ADVERTISEMENT

‘ವಿಧಾನ ಪರಿಷತ್‌ಗೂ ಸಾಮಾನ್ಯ ಕಾರ್ಯಕರ್ತರು’

ಸಾಮಾಜಿಕ ನ್ಯಾಯಕ್ಕೆ ಬದ್ಧತೆಯ ದ್ಯೋತಕ: ಕಾರಜೋಳ

​ಪ್ರಜಾವಾಣಿ ವಾರ್ತೆ
Published 9 ಜೂನ್ 2020, 21:59 IST
Last Updated 9 ಜೂನ್ 2020, 21:59 IST

ಬಾಗಲಕೋಟೆ: ‘ರಾಜ್ಯಸಭೆಗೆ ಪಕ್ಷದ ಸಾಮಾನ್ಯ ಕಾರ್ಯಕರ್ತರಿಗೆ ಟಿಕೆಟ್ ನೀಡಿರುವ ಸಂಪ್ರದಾಯ, ಮುಂದೆ ವಿಧಾನ ಪರಿಷತ್‌ಗೆ ಆಯ್ಕೆ ಮಾಡುವಾಗಲೂ ಮುಂದುವರಿಯಬಹುದು’ ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದರು.

ಮಂಗಳವಾರ ಇಲ್ಲಿ ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಮೇಲಿನಂತೆ ಪ್ರತಿಕ್ರಿಯಿಸಿದರು.

‘ತಳಮಟ್ಟದ ಕ್ಷೌರಿಕ ಸಮುದಾಯದ ಸಾಮಾನ್ಯ ವ್ಯಕ್ತಿಗೆ ರಾಜ್ಯಸಭೆಗೆ ಅವಕಾಶ ಮಾಡಿಕೊಟ್ಟಿರುವುದು ಸಾಮಾಜಿಕ ನ್ಯಾಯದ ಬಗ್ಗೆ ಬಿಜೆಪಿ ಹೊಂದಿರುವ ಬದ್ಧತೆಯ ದ್ಯೋತಕ’ ಎಂದು ಬಣ್ಣಿಸಿದ ಕಾರಜೋಳ, ‘ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ರಾಜ್ಯದಲ್ಲಿ ಪಕ್ಷದ ಅಧ್ಯಕ್ಷರು, ಮುಖ್ಯಮಂತ್ರಿ ಹಾಗೂ ಪ್ರಮುಖರ ಅಭಿಪ್ರಾಯವನ್ನು ಗಣನೆಗೆ ತೆಗೆದುಕೊಂಡೇ ಹೈಕಮಾಂಡ್ ಮುಂದುವರಿದಿದೆ. ಇದರಲ್ಲಿ ಯಾವುದೇ ಅನುಮಾನ ಬೇಡ’ ಎಂದರು.

ADVERTISEMENT

‘ರಾಜ್ಯ ಘಟಕದಿಂದ ಕಳುಹಿಸಿದ ಪಟ್ಟಿಯಲ್ಲಿ ಹೆಸರು ಇಲ್ಲದವರಿಗೆ ರಾಜ್ಯಸಭೆಗೆ ಟಿಕೆಟ್ ನೀಡಲಾಗಿದೆ ಎಂಬುದೆಲ್ಲಾ ಮಾಧ್ಯಮಗಳ ಸೃಷ್ಟಿ. ನಾವೇನು ನಿಮಗೆ ಪಟ್ಟಿ ತೋರಿಸಿದ್ದೆವೆಯೇ’ ಎಂದು ಪ್ರಶ್ನಿಸಿದರು.

ಜಿಲ್ಲಾ ರಸ್ತೆಗಳು ಮೇಲ್ದರ್ಜೆಗೆ..
ಲೋಕೋಪಯೋಗಿ ಇಲಾಖೆಯಿಂದ ರಾಜ್ಯದಲ್ಲಿ ಈ ವರ್ಷ 18 ಸಾವಿರ ಕಿ.ಮೀ ಹಳ್ಳಿ ರಸ್ತೆಯನ್ನು ಅಭಿವೃದ್ಧಿಪಡಿಸಿ ಜಿಲ್ಲಾ ಮುಖ್ಯರಸ್ತೆಯಾಗಿ ಮೇಲ್ದರ್ಜೆಗೇರಿಸಲು ಸಿದ್ಧತೆ ನಡೆದಿದೆ ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ತಿಳಿಸಿದರು.

10 ಸಾವಿರ ಕಿ.ಮೀ ಜಿಲ್ಲಾ ಮುಖ್ಯರಸ್ತೆಯನ್ನು ರಾಜ್ಯ ಹೆದ್ದಾರಿಯಾಗಿ ಪರಿವರ್ತಿಸಲಾಗುವುದು. ಒಟ್ಟು 28 ಸಾವಿರ ಕಿ.ಮೀ ರಸ್ತೆ ಅಭಿವೃದ್ಧಿಪಡಿಸಲಾಗುತ್ತಿದೆ ಎಂದರು.

ಟ್ರೈನಿ ಎಂಜಿನಿಯರ್‌ ನೇಮಕಕ್ಕೆ ಸಿದ್ಧತೆ: ಲೋಕೋಪಯೋಗಿ ಇಲಾಖೆಯಲ್ಲಿ ಗುತ್ತಿಗೆ ಆಧಾರದ ಮೇಲೆ ಒಂದು ವರ್ಷದ ಅವಧಿಗೆ 1,000 ಮಂದಿ ಟ್ರೈನಿ ಎಂಜಿನಿಯರ್‌ಗಳ ನೇಮಕ ಮಾಡಿಕೊಳ್ಳಲು ಸಿದ್ಧತೆ ನಡೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.