‘ಎಂಟೈರ್ ಪೊಲಿಟಿಕಲ್ ಸೈನ್ಸ್ ಅಲ್ಲ’
‘ಗ್ರೇಟರ್ ಬೆಂಗಳೂರು ಆಡಳಿತ ತಿದ್ದುಪಡಿ’ ಮಸೂದೆಯ ಕುರಿತು ವಿಧಾನಸಭೆಯಲ್ಲಿ ಚರ್ಚೆ ನಡೆಯುವಾಗ ವಿರೋಧ ಪಕ್ಷಗಳ ಸದಸ್ಯರು, ಬೆಂಗಳೂರು ವಿಭಜನೆಯು ಸಂವಿಧಾನದ ಆಶಯಗಳಿಗೆ ಪೂರಕವಾಗಿಲ್ಲ. ಅವರ ನಾಯಕ ರಾಜೀವ್ ಗಾಂಧಿ ತಂದ ಸಂವಿಧಾನದ 73, 74ನೇ ತಿದ್ದುಪಡಿಗೆ ವಿರುದ್ಧವಾಗಿದೆ ಎಂದು ಟೀಕಿಸಿದರು.
ಅದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ‘ಜಿಲ್ಲಾ ಪಂಚಾಯಿತಿ ಸದಸ್ಯನಾಗಿ ನಾನು ರಾಜಕೀಯ ಆರಂಭಿಸಿದೆ. ಸ್ಥಳೀಯ ಸಂಸ್ಥೆಗಳ ಬಗ್ಗೆ ವಿಶೇಷ ಆಸಕ್ತಿ ಇಟ್ಟುಕೊಂಡಿದ್ದೇನೆ. 45ನೇ ವಯಸ್ಸಿನಲ್ಲಿ ರಾಜ್ಯಶಾಸ್ತ್ರದಲ್ಲಿ ಎಂ.ಎ ವ್ಯಾಸಂಗ ಮಾಡಿ, ಅತಿ ಹೆಚ್ಚು ಅಂಕ ಪಡೆದಿದ್ದೆ. ರಾಜೀವ್ ಅವರ ಆಶಯಗಳಿಗೆ ಅನುಗುಣವಾಗಿಯೇ ಬಿಬಿಎಂಪಿ ಅಧಿಕಾರ ವಿಕೇಂದ್ರೀಕರಣ ಮಾಡಲಾಗಿದೆ’ ಎಂದರು.
ಆಗ ಮಧ್ಯ ಪ್ರವೇಶಿಸಿದ ಬಿಜೆಪಿಯ ಎಸ್.ಸುರೇಶ್‌ಕುಮಾರ್, ರಾಜ್ಯಶಾಸ್ತ್ರದಲ್ಲಿ ಎಷ್ಟು ಅಂಕ ಪಡೆದಿದ್ದೀರಿ ಎಂಬುದು ಗೊತ್ತಿಲ್ಲ. ಆದರೆ, ಅನ್ವಯಿಕ ರಾಜ್ಯಶಾಸ್ತ್ರದಲ್ಲಿ 100ಕ್ಕೆ 200 ಅಂಕ ಪಡೆದಿದ್ದೀರಿ ಎಂದು ಕಾಲೆಳೆದರು. ಅದಕ್ಕೆ ಶಿವಕುಮಾರ್, ‘ಹೌದು, ನಾನು ಓದಿದ್ದು ಪೊಲಿಟಿಕಲ್ ಸೈನ್ಸ್ ಆದರೆ, ಎಂಟೈರ್ ಪೊಲಿಟಿಕಲ್ ಸೈನ್ಸ್’ ಅಲ್ಲ ಎಂದು ಛೇಡಿಸಿದರು.
.........
ನಾವು ‘ನಾನ್ ಅಡ್ಜೆಸ್ಟ್‌ಮೆಂಟ್ ವಿರೋಧ ಪಕ್ಷ’
‘ನಾವು ಮೂರು ಮಂದಿ ನಾನ್ ಅಡ್ಜೆಸ್ಟ್‌ಮೆಂಟ್ ವಿರೋಧ ಪಕ್ಷದವರು. ನಮಗೆ ಮುಂದೆ ಕುಳಿತುಕೊಳ್ಳಲು ಅವಕಾಶ ಕೊಡಿ’ ಎಂದು ಬಿಜೆಪಿಯಿಂದ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ ಯತ್ನಾಳ ಬೇಡಿಕೆ ಇಟ್ಟರು.
ವಿಧಾನಸಭೆಯಲ್ಲಿ ಸದನದಲ್ಲಿ ಸೀಟು ಹಂಚಿಕೆ ವಿಚಾರವಾಗಿ ಸಭಾಧ್ಯಕ್ಷ ಯು.ಟಿ. ಖಾದರ್ ಬಳಿ ಈ ಬೇಡಿಕೆ ಇಟ್ಟ ಯತ್ನಾಳ, ‘ನಾನು, ಶಿವರಾಮ್ ಹೆಬ್ಬಾರ್, ಎಸ್.ಟಿ. ಸೋಮಶೇಖರ್ ಹಿರಿಯ ಶಾಸಕರು. ನಾನು ಆರು ಬಾರಿ, ಸೋಮಶೇಖರ್ ನಾಲ್ಕು, ಹೆಬ್ಬಾರ್ ನಾಲ್ಕು ಬಾರಿ ಆಯ್ಕೆಯಾಗಿದ್ದೇವೆ’ ಎಂದರು.
‘ಸದನದಲ್ಲಿ ನನಗೆ 224 ಸೀಟ್ ನಂಬರ್ ನೀಡಿದ್ದಾರೆ. ಸೋಮಶೇಖರ್ ಮತ್ತು ಹೆಬ್ಬಾರ್ ಅವರಿಗೆ 225, 226ನೇ ನಂಬರ್ ಸೀಟು ನೀಡಿದ್ದಾರೆ. ಆದರೆ, ಸದಸ್ಯರ ಸಂಖ್ಯೆ ಇರೋದೆ 224. ಹೀಗಿರುವಾಗ 225, 226 ಸೀಟು ಬೋಗಸ್ ಆಯ್ತಲ್ಲವೇ’ ಎಂದೂ ಪ್ರಶ್ನಿಸಿದರು.
‘ಜನಾರ್ದನ ರೆಡ್ಡಿ ಅವರು ತಮ್ಮ ಪಕ್ಷವನ್ನು ಬಿಜೆಪಿಯಲ್ಲಿ ವಿಲೀನ ಮಾಡಿದ್ದರೂ ಅವರಿಗೆ ಪ್ರತ್ಯೇಕ ಸ್ಥಾನ ಎಂದು ಕಾರ್ಯದರ್ಶಿ ಹೇಳುತ್ತಾರೆ. ನೀವು ನಮಗೆ ಮುಂದಿನ ಆಸನ ಕೊಡಿ’ ಎಂದೂ ಮಾತು ಸೇರಿಸಿದರು.
ಪ್ರತಿಕ್ರಿಯಿಸಿದ ಸಭಾಧ್ಯಕ್ಷರು, ಈ ಬಗ್ಗೆ ಪರಿಶೀಲನೆ ನಡೆಸುವುದಾಗಿ ಹೇಳಿದರು.
‘ಸಕ್ಕರೆಗಿಂತ ಅಪಾಯಕಾರಿ ಸಚಿವ’
ವಿಧಾನ ಪರಿಷತ್ತಿನ ವಿರೋಧ ಪಕ್ಷದ ಮುಖ್ಯ ಸಚೇತಕ ಎನ್.ರವಿಕುಮಾರ್ ಅವರು ಪ್ರಶ್ನೋತ್ತರ ವೇಳೆಯಲ್ಲಿ ಸಕ್ಕರೆ ಕಾರ್ಖಾನೆಗಳ ಸ್ಥಿತಿಗತಿ ಬಗ್ಗೆ ಪ್ರಶ್ನಿಸಿ, ‘ಕಬ್ಬು ಸಚಿವರು ಉತ್ತರಿಸಬೇಕು’ ಎಂದು ಸಚಿವ ಶಿವಾನಂದ ಪಾಟೀಲ ಅವರತ್ತ ನೋಡಿದರು. ಆಗ ಸಭಾಪತಿ ಬಸವರಾಜ ಹೊರಟ್ಟಿ, ‘ನೀವು ಅವರನ್ನು ಕಬ್ಬು ಸಚಿವರು ಎಂದು ಕರೆದರೋ ಅಥವಾ ಕೊಬ್ಬು ಸಚಿವರು ಎಂದು ಕರೆದರೋ’ ಎಂದು ಛೇಡಿಸಿದರು.
ಆಗ ರವಿಕುಮಾರ್, ‘ಅವರು ಬಹಳ ಒಳ್ಳೆಯವರು. ಅವರು ಸಕ್ಕರೆಯಂತಹ ಸಚಿವರು. ಸಕ್ಕರೆಗಿಂತಲೂ ಸಿಹಿಯಾದ ಸಚಿವರು’ ಎಂದರು. ಸಿ.ಟಿ.ರವಿ ಅವರು ಎದ್ದುನಿಂತು, ‘ಸಕ್ಕರೆಗಿಂತಲೂ ಸಿಹಿಯಾದವರು ಎಂದರೆ ಡೇಂಜರ್ ಎಂದರ್ಥ. ಅವರು ಸಕ್ಕರೆಗಿಂತಲೂ ಅಪಾಯಕಾರಿ ಸಚಿವರು’ ಎಂದು ಕಾಲೆಳೆದರು.
ಬಾಗಲಕೋಟೆ ಸಕ್ಕರೆ ಕಾರ್ಖಾನೆಯ ಗುತ್ತಿಗೆ ಬಗ್ಗೆ ರವಿಕುಮಾರ್ ಅವರು ಎತ್ತಿದ ತಕರಾರಿಗೆ ಉತ್ತರಿಸಿದ ಸಚಿವರು, ‘ನಿಮ್ಮ ಸರ್ಕಾರವು ಆ ಕಾರ್ಖಾನೆಯನ್ನು 40 ವರ್ಷಗಳಿಗೆ ₹320 ಕೋಟಿಗೆ ಗುತ್ತಿಗೆ ನೀಡಲು ಹೊರಟಿತ್ತು. ನಮ್ಮ ಸರ್ಕಾರವು ಅದೇ ಕಾರ್ಖಾನೆಯನ್ನು 30 ವರ್ಷಗಳಿಗೆ ಒಟ್ಟು ₹475 ಕೋಟಿಗೆ ಗುತ್ತಿಗೆ ನೀಡಿದೆ’ ಎಂದು ಕುಟುಕಿದರು.
–––––––
‘ನನ್ನ ಮಗಳಿಗಿನ್ನೂ ಮದುವೆಯಾಗಿಲ್ಲ’
ಮುದಗಲ್ ಪಟ್ಟಣಕ್ಕೆ ಕುಡಿಯುವ ನೀರಿನ ಸಂಪರ್ಕ ಕಲ್ಪಿಸುವ ಕಾಮಗಾರಿ ವಿಳಂಬವಾಗುತ್ತಿರುವ ಬಗ್ಗೆ ಕಾಂಗ್ರೆಸ್‌ನ ಶರಣಗೌಡ ಬಯ್ಯಾಪುರ ಅವರು ವಿಧಾನ ಪರಿಷತ್ತಿನ ಪ್ರಶ್ನೋತ್ತರದಲ್ಲಿ ಚಕಾರ ಎತ್ತಿದರು.
ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಅವರು, ‘ಮುದಗಲ್ ಪಟ್ಟಣಕ್ಕೆ ಕುಡಿಯುವ ನೀರು ಯೋಜನೆ ಕಾಮಗಾರಿ ನಡೆಸಲು, ಪುರಸಭೆಯಲ್ಲಿ ಹಣ ಇರಲಿಲ್ಲ. ರಾಜ್ಯ ಸರ್ಕಾರವು ತನ್ನ ಪಾಲಿನ ಹಣ ಒದಗಿಸಿದರೂ ಗುತ್ತಿಗೆದಾರ ಕಾಮಗಾರಿ ಪೂರ್ಣಗೊಳಿಸಲಿಲ್ಲ. ನಷ್ಟದ ಹಣವನ್ನು ಗುತ್ತಿಗೆದಾರನಿಂದ ವಸೂಲಿ ಮಾಡಿ, ಉಳಿಕೆ ಹಣವನ್ನು ಒದಗಿಸಿಕೊಂಡು ಕಾಮಗಾರಿ ಆರಂಭಿಸುತ್ತೇವೆ’ ಎಂದು ಉತ್ತರಿಸಿದರು.
ಇದರಿಂದ ಸಮಾಧಾನಗೊಳ್ಳದ ಶರಣಗೌಡ ಅವರು, ‘ಸರ್ಕಾರದಿಂದಲೇ ಪೂರ್ಣ ಹಣ ಒದಗಿಸಿ, ಕುಡಿಯುವ ನೀರಿನ ಸಂಪರ್ಕ ಕಲ್ಪಿಸಿ. ಮುದಗಲ್‌ನಲ್ಲಿ ನಿಮ್ಮ ಪ್ರತಿಮೆ ಮಾಡಿಸಿ, ಹಾಲಿನ ಅಭಿಷೇಕ ಮಾಡಿಸುತ್ತೇನೆ’ ಎಂದರು. ಬಿಜೆಪಿಯ ಭಾರತಿ ಶೆಟ್ಟಿ, ‘ಬದುಕಿರುವವರಿಗೆ ಪ್ರತಿಮೆ ಮಾಡಿಸುತ್ತಾರೆಯೇ’ ಎಂದು ಆಕ್ಷೇಪಿಸಿದರು.
ಆಗ ಸಚಿವ ಸುರೇಶ್, ‘ನಮ್ಮ ಕಡೆ ಫೋಟೊಗೆ, ಪ್ರತಿಮೆಗೆ ಹಾರ ಹಾಕುವುದು ಮತ್ತು ಹಾಲು ಹಾಕುವುದು ಎಂದರೆ ಬೇರೆ ಅರ್ಥವಿದೆ. ನನಗಷ್ಟು ವಯಸ್ಸಾಗಿಲ್ಲ. ನನ್ನ ಮಗಳಿಗಿನ್ನೂ ಮದುವೆಯಾಗಿಲ್ಲ, ಮದುವೆ ಮುಗಿಸಿಬಿಡುತ್ತೇನೆ’ ಎಂದರು.
==
‘ಹೊರಟ್ಟಿ ಅವರನ್ನು ಮೊದಲ ಬಾರಿಗೆ ಸೋಲಿಸಿದ್ದೇವೆ’
‘ಎಂಟು ಬಾರಿ ಗೆದ್ದು ಈವರೆಗೂ ಸೋಲರಿಯದ ಸಭಾಪತಿ ಬಸವರಾಜ ಹೊರಟ್ಟಿಯವರನ್ನು ಮೊದಲ ಬಾರಿಗೆ ನಾವಿಲ್ಲಿ ಸೋಲಿಸಿದ್ದೇವೆ’ ಎಂದು ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.
ಬಸವರಾಜ ಹೊರಟ್ಟಿ ಅವರು ವಿಧಾನ ಪರಿಷತ್ ಸದಸ್ಯರಾಗಿ 45 ವರ್ಷ ಪೂರೈಸಿದ್ದಕ್ಕೆ ಅಭಿನಂದನೆ ಸಲ್ಲಿಸಿದ ಸಂದರ್ಭದಲ್ಲಿ ಅವರು ಮಾತನಾಡಿದರು.
‘ಕಾಂಗ್ರೆಸ್‌ನ ಎಂ. ನಾಗರಾಜು ಅವರು ನಿಮಗೆ ಅಭಿನಂದನೆ ಸಲ್ಲಿಸುವಾಗ ಅವರು ಯಾವಾಗ ಮಾತು ನಿಲ್ಲಿಸುತ್ತಾರೋ ಎಂದು ನಮಗೆಲ್ಲ ಅನ್ನಿಸಿತು. ಆದರೆ, ಅಭಿಮಾನ, ವಿಶ್ವಾಸಕ್ಕೆ ಕಟ್ಟುಬಿದ್ದು ಅವರಿಗೆ ಮಾತನಾಡಲು ಬಿಟ್ಟಿರಿ. ಅದೇ ರೀತಿ ಹಲವು ಸದಸ್ಯರು ಮಾತನಾಡುವಾಗ ಅದನ್ನು ನಿಲ್ಲಿಸಲು ಬೆಲ್ ಹೊಡೆಯದ ಹಾಗೆ ನಿಮ್ಮನ್ನು ಕಟ್ಟಿಹಾಕಿದ್ದು ನಿಮ್ಮ ಸೋಲಾಗಿದೆ’ ಎಂದು ಮಧು ಬಂಗಾರಪ್ಪ ಹೇಳಿದರು. ‘ನಾವು ಗೆದ್ದೆವು, ಅವರು ಸೋತರು’ ಎಂದು ಬಿಜೆಪಿಯ ರವಿಕುಮಾರ್ ಧ್ವನಿಗೂಡಿಸಿದರು.
=
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.