ADVERTISEMENT

ಲಿಂಗಾಯತ ಕಾರ್ಡ್‌ ಬಳಸಿ ವ್ಯವಸ್ಥಿತ ಸಂಚು; ಲಕ್ಷ್ಮಿ ಹೆಬ್ಬಾಳಕರಗೆ ರಮೇಶ ತಿರುಗೇಟು

ಶಾಸಕಿ ಲಕ್ಷ್ಮಿ ಹೆಬ್ಬಾಳಕರಗೆ ರಮೇಶ ತಿರುಗೇಟು l ಒಂದೇ ವೇದಿಕೆಯಲ್ಲಿ ರಮೇಶ, ಲಖನ್ ಪ್ರತ್ಯೇಕವಾಗಿ ಪ್ರಚಾರ!

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2021, 19:45 IST
Last Updated 27 ನವೆಂಬರ್ 2021, 19:45 IST
ರಮೇಶ ಜಾರಕಿಹೊಳಿ
ರಮೇಶ ಜಾರಕಿಹೊಳಿ   

ಬೆಳಗಾವಿ: ‘ನನ್ನ ವಿರುದ್ಧ ವ್ಯವಸ್ಥಿತ ಸಂಚು ನಡೆದಿದೆ. ಲಿಂಗಾಯತ ಸಮಾಜಕ್ಕೆ ಅವಮಾನ ಮಾಡಿದ್ದೇನೆ ಎಂದು ಹಬ್ಬಿಸುತ್ತಿದ್ದಾರೆ’ ಎಂದು ಗೋಕಾಕ ಬಿಜೆಪಿ ಶಾಸಕ ರಮೇಶ ಜಾರಕಿಹೊಳಿ ಅವರು ಕಾಂಗ್ರೆಸ್‌ ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಹೆಸರು ಹೇಳದೆ ಟೀಕಿಸಿದರು.

ತಾಲ್ಲೂಕಿನ ಹಿರೇಬಾಗೇವಾಡಿಯಲ್ಲಿ ‘ಜಾರಕಿಹೊಳಿ ಕುಟುಂಬದ ಬೆಂಬಲಿಗರು’ ದೇಸಾಯಿ ಗಲ್ಲಿಯಲ್ಲಿ ಶನಿವಾರ ಆಯೋಜಿಸಿದ್ದ ವಿಧಾನಪರಿಷತ್ ಚುನಾವಣೆ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.

‘ನಾನು ಬಿಜೆಪಿಯ ಮಹಾಂತೇಶ ಕವಟಗಿಮಠ ಪರ ಮತ ಕೇಳಲು ಬಂದಿದ್ದೇನೆ. 2ನೇ ಅಭ್ಯರ್ಥಿ ಬೆಂಬಲಿಸಲು ಚರ್ಚಿಸುವುದಕ್ಕಾಗಿ ಭಾನುವಾರ ದೆಹಲಿಗೆ ಹೋಗುತ್ತಿದ್ದೇನೆ. ವರಿಷ್ಠರಿಂದ ಅನುಮತಿ ಪಡೆದು ಬಂದು ಬುಧವಾರ ಸ್ಪಷ್ಟ ಸೂಚನೆ ಕೊಡುತ್ತೇನೆ. ಕಾಂಗ್ರೆಸ್‌ ಕೆಡವಲು ಬೇಕಾದ ಎಲ್ಲವನ್ನೂ ವ್ಯವಸ್ಥಿತವಾಗಿ ಮಾಡಿದ್ದೇನೆ’ ಎಂದರು.

ADVERTISEMENT

‘ನಾನು ಜಾತಿ ಮಾಡುವುದಿಲ್ಲ. ಇತ್ತೀಚಿಗೆ ನಡೆದ ಬೆಳಗಾವಿ ಲೋಕಸಭಾ ಮತಕ್ಷೇತ್ರದ ಉಪ ಚುನಾವಣೆಯಲ್ಲಿ ತಮ್ಮ ಸತೀಶ್ ಜಾರಕಿಹೊಳಿ ಸೋಲಿಸಿ, ಲಿಂಗಾಯತ ಸಮುದಾಯದ ಬಿಜೆಪಿ ಅಭ್ಯರ್ಥಿ ಮಂಗಲಾ ಅಂಗಡಿ ಅವರನ್ನು ಗೆಲ್ಲಿಸಿದ್ದು ನಾನೇ. ಆಗ ಜಾತಿ ಎಲ್ಲಿತ್ತು?’ ಎಂದು ಪ್ರಶ್ನಿಸಿದರು.

‘ವಿಧಾನಸಭೆ ಚುನಾವಣೆಯಲ್ಲಿ ಅವರ (ಲಕ್ಷ್ಮಿ ಹೆಬ್ಬಾಳಕರ) ಪರವಾಗಿ ಇಲ್ಲಿಗೆ (ಗ್ರಾಮೀಣ ಕ್ಷೇತ್ರ) ಬಂದು ಮತ ಕೇಳಿ ತಪ್ಪು ಮಾಡಿದ್ದೇನೆ. ಅದಕ್ಕಾಗಿ ಜನರ ಕ್ಷಮೆ ಯಾಚಿಸುತ್ತೇನೆ. ಮುಂದಿನ ದಿನಗಳಲ್ಲಿ ನೀವು ಕೈಗೊಳ್ಳುವ ನಿರ್ಧಾರಕ್ಕೆ ಬದ್ಧವಿರುತ್ತೇನೆ’ ಎಂದು ಹೇಳಿದರು.

ರಮೇಶ ತೆರಳಿದ ಕೆಲ ಹೊತ್ತಿನಲ್ಲೇ ಅಲ್ಲಿಗೆ ಬಂದ ಪಕ್ಷೇತರ ಅಭ್ಯರ್ಥಿ ಲಖನ್ ಜಾರಕಿಹೊಳಿ, ‘ಚುನಾವಣೆ ಬಂದಾಗ ಕಾಲಿಗೆ ಬೀಳುವವರು, ನಂತರ ಕಾಲೆಳೆಯುವವರನ್ನು ನೋಡಿದ್ದೀರಿ. ವೈಯಕ್ತಿಕ ಸಮಸ್ಯೆ ಇರಲಿ ಅಥವಾ ಸ್ಥಳೀಯ ಸಂಸ್ಥೆಗಳ ಅಭಿವೃದ್ಧಿ ವಿಷಯವಿರಲಿ. ನಿಮ್ಮೊಂದಿಗೆ ಸದಾ ಇರುತ್ತೇನೆ’ ಎಂದು ಭರವಸೆ ನೀಡಿದರು.

‘ನಾಮಪತ್ರ ವಾಪಸ್ ಪಡೆಯುತ್ತೇನೆ ಎಂದು ಹಬ್ಬಿಸಿದ್ದರು. ನನಗೆ ಯಾವ ಕಮಾಂಡೂ ಇಲ್ಲ. ಮತದಾರರು–ಕಾರ್ಯಕರ್ತರೇ ಹೈಕಮಾಂಡ್. ಉಹಾಪೋಹ ಹಬ್ಬಿಸುವುದನ್ನೆ ಬಂಡವಾಳ ಮಾಡಿಕೊಂಡಿರುವವರಿಗೆ ಕಿವಿಕೊಡಬೇಡಿ. ಪ್ರಥಮ ಪ್ರಾಶಸ್ತ್ಯದ ಮತ ಕೊಡಬೇಕು. 2ನೇ ಮತದ ಬಗ್ಗೆ ಗುಪ್ತವಾಗಿ ಹೇಳುತ್ತಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.