
ವಿಧಾನಸೌಧ
ಬೆಂಗಳೂರು: ವಿಧಾನಸಭೆ ಸಚಿವಾಲಯವು ಖಾಲಿ ಹುದ್ದೆಗಳನ್ನು ಭರ್ತಿ ಮಾಡುವ ವೇಳೆ ನೇಮಕಾತಿ ನಿಯಮವನ್ನು ಉಲ್ಲಂಘಿಸಿದ ಪರಿಣಾಮ ಏಳು ದಲಾಯತ್‌ಗಳು ಮತ್ತು ಒಬ್ಬ ಸ್ವೀಪರ್, ಕೆಲಸಕ್ಕೆ ಸೇರಿದ ಎರಡೂವರೆ ವರ್ಷದ ಬಳಿಕ ಹುದ್ದೆ ಕಳೆದುಕೊಳ್ಳುವ ಭೀತಿ ಎದುರಿಸುತ್ತಿದ್ದಾರೆ.
ತಮ್ಮದಲ್ಲದ ತಪ್ಪಿಗೆ ನಿರುದ್ಯೋಗಿ ಗಳಾಗುವ ಆತಂಕದಲ್ಲಿರುವ ಈ ಎಂಟೂ ಮಂದಿ ಹೈಕೋರ್ಟ್‌ನಿಂದ ತಡೆಯಾಜ್ಞೆ ತಂದು ಹುದ್ದೆಯಲ್ಲಿ ಮುಂದುವರಿದಿದ್ದಾರೆ.
ನಿಯಮ ಉಲ್ಲಂಘನೆ: ವಿಧಾನಸಭೆ ಸಚಿವಾಲಯವು 26 ದಲಾಯತ್, ಎರಡು ಸ್ವೀಪರ್ ಸೇರಿ ವಿವಿಧ ಹುದ್ದೆಗಳ ನೇಮಕಾತಿಗೆ 2022ರ ಏಪ್ರಿಲ್ 26ರಂದು ಅಧಿಸೂಚನೆ ಹೊರಡಿಸಿತ್ತು. 26ರಲ್ಲಿ, 23 ಸಾಮಾನ್ಯ, 3 ಬ್ಯಾಕ್‌ಲಾಗ್ ಹುದ್ದೆಗಳಾಗಿದ್ದವು. 23 ಹುದ್ದೆಗಳಲ್ಲಿ 11ನ್ನು ಸಾಮಾನ್ಯ ವರ್ಗ ಮತ್ತು 12ನ್ನು ಮೀಸಲು ಕೆಟಗರಿಗೆ ವರ್ಗೀಕರಿಸಲಾಗಿತ್ತು. ಕೆಇಎ ಸ್ಪರ್ಧಾತ್ಮಕ ಪರೀಕ್ಷೆ ನಡೆಸಿ, 2023ರ ಫೆ. 15ರಂದು ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟಿಸಿತ್ತು.
ದಲಾಯತ್ ಹುದ್ದೆಗೆ ‘ಪ್ರವರ್ಗ 2ಎ’ ಅಡಿ ಅರ್ಜಿ ಸಲ್ಲಿಸಿದ್ದ ಕೆ.ಪಿ. ಅರುಣ್ ಎಂಬ ಅಭ್ಯರ್ಥಿ ಪರೀಕ್ಷೆಯಲ್ಲಿ 45 ಗಳಿಸಿದ್ದರು. ಸಾಮಾನ್ಯ ಅರ್ಹತೆ (ಜಿಎಂ) ಅಥವಾ ಸಾಮಾನ್ಯ ಅರ್ಹತೆ (ಗ್ರಾಮೀಣ) ವರ್ಗದಲ್ಲಿ ಹುದ್ದೆ ಪಡೆಯಲು ಅರ್ಹರಾಗಿದ್ದು, ಅಂತಿಮ ಆಯ್ಕೆ ಪಟ್ಟಿಯಲ್ಲಿ ಹೆಸರು ಇಲ್ಲದ ಕಾರಣ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು.
ಆಯ್ಕೆ ಪಟ್ಟಿ ತಯಾರಿಸುವಾಗ ‘ಕರ್ನಾಟಕ ನಾಗರಿಕ ಸೇವೆಗಳ (ನೇಮಕಾತಿ ಸಮಯದಲ್ಲಿ ಅಭ್ಯರ್ಥಿ ಗಳನ್ನು ಆಯ್ಕೆ ಮಾಡುವ ವಿಧಾನ) ಕಾಯ್ದೆ-2018’ನ್ನು ಸಚಿವಾಲಯ ಪಾಲಿಸಿಲ್ಲ. ಅರುಣ್ ಅವರಿಗಿಂತ ಕಡಿಮೆ ಅಂಕ ಪಡೆದವರು (43.75, 42.50) ಸಾಮಾನ್ಯ ಅರ್ಹತೆಯಡಿ ಆಯ್ಕೆ ಯಾಗಿದ್ದರು. ಸಾಮಾನ್ಯ ಅರ್ಹತೆಯಡಿ ಮೊದಲು ಆಯ್ಕೆ ಪಟ್ಟಿ ಸಿದ್ಧಪಡಿಸುವ ಬದಲು, ಮೀಸಲು ವರ್ಗದಲ್ಲಿ ಮೊದಲು ಪಟ್ಟಿ ಸಿದ್ಧಪಡಿಸಿರುವುದು 2018ರ ಕಾಯ್ದೆಯ ಉಲ್ಲಂಘನೆಯಾಗಿದೆ ಎಂದು ಅರುಣ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.
ವಿಚಾರಣೆ ನಡೆಸಿದ ಹೈಕೋರ್ಟ್, ‘ಸಚಿವಾಲಯವು 2018ರ ಕಾಯ್ದೆಯಲ್ಲಿರುವ ನೇಮಕಾತಿ ವಿಧಾನ ಪಾಲಿಸಲು ವಿಫಲವಾಗಿದೆ. ಹೀಗಾಗಿ, ಕಡಿಮೆ ಅಂಕ ಗಳಿಸಿದವರು ಸಾಮಾನ್ಯ ವರ್ಗದಲ್ಲಿ ಆಯ್ಕೆಯಾಗಿದ್ದಾರೆ. ಮೀಸಲು ಕೆಟಗರಿಯಲ್ಲಿ ಅರ್ಜಿ ಸಲ್ಲಿಸಿದ್ದರೂ ಸಾಮಾನ್ಯ ವರ್ಗದಡಿ ಆಯ್ಕೆಯಾಗುವ ಅವಕಾಶದಿಂದ ವಂಚಿತರಾಗಿದ್ದಾರೆ. ಹೀಗಾಗಿ, ದಲಾಯತ್ ಹುದ್ದೆಯ ಆಯ್ಕೆ ಪಟ್ಟಿ ರದ್ದುಪಡಿಸಬೇಕು. 2018ರ ಕಾಯ್ದೆಯ ಪ್ರಕಾರ ತಾತ್ಕಾಲಿಕ ಆಯ್ಕೆ ಪಟ್ಟಿ ತಯಾರಿಸಿ, ಆಕ್ಷೇಪಣೆ ಆಹ್ವಾನಿಸಿದ ಬಳಿಕ ಅಂತಿಮ ಪಟ್ಟಿ ಪ್ರಕಟಿಸಬೇಕು’ ಎಂದು ತೀರ್ಪು ನೀಡಿತ್ತು. ಹೈಕೋರ್ಟ್ ಆದೇಶದಂತೆ ಸಿದ್ಧಪಡಿಸಿದ ಪಟ್ಟಿಯಲ್ಲಿ ಏಳು ಅಭ್ಯರ್ಥಿಗಳು ಪಟ್ಟಿಯಿಂದ ಹೊರಗುಳಿದಿದ್ದು, ಏಳು ಅಭ್ಯರ್ಥಿಗಳು ಹೊಸತಾಗಿ ಸೇರ್ಪಡೆಯಾಗಿದ್ದಾರೆ.
ಮತ್ತೆ ಹೈಕೋರ್ಟ್‌ಗೆ: ಮೊದಲ ಆಯ್ಕೆ ಪಟ್ಟಿಯಲ್ಲಿದ್ದ ಎಲ್ಲ 26 ಮಂದಿ 2023ರ ಏಪ್ರಿಲ್‌ನಲ್ಲಿ ಹುದ್ದೆಗೆ ವರದಿ ಮಾಡಿಕೊಂಡಿದ್ದಾರೆ. ಈ ಮೊದಲ ಪಟ್ಟಿಯಲ್ಲಿದ್ದ 18 ಮಂದಿ ಹೈಕೋರ್ಟ್ ಆದೇಶದಂತೆ ಪರಿಷ್ಕರಿಸಿದ್ದ ಆಯ್ಕೆ ಪಟ್ಟಿಯಲ್ಲಿಯೂ ಇದ್ದಾರೆ. ಈ 18 ಮಂದಿಗೂ ಸಚಿವಾಲಯ ಇದೇ ಸೆ. 16ರಂದು ಹೊಸತಾಗಿ ನೇಮಕಾತಿ ಆದೇಶ ನೀಡಿದೆ. ಇದರಿಂದ ಈಗಾಗಲೇ ಸಲ್ಲಿಸಿದ ಸೇವಾ ಜ್ಯೇಷ್ಠತೆ ಕಳೆದು ಕೊಳ್ಳುವ ಆತಂಕದಲ್ಲಿರುವ ಈ 18 ಮಂದಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ಹೊಸತಾಗಿ ಪಟ್ಟಿಗೆ ಸೇರ್ಪಡೆ ಆದವರು: ಎಚ್.ಜೆ. ಹೇರಂಬ, ಆನಂದ ಬಡಿಗೇರ, ಎಸ್. ಶೋಭಾ, ಪ್ರಿಯಾಂಕಾ ಹುಗ್ಗೆಣ್ಣವರ, ಬಿ.ಟಿ. ಶೃತಿ
ಹುದ್ದೆ ಕಳೆದುಕೊಳ್ಳುವ ಆತಂಕದಲ್ಲಿರುವವರು: ಅರ್ಜುನ್, ನೀಲಪ್ಪ ತಳವಾರ, ಕೆ.ಎಸ್. ರವಿಕುಮಾರ್, ಎಂ.ಎನ್. ಮಂಜುಳಾ, ಎಚ್.ಎಲ್. ಅನುರಾಧಾ, ಎಸ್. ಶಶಿಕಲಾ, ಡಿ. ಬಸವರಾಜ್
‘ಸಚಿವಾಲಯ ಮಾಡಿದ ತಪ್ಪಿಗೆ ನಾವು ಬಲಿ ಆಗಿದ್ದೇವೆ. ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಅವರ ಮನೆಗೆ ಹೋಗಿ ಕಾಲಿಗೆ ಬಿದ್ದು ಹುದ್ದೆಯಲ್ಲಿಯೇ ಉಳಿಸಿಕೊಳ್ಳುವಂತೆ ಬೇಡಿಕೊಂಡಿದ್ದೇವೆ. ಕಾರ್ಯದರ್ಶಿ ಎಂ.ಕೆ. ವಿಶಾಲಾಕ್ಷಿ ಅವರಿಗೂ ಮನವಿ ಮಾಡಿದ್ದೇವೆ. ಹೈಕೋರ್ಟ್ ಆದೇಶದಂತೆ ಹುದ್ದೆ ಕಳೆದುಕೊಂಡಿದ್ದೀರಿ ಎಂದು ಅವರು ಸಬೂಬು ಹೇಳುತ್ತಿದ್ದಾರೆ. ನಾವೂ ಹೈಕೋರ್ಟ್‌ಗೆ ಹೋಗಿರುವುದರಿಂದ ಅಂತಿಮ ಆದೇಶ ಬರಲಿ, ಆ ಮೇಲೆ ನೋಡೋಣ ಎನ್ನುತ್ತಿದ್ದಾರೆ’ ಎಂದು ಕೆಲಸ ಕಳೆದುಕೊಳ್ಳುವ ಆತಂಕದಲ್ಲಿರುವ ಅಭ್ಯರ್ಥಿಯೊಬ್ಬರು ಅಳಲು ತೋಡಿಕೊಂಡರು.
ಎರಡು ಸ್ವೀಪರ್ ಹುದ್ದೆಗಳ ಪೈಕಿ, ಪರಿಶಿಷ್ಟ ಜಾತಿ ಮತ್ತು ಸಾಮಾನ್ಯ ವರ್ಗಕ್ಕೆ ತಲಾ ಒಂದರಂತೆ ಮೀಸಲಿರಿಸಲಾಗಿತ್ತು. ಆಯ್ಕೆಗಾಗಿ ನಡೆದ ಸಂದರ್ಶನದಲ್ಲಿ ಎಸ್. ಶೇಖರ್ 18.50 ಅಂಕ, ಪ್ರಶಾಂತ್ 19 ಅಂಕ ಗಳಿಸಿದ್ದರು. ಸಾಮಾನ್ಯ ಅರ್ಹತೆಯಡಿ ಪ್ರಶಾಂತ್ ಆಯ್ಕೆಯಾಗಿದ್ದರು. ಎಸ್‌ಸಿ ಮೀಸಲಾತಿಯಡಿ 21.50 ಅಂಕ ಗಳಿಸಿದ್ದ ತಿರುಪತಿ ಆಯ್ಕೆಯಾಗಿದ್ದರು. ಆದರೆ, 2018ರ ನಿಯಮದ ಪ್ರಕಾರ, ಅತಿ ಹೆಚ್ಚು ಅಂಕ ಗಳಿಸಿದ ತಿರುಪತಿ ಸಾಮಾನ್ಯ ವರ್ಗದಲ್ಲಿ ಆಯ್ಕೆಯಾಗಿ, ಎಸ್‌ಸಿ ಮೀಸಲಾತಿಯಡಿ ಅತೀ ಹೆಚ್ಚು ಅಂಕ ಪಡೆದಿದ್ದ ಶೇಖರ್ ಆಯ್ಕೆ ಆಗಬೇಕಿತ್ತು. ಹೈಕೋರ್ಟ್ ಆದೇಶದಂತೆ ಸಚಿವಾಲಯ ಪಟ್ಟಿಯನ್ನು ಪರಿಷ್ಕರಿಸಿದ್ದು, ಪ್ರಶಾಂತ್ ಹೊಸ ಪಟ್ಟಿಯಲ್ಲಿ ಹೊರಗುಳಿದು, ಶೇಖರ್ ಆಯ್ಕೆಯಾಗಿದ್ದಾರೆ. ಪ್ರಶಾಂತ್ ಅವರೂ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.