿಶ್ಲೇಷಣೆ ನಡೆಸುತ್ತೇವೆ’ ಎಂದರು.

ADVERTISEMENT

‘ಬೆಳಗಾವಿ ಲೋಕಸಭಾ ಕ್ಷೇತ್ರದ ಅಭಿವೃದ್ಧಿಗೆ ಏನು ಬೇಕೊ ಅದನ್ನು ಮಂಗಲಾ ಅಂಗಡಿ ಮಾಡುತ್ತಾರೆ. ಕೇಂದ್ರ ಸಚಿವನಾಗಿ ಏನು ನೆರವು ನೀಡಬೇಕು ಅದೆಲ್ಲವನ್ನೂ ನೀಡುವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.