ಹುಕ್ಕೇರಿ (ಬೆಳಗಾವಿ): ‘ಬಿಜೆಪಿ ಶಿಸ್ತಿನ ಪಕ್ಷವಂತೆ, ಖಡಕ್ ಸಂದೇಶ ಕೊಡ್ತಾರಂತೆ. ಇಲ್ಲಿಂದ ಅಲ್ಲಿಗೆ ಹೋದವರು ಹೈಕಮಾಂಡ್‌ಗೆ ಹೆದರಸ್ತಾರೋ ಅಥವಾ ಹೈಕಮಾಂಡ್ ಇವರನ್ನು ಹೆದರಸ್ತದೋ ದೇವರೆ ಬಲ್ಲ’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಲೇವಡಿ ಮಾಡಿದರು.
ಪಟ್ಟಣದ ರವದಿ ಫಾರ್ಮ್‌ಹೌಸ್ ನಲ್ಲಿ ಬುಧವಾರ ನಡೆದ ‘ಸ್ಥಳೀಯ ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳ’ ಸಭೆಯಲ್ಲಿ ಅವರು ಮಾತನಾಡಿ, ‘ಕಳೆದ ಬಾರಿ ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡ ವೀರಕುಮಾರ ಪಾಟೀಲ ಅವರ ಅಲ್ಪ ಅಂತರದ ಸೋಲಿಗೆ ನಮ್ಮವರೇ ಕಾರಣರಾದರು. ನಮ್ಮ ಅಭ್ಯರ್ಥಿ ಸೋಲಿಸಿದವರು ಈಗ ಕಾಂಗ್ರೆಸ್ ಪಕ್ಷದಲ್ಲಿ ಇಲ್ಲ. ಅವರು ಬಿಜೆಪಿಗೆ ಹೋಗಿದ್ದಾರೆ’ ಎಂದು ಯಾರ ಹೆಸರನ್ನೂ ಪ್ರಸ್ತಾಪಿಸದೇ ಮಾರ್ಮಿಕವಾಗಿ ಹೇಳಿದರು.
‘ನಮ್ಮಲ್ಲಿಂದ ಹೋದವರಿಗೆ ಜನರ ಅಭಿವೃದ್ಧಿ ಬೇಕಿಲ್ಲ. ಅವರಿಗೆ ರಾಜಕಾರಣ ಮುಖ್ಯ. ಹೇಗಾದರೂ ಮಾಡಿ ಮಂತ್ರಿಯಾಗಬೇಕಿದೆ’ ಎಂದು ರಮೇಶ್ ಜಾರಕಿಹೊಳಿ ಹೆಸರು ಹೇಳದೇ ಕುಟುಕಿದರು.
‘ಪಕ್ಷೇತರ ಅಭ್ಯರ್ಥಿಗಳು ನಾಟಕ ಕಂಪನಿ ಇದ್ದಂಗ. ಅವರು, ಇವರೂ ಸೇರಿ ನಿಮಗೆ ಹಣ ಕೊಡಲು ಬರುವರು. ಆ ಹಣದಿಂದ ಬದುಕಲು ಆಗಲ್ಲ ಎಂಬುದನ್ನು ನೀವು ಅರಿತು, ಅವರಿಗೆ ತಕ್ಕ ಪಾಠ ಕಲಿಸಿ’ ಎಂದು ಸಲಹೆ ನೀಡಿದರು.
‘ಈ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆ ಮಾಡಿ 2023ರ ವಿಧಾನಸಭಾ ಚುನಾವಣೆಗೆ ದಿಕ್ಸೂಚಿ ಆಗುವಂತೆ ಮಾಡಬೇಕು’ ಎಂದರು.
ನಮ್ಮಲ್ಲಿದ್ದ ಹನುಮಂತ ಈಗ ಬಿಜೆಪಿಯಲ್ಲಿ...
ನಿಪ್ಪಾಣಿ: ‘ಹಿಂದಿನ ಚುನಾವಣೆ ಸಂದರ್ಭದಲ್ಲಿ ನಮ್ಮ ಪಕ್ಷದಲ್ಲಿ ಹನುಮಂತನಿದ್ದ. ಆತ ಲಂಕೆಯೊಳಗೆ ತನ್ನ ಬಾಲಕ್ಕೆ ಹಚ್ಚಿದ ಬೆಂಕಿಯಿಂದ ಲಂಕಾದಹನ ಮಾಡಿದಂತೆ ಈತನೂ ಕಾಂಗ್ರೆಸ್ ಪಕ್ಷ ಸುಟ್ಟು ಬೂದಿ ಮಾಡಿದ. ಅದರಿಂದ ನಮ್ಮ ಪಕ್ಷಕ್ಕೆ ಕೆಟ್ಟ ಹೆಸರು ಬಂತು. ಆದರೆ ಈಗ ಆ ಹನುಮಂತ ನಮ್ಮ ಪಕ್ಷದಲ್ಲಿಲ್ಲ; ಬಿಜೆಪಿಯ ಮರ ಹತ್ತಿ ಕುಳಿತಿದ್ದಾನೆ. ಬಿಜೆಪಿ ಗತಿ ಏನಾಗಲಿದೆಯೇನೋ? ಆತ ಮತ್ತಾರು ಅಲ್ಲ, ನನ್ನ ಸಹೋದರ ರಮೇಶ ಜಾರಕಿಹೊಳಿ’ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಇಲ್ಲಿ ಲೇವಡಿ ಮಾಡಿದರು.
ಮರಾಠಾ ಮಂಡಳದಲ್ಲಿ ತಾಲ್ಲೂಕು ಮತಕ್ಷೇತ್ರ ವ್ಯಾಪ್ತಿಯ ಕಾಂಗ್ರೆಸ್ ಪಕ್ಷದ ಪದಾಧಿಕಾರಿಗಳ, ಕಾರ್ಯಕರ್ತರ ಹಾಗೂ ಸ್ಥಳೀಯ ಸಂಸ್ಥೆಗಳ ಸದಸ್ಯರ ಸಮಾವೇಶದಲ್ಲಿ ಅವರು ಮಾತನಾಡಿದರು. ‘ಕಳೆದ ಬಾರಿ ನಮ್ಮ ಪಕ್ಷದ ವೀರಕುಮಾರ ಪಾಟೀಲ ಅವರನ್ನು ಆತ ಸೋಲಿಸಿದಂತೆ ಈ ಬಾರಿ ಬಿಜೆಪಿಯ ಮಹಾಂತೇಶ ಕವಟಗಿಮಠರ ಪರಿಸ್ಥಿತಿ ಆಗಲಿದೆಯೇನೋ...ಕಾದು ನೋಡಬೇಕಾಗಿದೆ’ ಎಂದು ಟಾಂಗ್ ಕೊಟ್ಟರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.