ADVERTISEMENT

ಪರಿಷತ್‌ ಚುನಾವಣೆ: 30 ಅಭ್ಯರ್ಥಿಗಳು ಕಣದಲ್ಲಿ, ‘ಬಂಡಾಯ’ ಎದ್ದ ಬಿಜೆಪಿಗರು

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2020, 19:31 IST
Last Updated 12 ಅಕ್ಟೋಬರ್ 2020, 19:31 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ವಿಧಾನ ಪರಿಷತ್‌ನ ನಾಲ್ಕು ಸ್ಥಾನಗಳಿಗೆ ನಡೆಯುತ್ತಿರುವ ಚುನಾವಣೆಗೆ ನಾಮಪತ್ರ ಹಿಂಪಡೆಯುವ ಅವಧಿ ಅಂತ್ಯಗೊಂಡಿದ್ದು, ಆಗ್ನೇಯ ಪದವೀಧರರ ಕ್ಷೇತ್ರದಲ್ಲಿ ಹಿರಿಯೂರು ಶಾಸಕಿ ಪೂರ್ಣಿಮಾ ಅವರ ಪತಿ ಡಿ.ಟಿ. ಶ್ರೀನಿವಾಸ್‌ ಸೇರಿದಂತೆ ಬಿಜೆಪಿಯ ಇಬ್ಬರು ಬಂಡಾಯ ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದಾರೆ.

ಆಗ್ನೇಯ ಪದವೀಧರರ ಕ್ಷೇತ್ರದಲ್ಲಿ ಬಿಜೆಪಿಯಿಂದ ಚಿದಾನಂದ ಎಂ., ಜೆಡಿಎಸ್‌ನಿಂದ ಪರಿಷತ್ತಿನ ಮಾಜಿ ಸದಸ್ಯ ಆರ್‌. ಚೌಡರೆಡ್ಡಿ ತೂಪಲ್ಲಿ, ಕಾಂಗ್ರೆಸ್‌ನಿಂದ ಪರಿಷತ್ತಿನ ಮಾಜಿ ಸದಸ್ಯ ರಮೇಶ್‌ ಬಾಬು ಸೇರಿದಂತೆ 15 ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದಾರೆ. 18 ಮಂದಿ ನಾಮಪತ್ರ ಸಲ್ಲಿಸಿದ್ದು, ಮೂವರು ವಾಪಸ್‌ ಪ‍ಡೆದಿದ್ದಾರೆ. ಶಾಸಕಿಯ ಪತಿ ಶ್ರೀನಿವಾಸ್‌ ಮತ್ತು ತುಮಕೂರಿನ ಬಿಜೆಪಿ ಮುಖಂಡ ಎಚ್‌.ಎಸ್‌. ಲೇಪಾಕ್ಷ್ ಅವರು ಬಂಡಾಯ ಅಭ್ಯರ್ಥಿಗಳಾಗಿ ಚುನಾವಣಾ ಕಣದಲ್ಲಿ ಉಳಿದಿದ್ದಾರೆ.

ಬೆಂಗಳೂರು ಶಿಕ್ಷಕರ ಕ್ಷೇತ್ರದಲ್ಲಿ ಬಿಜೆಪಿಯಿಂದ ಪರಿಷತ್‌ನ ಮಾಜಿ ಸದಸ್ಯ ಪುಟ್ಟಣ್ಣ, ಕಾಂಗ್ರೆಸ್‌ನಿಂದ ಆರ್‌. ಪ್ರವೀಣ್‌ ಕುಮಾರ್, ಜೆಡಿಎಸ್‌ನಿಂದ ಎ.ಪಿ. ರಂಗನಾಥ್‌ ಸೇರಿದಂತೆ 9 ಮಂದಿ ಕಣದಲ್ಲಿ ಉಳಿದಿದ್ದಾರೆ. ಈ ಕ್ಷೇತ್ರದಲ್ಲಿ
11 ಮಂದಿಯ ನಾಮಪತ್ರಗಳು ಅಂಗೀಕೃತವಾಗಿದ್ದವು. ಇಬ್ಬರು ಉಮೇದುವಾರಿಕೆ ವಾಪಸ್‌ ಪಡೆದಿದ್ದಾರೆ.

ADVERTISEMENT

ಈಶಾನ್ಯ ಶಿಕ್ಷಕರ ಕ್ಷೇತ್ರದಲ್ಲಿ ಬಿಜೆಪಿಯಿಂದ ಪರಿಷತ್ತಿನ ಮಾಜಿ ಸದಸ್ಯ ಶಶಿಲ್‌ ಜಿ. ನಮೋಶಿ, ಕಾಂಗ್ರೆಸ್‌ನಿಂದ ಪರಿಷತ್ತಿನ ಮಾಜಿ ಸದಸ್ಯ ಶರಣಪ್ಪ ಮಟ್ಟೂರು, ಜೆಡಿಎಸ್‌ನಿಂದ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘದ ಮಾಜಿ ಅಧ್ಯಕ್ಷ ತಿಮ್ಮಯ್ಯ ಪುರ್ಲೆ ಸೇರಿದಂತೆ ಐವರು ಕಣದಲ್ಲಿದ್ದಾರೆ.

ಪಶ್ಚಿಮ ಪದವೀಧರರ ಕ್ಷೇತ್ರದಲ್ಲಿ ಬಿಜೆಪಿಯಿಂದ ಮಾಜಿ ಸದಸ್ಯ ಪ್ರೊ.ಎಸ್‌.ವಿ. ಸಂಕನೂರ, ಕಾಂಗ್ರೆಸ್‌ನಿಂದ ಕುಬೇರಪ್ಪ, ಜೆಡಿಎಸ್‌ನಿಂದ ಧಾರವಾಡದ ಅಣ್ಣಿಗೇರಿಯ ವಕೀಲ ಶಿವಶಂಕರ್‌ ಕಲ್ಲೂರ್‌ ಸೇರಿದಂತೆ 11 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿ ಉಳಿದಿದ್ದಾರೆ ಎಂದು ಮುಖ್ಯ ಚುನಾವಣಾಧಿಕಾರಿ ಕಚೇರಿಯ ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.