ಬೆಂಗಳೂರು: ಗೃಹಲಕ್ಷ್ಮಿ ಯೋಜನೆಯ ಹಣ ಫಲಾನುಭವಿಗಳ ಖಾತೆಗೆ ಸಕಾಲಕ್ಕೆ ಸಂದಾಯ ಆಗದಿರುವ ವಿಷಯ ವಿಧಾನಪರಿಷತ್‌ನಲ್ಲಿ ಕೋಲಾಹಲ ಸೃಷ್ಟಿಸಿತು.
ರಾಜ್ಯಪಾಲರ ಭಾಷಣದ ವಂದನಾ ನಿರ್ಣಯದ ಮೇಲಿನ ಚರ್ಚೆಯಲ್ಲಿ ಮಾತನಾಡಿದ ಜೆಡಿಎಸ್‌ನ ಟಿ.ಎ. ಶರವಣ, ಫಲಾನುಭವಿಗಳಿಗೆ ಆರು ತಿಂಗಳಿನಿಂದ ಹಣ ನೀಡಿಲ್ಲ. ದಿನವೂ ಹಣಕ್ಕಾಗಿ ನಿರೀಕ್ಷೆ ಮಾಡುವುದರಲ್ಲೇ ಜನರು ಸಮಯ ವ್ಯರ್ಥ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಶರವಣ ಮಾತಿಗೆ ಕೆರಳಿದ ಕಾಂಗ್ರೆಸ್ ಸದಸ್ಯರು, ಆರು ತಿಂಗಳು ಹಣ ಬಂದಿಲ್ಲ ಎನ್ನುವುದನ್ನು ಸಾಬೀತು ಮಾಡುವಂತೆ ಸವಾಲು ಹಾಕಿದರು. ಜೆಡಿಎಸ್‌ನ ಎಸ್.ಎಲ್. ಬೋಜೇಗೌಡ ಅವರು ಮಾತನಾಡಲು ಎದ್ದು ನಿಂತಾಗ ಸಭಾನಾಯಕ ಬೋಸರಾಜು ಆಕ್ಷೇಪಿಸಿದರು. ಇದರಿಂದ ಪರಿಷತ್ ಕಲಾಪ ಗದ್ದಲದ ಗೂಡಾಯಿತು. ಸಭಾಪತಿ ಸ್ಥಾನದಲ್ಲಿದ್ದ ಮಂಜುನಾಥ ಭಂಡಾರಿ ಎಲ್ಲರೂ ಕುಳಿತುಕೊಳ್ಳುವಂತೆ ತಾಕೀತು ಮಾಡಿದರು.
ಬಿಜೆಪಿಯ ಎನ್. ರವಿಕುಮಾರ್, ಭಾರತಿಶೆಟ್ಟ, ‘ಗ್ಯಾರಂಟಿ ಯೋಜನೆಗಳ ಹಣವನ್ನು ಈ ಸರ್ಕಾರ ಚುನಾವಣಾ ಸಮಯಕ್ಕೆ ಮಾತ್ರ ನೀಡುತ್ತದೆ’ ಎಂದು ಟೀಕಿಸಿದರು. ‘ಆರು ತಿಂಗಳು ವಿಳಂಬವಾಗಿರುವುದನ್ನು ಸಾಬೀತು ಮಾಡಿದರೆ ರಾಜೀನಾಮೆ ನೀಡುವೆ’ ಎಂದು ಆಡಳಿತ ಪಕ್ಷದ ಮುಖ್ಯ ಸಚೇತಕ ಸಲೀಂ ಅಹಮದ್ ಸವಾಲು ಹಾಕಿದರು. ವಾದ–ವಿವಾದ ತಾರಕ್ಕೇರುತ್ತಿದಂತೆ ಪೀಠಕ್ಕೆ ಮರಳಿದ ಸಭಾಪತಿ ಬಸವರಾಜ ಹೊರಟ್ಟಿ, ‘ಸದಸ್ಯರು ಪೀಠಕ್ಕಾದರೂ ಮರ್ಯಾದೆ ಕೊಡಬೇಕು. ಜನರು ನೋಡಿ ಏನು ಅನ್ನುತ್ತಾರೆ ಎನ್ನುವ ಅಂಜಿಯಾದರೂ ಇರಲಿ’ ಎಂದು ಅಸಮಾಧಾನ ವ್ಯಕ್ತಪಡಿಸಿ, ಕಲಾಪ ಮುಂದೂಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.