ADVERTISEMENT

ನನ್ನ ಸೋಲಿಸಿದವರಿಗೆ ಪಾಠ ಕಲಿಸಿ: ದೇವೇಗೌಡ

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2021, 20:15 IST
Last Updated 26 ನವೆಂಬರ್ 2021, 20:15 IST
ಎಚ್‌.ಡಿ. ದೇವೇಗೌಡ
ಎಚ್‌.ಡಿ. ದೇವೇಗೌಡ   

ಮಧುಗಿರಿ: ‘ಕಳೆದ ಲೋಕಸಭಾ ಚುನಾವಣೆಯಲ್ಲಿ ನನ್ನ ಸೋಲಿಗೆ ಕಾರಣರಾದವರಿಗೆ ವಿಧಾನ ಪರಿಷತ್ ಚುನಾವಣೆಯಲ್ಲಿ ತಕ್ಕಪಾಠ ಕಲಿಸಬೇಕು’ ಎಂದು ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಇಲ್ಲಿ ಶುಕ್ರವಾರ ಮನವಿ ಮಾಡಿದರು.

ಜೆಡಿಎಸ್ ಅಭ್ಯರ್ಥಿ ಆರ್.ಅನಿಲ್ ಕುಮಾರ್ ಪರ ಹಮ್ಮಿಕೊಂಡಿದ್ದ ಪ್ರಚಾರ ಸಭೆಯಾದ ‘ಜನತಾ ಸಂಗಮ’ ಸಮಾವೇಶದಲ್ಲಿ ಮಾತನಾಡಿ, ‘ನನಗೆ ಆಗಿರುವ ನೋವು ಸರಿಪಡಿಸಲು ನಿಮಗೆ ಇದೊಂದು ಅವಕಾಶ ಸಿಕ್ಕಿದೆ’ ಎಂದರು.

‘ಕಳೆದ ಲೋಕಸಭಾ ಚುನಾವಣೆಯಲ್ಲಿ ಜಿಲ್ಲೆಯಿಂದ ಸ್ಪರ್ಧಿಸುವಂತೆ ಮಾಡಿದರು. ಕೆಲವರು ರಾಜಕೀಯಷಡ್ಯಂತ್ರ ಮಾಡಿ ಸೋಲಿಗೆ ಕಾರಣರಾದರು. ಪರಿಷತ್ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯನ್ನು ಗೆಲ್ಲಿಸುವ ಮೂಲಕ ನನ್ನ ಸೋಲಿಗೆ ಕಾರಣರಾದವರಿಗೆ ಉತ್ತರ ಕೊಡಬೇಕು’ ಎಂದು ಕೇಳಿಕೊಂಡರು.

ADVERTISEMENT

ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ಎನ್. ರಾಜಣ್ಣ ಅವರ ಹೆಸರು ಹೇಳದೆ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು. ‘ಅವರ ಪುತ್ರ ಆರ್. ರಾಜೇಂದ್ರ ಅವರನ್ನು ಸೋಲಿಸಿ ಕಳೆದ ಚುನಾವಣೆಯಲ್ಲಿ ಆಗಿರುವ ತಪ್ಪನ್ನು ಸರಿಪಡಿಸಬೇಕು. ನನ್ನನ್ನು ಸೋಲಿಸಿದ್ದರಿಂದ ಎದೆಗುಂದಿಲ್ಲ’ ಎಂದು ತಿಳಿಸಿದರು.

‘ಇದು ನನ್ನ ಕೊನೆಯ ಚುನಾವಣೆಯ ಪ್ರಚಾರ. ಮುಂದೆ ಬರುತ್ತೇನೊ, ಇಲ್ಲವೊ ಗೊತ್ತಿಲ್ಲ. ಯಾವ ಜನ ನನ್ನ ಕೈಬಿಟ್ಟಿದ್ದಾರೆಯೊ ಅವರೇ ನನ್ನನ್ನು ಎತ್ತಿಕೊಂಡು ಬರುತ್ತಾರೆ. ಪ್ರಾದೇಶಿಕ ಪಕ್ಷ ಉಳಿಸಿ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.