ADVERTISEMENT

ಕ್ರೀಡೆಗೆ ಅನುದಾನ ಹಂಚಿಕೆ ಕ್ರಮ ಬದಲಿಸಿ: ಕೆ. ಗೋವಿಂದರಾಜು

ವಿಧಾನ ಪರಿಷತ್‌ ವಿರೋಧ ಪಕ್ಷದ ಉಪ ನಾಯಕ ಕೆ. ಗೋವಿಂದರಾಜು

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2022, 15:56 IST
Last Updated 11 ಮಾರ್ಚ್ 2022, 15:56 IST
ಕೆ. ಗೋವಿಂದರಾಜು
ಕೆ. ಗೋವಿಂದರಾಜು   

ಬೆಂಗಳೂರು: ‘ರಾಜ್ಯದಲ್ಲಿ ಒಳ್ಳೆಯ ಕ್ರೀಡಾಪಟುಗಳು ತಯಾರಾಗಬೇಕಿದ್ದರೆ ಮೊದಲು ಬಜೆಟ್‌ನಲ್ಲಿ ಕ್ರೀಡಾ ಕ್ಷೇತ್ರದ ಅನುದಾನ ಹಂಚಿಕೆ ಕ್ರಮ ಬದಲಿಸಿ. ಎಲ್ಲ ಜಿಲ್ಲೆಗಳಿಗೂ ಬಿಡಿಗಾಸು ಹಂಚುವ ಬದಲಿಗೆ ವಿಭಾಗವಾರು ಕ್ರೀಡಾ ಮೂಲಸೌಕರ್ಯ ಅಭಿವೃದ್ಧಿ ಯೋಜನೆ ರೂಪಿಸಿ’ ಎಂದು ವಿಧಾನ ಪರಿಷತ್‌ನ ವಿರೋಧ ಪಕ್ಷದ ಉಪ ನಾಯಕ ಕೆ. ಗೋವಿಂದರಾಜು ಒತ್ತಾಯಿಸಿದರು.

ಬಜೆಟ್‌ ಮೇಲಿನ ಚರ್ಚೆಯಲ್ಲಿ ಶನಿವಾರ ಭಾಗವಹಿಸಿ ಮಾತನಾಡಿದ ಅವರು, ‘ಪ್ರತಿ ವರ್ಷವೂ ₹ 300 ಕೋಟಿಯಿಂದ ₹ 400 ಕೋಟಿಯನ್ನು ವೆಚ್ಚ ಮಾಡಿ ಒಂದೇ ಸ್ಥಳದಲ್ಲಿ ಸಮಗ್ರ ಕ್ರೀಡಾ ಮೂಲಸೌಕರ್ಯ ಅಭಿವೃದ್ಧಿಪಡಿಸಬೇಕು. ವಿಭಾಗವಾರು ಒಂದೊಂದು ಕೇಂದ್ರಗಳಲ್ಲಿ ಇಂತಹ ಸೌಕರ್ಯ ಲಭಿಸಿದರೆ ನಮ್ಮ ರಾಜ್ಯದಲ್ಲೂ ಅಂತರರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳು ಸಜ್ಜುಗೊಳ್ಳುತ್ತಾರೆ’ ಎಂದರು.

ಕ್ರೀಡಾ ಕ್ಷೇತ್ರಕ್ಕೆ ಈಗ ವಾರ್ಷಿಕ ₹ 500 ಕೋಟಿ ಅನುದಾನ ಒದಗಿಸಲಾಗುತ್ತಿದೆ. ಅದನ್ನು ಕನಿಷ್ಠ ₹ 1,000 ಕೋಟಿಗೆ ಹೆಚ್ಚಿಸಬೇಕು. ಕ್ರೀಡಾ ಸೆಸ್‌ ವಿಧಿಸುವ ಮೂಲಕ ವರಮಾನ ಸಂಗ್ರಹಿಸಬೇಕು. ಕಾರ್ಪೋರೇಟ್‌ ಕಂಪನಿಗಳ ನೆರವಿನಲ್ಲಿ ಕ್ರೀಡಾ ಮೂಲಸೌಕರ್ಯ ಅಭಿವೃದ್ಧಿಪಡಿಸಬೇಕು ಎಂದು ಸಲಹೆ ನೀಡಿದರು.

ADVERTISEMENT

ವಿತ್ತೀಯ ಕುಸಿತದ ಆತಂಕ: ಜೆಡಿಎಸ್‌ನ ಕೆ.ಎ. ತಿಪ್ಪೇಸ್ವಾಮಿ ಮಾತನಾಡಿ, ‘ಆರ್ಥಿಕ ಶಿಸ್ತು ಕಾಯ್ದುಕೊಂಡ ರಾಜ್ಯಗಳಲ್ಲಿ ಕರ್ನಾಟಕ ಅಗ್ರ ಸ್ಥಾನದಲ್ಲಿತ್ತು. ಆದರೆ, ಇತ್ತೀಚಿನ ವರ್ಷಗಳಲ್ಲಿ ಸಾಲದ ಪ್ರಮಾಣ ಹೆಚ್ಚುತ್ತಿದೆ. ಇದರಿಂದಾಗಿ ರಾಜ್ಯವು ವಿತ್ತೀಯ ಶಿಸ್ತು ಕಾಯ್ದುಕೊಳ್ಳುವಲ್ಲಿ ವಿಫಲವಾಗುವ ಆತಂಕವಿದೆ’ ಎಂದರು.

ಮಠಗಳಿಗೆ ಹಣ ಕೊಡುವುದು ನಿಲ್ಲಬೇಕು. ಸಾಲದ ಪ್ರಮಾಣವನ್ನು ಕಡಿಮೆ ಮಾಡಿ, ವಿತ್ತೀಯ ಶಿಸ್ತು ಕಾಪಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಬಿಜೆಪಿಯ ರುದ್ರೇಗೌಡ ಮಾತನಾಡಿ, ‘ರಾಜ್ಯದಲ್ಲಿ ಕೈಗಾರಿಕಾ ಮೂಲಸೌಕರ್ಯ ಅಭಿವೃದ್ಧಿಗೆ ಆದ್ಯತೆ ನೀಡುತ್ತಿಲ್ಲ. ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಯನ್ನು ಪುನಶ್ಚೇತನಗೊಳಿಸಬೇಕು. ಅದರ ಮೂಲಕ ಹೊಸ ಕೈಗಾರಿಕೆಗಳ ಸ್ಥಾಪನೆಗೆ ಉತ್ತೇಜನ ನೀಡುವ ಕೆಲಸ ಆಗಬೇಕು’ ಎಂದರು.

‘ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ರಾಜ್ಯ ಸರ್ಕಾರದ ಪಾಲಿಗೆ ಬಿಳಿಯಾನೆಯಂತೆ ಆಗಿದೆ. ಅದರಿಂದ ರಾಜ್ಯದ ಉದ್ಯಮಿಗಳಿಗೆ ಅನುಕೂಲ ಆಗುತ್ತಿಲ್ಲ. ಕೈಗಾರಿಕಾ ಜಮೀನು ಹೊರ ರಾಜ್ಯದವರಿಗೆ ಬೇಗ ಹಂಚಿಕೆ ಆಗುತ್ತದೆ. ರಾಜ್ಯದವರನ್ನು ಕೇಳುವವರೇ ಇಲ್ಲ. ಕೆಐಎಡಿಬಿಗೆ ದೊಡ್ಡ ಶಸ್ತ್ರಚಿಕಿತ್ಸೆ ಅಗತ್ಯ’ ಎಂದು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.