ADVERTISEMENT

ವಿಧಾನ ಪರಿಷತ್‌: ವಾಗ್ವಾದಕ್ಕೆ ನಾಂದಿ ಹಾಡಿದ ‘ರನ್ನಿಂಗ್ ಕಾಮೆಂಟರಿ’

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2023, 21:46 IST
Last Updated 22 ಫೆಬ್ರುವರಿ 2023, 21:46 IST
   

ಬೆಂಗಳೂರು: ವಿಧಾನ ಪರಿಷತ್‌ನಲ್ಲಿ ಬುಧವಾರ ನಡೆದ ಬಜೆಟ್‌ ಮೇಲಿನ ಚರ್ಚೆಯಲ್ಲಿ ವಿರೋಧ ಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್‌ ಬಳಸಿದ ‘ರನ್ನಿಂಗ್ ಕಾಮೆಂಟರಿ’ ಪದ ಬಿಜೆಪಿ, ಕಾಂಗ್ರೆಸ್‌ ಸದಸ್ಯರ ಮಧ್ಯೆ ವಾಗ್ವಾದಕ್ಕೆ ನಾಂದಿಹಾಡಿತು.

ಹಿಂದಿನ ಬಜೆಟ್‌ಗಳ ನೂರಾರು ಘೋಷಣೆಗಳನ್ನೇ ಅನುಷ್ಠಾನಗೊಳಿಸಿಲ್ಲ, ಮತ್ತೆ ಹಲವು ಭರವಸೆಗಳನ್ನು ಒಳಗೊಂಡ ಕಾಟಾಚಾರದ ಬಜೆಟ್‌ ಮಂಡಿಸಲಾಗಿದೆ ಎಂದು ಟೀಕಿಸಿದರು.

ಹರಿಪ್ರಸಾದ್‌ ಅವರ ಪ್ರತಿಮಾತಿಗೂ, ಸಭಾ ನಾಯಕ ಕೋಟ ಶ್ರೀನಿವಾಸ ಪೂಜಾರಿ ಎದ್ದು ನಿಂತು ಆಕ್ಷೇಪ ವ್ಯಕ್ತಪಡಿಸುತ್ತಿದ್ದರು.
‘ಸುಮ್ಮನೆ ಕುಳಿತುಕೊಳ್ಳಿ’ ಎಂದು ಹರಿಪ್ರಸಾದ್ ಹೇಳಿದರು.

ADVERTISEMENT

‘ಕುಳಿತುಕೊಳ್ಳುವಂತೆ ಹೇಳುವ ಅಧಿಕಾರ ನಿಮಗೆ ಇಲ್ಲ, ಆ ಮಾತು ಪೀಠ ಹೇಳಬೇಕು’ ಎಂಬ ಶ್ರೀನಿವಾಸ ಪೂಜಾರಿ ಮಾತಿಗೆ ಅಸಮಾಧಾನ ವ್ಯಕ್ತಪಡಿಸಿದ ಹರಿಪ್ರಸಾದ್, ‘ನಾಚಿಕೆ, ಮರ್ಯಾದೆ ಇದ್ದವರು ಪದೇಪದೇ ಎದ್ದು ನಿಂತು ರನ್ನಿಂಗ್‌ ಕಾಮೆಂಟರಿ ಮಾಡುತ್ತಿರಲಿಲ್ಲ. ಹೀಗೆ ಮುಂದುವರಿದರೆ ಸಭಾತ್ಯಾಗ ಮಾಡಬೇಕಾಗುತ್ತದೆ’ ಎಂದು ಎಚ್ಚರಿಸಿದರು.

‘ರನ್ನಿಂಗ್ ಕಾಮೆಂಟರಿ’ ಪದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ, ನೀವು ನಿರಂತರವಾಗಿ ಸುಳ್ಳುಗಳನ್ನೇ ಹೇಳಿದರೆ ಕೇಳಿಕೊಂಡು ಕೂರಲು ಆಗುವುದಿಲ್ಲ ಎಂದು ಆಕ್ರೋಶ ಹೊರಹಾಕಿದರು.

‘ವಿಧಾನಸೌಧದಲ್ಲೇ ₹ 10 ಲಕ್ಷ ಪಡೆಯಲು ಹೊರಟವರಿಂದ ಇನ್ನೇನು ನಿರೀಕ್ಷಿಸಲು ಸಾಧ್ಯ? ಸುಳ್ಳು ನಿಮ್ಮ ಮನೆಯ ದೇವರು ಎನ್ನುವುದು ಎಲ್ಲರಿಗೂ ಗೊತ್ತು’ ಎಂದು ಹರಿಪ್ರಸಾದ್ ಹರಿಹಾಯ್ದರು. ಏಕ ವಚನಗಳ ಬಳಕೆಯೂ ಆಯಿತು. ಬಿಜೆಪಿ, ಕಾಂಗ್ರೆಸ್‌ ಸದಸ್ಯರು ಕೆಲ ಸಮಯ ವಾಗ್ವಾದ ನಡೆಸಿದರು.

ನಂತರ ಮಾತು ಮುಂದುವರಿಸಿದ ಹರಿಪ್ರಸಾದ್, ಡಬಲ್‌ ಎಂಜಿನ್‌ ಸರ್ಕಾರವಿದ್ದರೂ, ತಾರತಮ್ಯ ಎದ್ದುಕಾಣುತ್ತಿದೆ. ₹ 1,91,573 ಕೋಟಿ ಜಿಎಸ್‌ಟಿ ಸಂಗ್ರಹವಾಗಿದ್ದು, ರಾಜ್ಯಕ್ಕೆ ಶೇ 42ರಷ್ಟು ವಾಪಸ್‌ ನೀಡಬೇಕು. ಆದರೆ, ಸಿಕ್ಕಿರುವುದು ₹ 29 ಸಾವಿರ ಕೋಟಿ ಮಾತ್ರ. ಇತರೆ ರಾಜ್ಯಗಳಿಗೆ ಸಾಕಷ್ಟು ನೆರವು ನೀಡಿರುವ ಕೇಂದ್ರ ಸರ್ಕಾರ, ರಾಜ್ಯದ ವಿಷಯದಲ್ಲಿ ತಾರತಮ್ಯ ಮಾಡುತ್ತಿದೆ. ಇಂತಹ ಸ್ಥಿತಿಯಲ್ಲಿ ಹಣಕಾಸಿನ ನಿರ್ವಹಣೆ ಹೇಗೆ ಮಾಡುತ್ತಾರೆ ಎನ್ನುವ ಕುರಿತು ಸ್ಪಷ್ಟತೆಯೇ ಇಲ್ಲ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.