ADVERTISEMENT

ವಿಧಾನಸೌಧ ಮಾರ್ಗದರ್ಶಿ ಪ್ರವಾಸಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 26 ಮೇ 2025, 0:18 IST
Last Updated 26 ಮೇ 2025, 0:18 IST
ಪೌರ ಕಾರ್ಮಿಕರಿಗೆ, ವಿದ್ಯಾರ್ಥಿಗಳಿಗೆ ‘ವಿಧಾನಸೌಧ ಮಾರ್ಗದರ್ಶಿ ನಡಿಗೆ ಪ್ರವಾಸ’ದ ವೇಳೆ ವಿವರಣೆ ನೀಡಿದ ಮಾರ್ಗದರ್ಶಿ –ಪ್ರಜಾವಾಣಿ ಚಿತ್ರ
ಪೌರ ಕಾರ್ಮಿಕರಿಗೆ, ವಿದ್ಯಾರ್ಥಿಗಳಿಗೆ ‘ವಿಧಾನಸೌಧ ಮಾರ್ಗದರ್ಶಿ ನಡಿಗೆ ಪ್ರವಾಸ’ದ ವೇಳೆ ವಿವರಣೆ ನೀಡಿದ ಮಾರ್ಗದರ್ಶಿ –ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಪ್ರಜಾಪ್ರಭುತ್ವವು ಹೇಗೆ ಕಾರ್ಯನಿರ್ವಹಿಸಲಿದೆ ಎಂಬುದನ್ನು ಜನರಿಗೂ ಅರ್ಥ ಮಾಡಿಸುವ ಉದ್ದೇಶದಿಂದ ವಿಧಾನಸೌಧ ಮಾರ್ಗದರ್ಶಿ ಪ್ರವಾಸ ಯೋಜನೆ ಆರಂಭಿಸಲಾಗಿದೆ’ ಎಂದು ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಹೇಳಿದರು.

ವಿಧಾನಸೌಧದ ಬಾಂಕ್ವೆಟ್‌ ಸಭಾಂಗಣದಲ್ಲಿ ಭಾನುವಾರ ಆಯೋಜಿಸಲಾಗಿದ್ದ ಸಮಾರಂಭದಲ್ಲಿ, ಪ್ರವಾಸ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ‘ದೇಶದಲ್ಲಿ ವಿಧಾನಸೌಧ ನಿರ್ಮಾಣ ಆಗಿದ್ದು ಮೊದಲು ಕರ್ನಾಟಕದಲ್ಲೇ. ನಮ್ಮ ರಾಜ್ಯದ ಪ್ರಜಾಪ್ರಭುತ್ವದ ನೆಲೆಗಳು 1890 ರಿಂದ ಆರಂಭವಾಗುತ್ತದೆ. ರಾಜ್ಯದ ಈ ಪರಂಪರೆಯನ್ನು ಜನರಿಗೂ ಪರಿಚಯಿಸಬೇಕು ಎಂಬುದು ನಮ್ಮ ಉದ್ದೇಶ’ ಎಂದರು.

‘ಉತ್ತಮ ವೈದ್ಯರು, ಎಂಜಿನಿಯರ್, ವಕೀಲರು, ಅಧಿಕಾರಿಗಳನ್ನು ಸೃಷ್ಟಿಸುವ ಕಾಲೇಜುಗಳಿವೆ. ಆದರೆ, ಉತ್ತಮ ಜನಪ್ರತಿನಿಧಿಗಳನ್ನು ತಯಾರು ಮಾಡುವ ಕಾಲೇಜು ಇಲ್ಲ. ಹೀಗಾಗಿ ರಾಜ್ಯಶಾಸ್ತ್ರ ಕಾಲೇಜು ತೆರೆಯಲು ಚಿಂತನೆ ನಡೆದಿದೆ’ ಎಂದರು.

ADVERTISEMENT

ವಿಧಾನ ಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿ, ಕೆಎಸ್‌ಟಿಡಿಸಿ ಅಧ್ಯಕ್ಷ ಎಂ.ಶ್ರೀನಿವಾಸ್‌, ಕೆಎಸ್‌ಟಿಡಿಸಿ ವ್ಯವಸ್ಥಾಪಕ ನಿರ್ದೇಶಕ ರಾಜೇಂದ್ರ ಕೆ.ವಿ., ಪ್ರವಾಸೋದ್ಯಮ ಇಲಾಖೆಯ ಕಾರ್ಯದರ್ಶಿ ಸಲ್ಮಾ ಕೆ.ಫಹೀಂ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ಖಾಸಗಿ ಕಂಪನಿಯ ನಿರ್ವಹಣೆ: ರಾಜ್ಯ ಪ್ರವಾಸೋದ್ಯಮ ಇಲಾಖೆ, ವಿಧಾನಸೌಧದ ಸಚಿವಾಲಯ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಸಹಭಾಗಿತ್ವದಲ್ಲಿ ಈ ಪ್ರವಾಸ ಕಾರ್ಯಕ್ರಮ ನಡೆಯಲಿದೆ. ಈ ಪ್ರವಾಸಕ್ಕೆ ಮಾರ್ಗದರ್ಶಿಗಳನ್ನು ‘ಗಲ್ಲಿ ಟೂರ್ಸ್‌’ ನವೋದ್ಯಮವು ಒದಗಿಸಲಿದೆ.

ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ (ಕೆಎಸ್‌ಟಿಡಿಸಿ) ಜಾಲತಾಣದಲ್ಲಿ ಟಿಕೆಟ್‌ಗಳನ್ನು ಕಾಯ್ದಿರಿಸಬಹುದಾಗಿದೆ. ವಿಧಾನಸೌಧದ 3ನೇ ದ್ವಾರದ ಬಳಿ ಕೆಎಸ್‌ಟಿಡಿಸಿ ಕೌಂಟರ್ ಆರಂಭವಾಗಲಿದ್ದು, ಅಲ್ಲಿಯೂ ಟಿಕೆಟ್‌ ಖರೀದಿಸಬಹುದಾಗಿದೆ.

* ಪ್ರತಿ ಭಾನುವಾರ 2 ಮತ್ತು 4ನೇ ಶನಿವಾರಗಳಂದು ಪ್ರವಾಸ. ಬೆಳಿಗ್ಗೆ 8 ರಿಂದ ಸಂಜೆ 5ರವರೆಗೆ 

* ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ವಿವರಣೆ. ಪ್ರವಾಸದ ಸಮಯಕ್ಕೂ 20 ನಿಮಿಷ ಮೊದಲು ಬಂದು ತಪಾಸಣೆಗೆ ಒಳಪಡಬೇಕು 

* ಟಿಕೆಟ್‌ ಕಾಯ್ದಿರಿಸಿದವರು ಖರೀದಿಸಿದವರು ಆಧಾರ್‌ ಕಾರ್ಡ್‌ ತೋರಿಸುವುದು ಕಡ್ಡಾಯ

* ಕೆಎಸ್‌ಟಿಡಿಸಿ ವಿಧಾನಸೌಧದ ಭದ್ರತಾ ಸಿಬ್ಬಂದಿ ನೀಡುವ ಸೂಚನೆಗಳನ್ನು ಪಾಲಿಸುವುದು ಕಡ್ಡಾಯ

*90 ನಿಮಿಷಪ್ರವಾಸದ ಅವಧಿ 1.5 ಕಿ.ಮೀ.ಪ್ರವಾಸದ ವೇಳೆ ಕ್ರಮಿಸಬೇಕಾದ ದೂರ ₹50ವಯಸ್ಕರಿಗೆ ಟಿಕೆಟ್‌ ದರ.

*16 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಉಚಿತ ಪ್ರವೇಶ

*30ಪ್ರತಿ ತಂಡದಲ್ಲಿ ಇರಬಹುದಾದ ಪ್ರವಾಸಿಗರ ಸಂಖ್ಯೆ

ಪ್ರಜಾಪ್ರಭುತ್ವದ ದೇಗುಲವಿದು. ಪ್ರವಾಸ ಮುಗಿಸಿದ ಪ್ರತಿಯೊಬ್ಬರಲ್ಲೂ ಪ್ರಜಾಪ್ರಭುತ್ವದಲ್ಲಿ ತನ್ನ ಪಾತ್ರ ಮತ್ತು ಕನಸು, ಗುರಿಗಳ ಬೀಜಾಂಕುರವಾಗಬೇಕು.
ಎಚ್.ಕೆ. ಪಾಟೀಲ, ಪ್ರವಾಸೋದ್ಯಮ ಸಚಿವ

ಪ್ರವಾಸದ ಪರಿ

‘ಪ್ರಜಾಪ್ರಭುತ್ವ ಮತ್ತು ಮಹಾತ್ಮಗಾಂಧಿ ಅವರನ್ನು ಬೇರೆ ಮಾಡಿ ನೋಡಲು ಸಾಧ್ಯವಿಲ್ಲ. ಹೀಗಾಗಿ ಗಾಂಧೀಜಿ ಅವರ ಪ್ರತಿಮೆ ಎದುರಿನಿಂದಲೇ ಪ್ರವಾಸ ಆರಂಭವಾಗಲಿದೆ’ ವಿಧಾನಸೌಧದ ಆವರಣದ ಗಾಂಧೀಜಿ ಅವರ ಪ್ರತಿಮೆ ಎದುರು ನಿಂತು ಪ್ರವಾಸಿ ಮಾರ್ಗದರ್ಶಿ ನೀಡಿದ ವಿವರಣೆ ಇದು. 

ಅಲ್ಲಿಂದ ಹತ್ತಾರು ಹೆಜ್ಜೆಯ ನಂತರ ವಿಧಾನಸೌಧ ನಿರ್ಮಾಣದ ಶಂಕು ಸ್ಥಾಪನೆ ಶಿಲಾಫಲಕದ ಬಳಿ ನಿಂತ ಬಳಿಕ, ‘1951ರ ಜುಲೈ 3ರಂದು ಶಿಲಾನ್ಯಾಸ ನೆರವೇರಿಸಲಾಯಿತು. ಸ್ವತಂತ್ರ ಭಾರತದ ಮೊದಲ ಪ್ರಧಾನಿ ಜವಾಹರಲಾಲ್‌ ನೆಹರೂ, ರಾಜ್ಯದ ಮೊದಲ ಮುಖ್ಯಮಂತ್ರಿ ಕೆ.ಸಿ.ರೆಡ್ಡಿ ಅವರ ಅಧಿಕಾರದ ಅವಧಿಯಲ್ಲಿ ನಿರ್ಮಾಣಕ್ಕೆ ಚಾಲನೆ ನೀಡಲಾಗಿತ್ತು. ಎಲ್ಲ ಇಲಾಖೆಗಳ ಕಚೇರಿ ಇರುವ ಬೃಹತ್ ಸಂಕೀರ್ಣ ಒಂದರ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿತ್ತು’ ಎಂಬ ವಿವರಣೆ.

‘ಕೆಂಗಲ್‌ ಹನುಮಂತಯ್ಯ ಮುಖ್ಯಮಂತ್ರಿ ಆಗಿದ್ದಾಗ ರಷ್ಯಾದ ನಿಯೋಗವು ರಾಜ್ಯಕ್ಕೆ ಭೇಟಿ ನೀಡಿತ್ತು. ಹನುಮಂತಯ್ಯ ಅವರು ಬೆಂಗಳೂರಿನಲ್ಲಿರುವ ಎಲ್ಲ ಕಟ್ಟಡಗಳನ್ನು ನಿಯೋಗಕ್ಕೆ ತೋರಿಸಿದರು. ಆಗ ನಿಯೋಗದ ಸದಸ್ಯರೊಬ್ಬರು, ‘ಇವೆಲ್ಲಾ ಬ್ರಿಟಿಷರ ನಿರ್ಮಾಣಗಳು. ನೀವು ನಿರ್ಮಿಸಿದ ಕಟ್ಟಡವಿಲ್ಲವೇ’ ಎಂದು ಪ್ರಶ್ನಿಸಿದ್ದರಂತೆ. ಈಗಿನ ವಿಧಾನಸೌಧದ ಭವ್ಯ ಕಟ್ಟಡ ನಿರ್ಮಾಣಕ್ಕೆ ನಾಂದಿ ಹಾಡಿದ್ದೇ ಆ ಪ್ರಶ್ನೆ. ವಿಧಾನಸೌಧ ಹೇಗಿರಬೇಕು ಎಂದು ಸ್ವತಃ ಹನುಮಂತಯ್ಯ ಅವರು ವಿವರಿಸಿ, ರೂಪಿಸಿದ ವಿನ್ಯಾಸವಿದು’ ಎಂಬಲ್ಲಿಗೆ ಪ್ರವಾಸದ ಆ ಹಂತ ಮುಕ್ತಾಯ.

ವಿಧಾನಸೌಧದ ಶ್ರೀಗಂಧದ ಮಾದರಿ ವೀಕ್ಷಿಸಿ ಬಾಂಕ್ವೆಟ್‌ ಸಭಾಂಗಣಕ್ಕೆ ಕಾಲಿಟ್ಟರೆ, ‘ಇವೆಲ್ಲವೂ ನೈಸರ್ಗಿಕ ಬಣ್ಣಗಳಿಂದ ಕೂಡಿದ ಚಿತ್ತಾರ. ಪ್ರತಿ ಚಿತ್ತಾರದ ವಿನ್ಯಾಸವೂ ಬೇರೆ–ಬೇರೆ. ಕರ್ನಾಟಕದ ಗುಡಿಕಾರರು ಮತ್ತು ತಮಿಳುನಾಡಿನ ಕಲಾವಿದರ ಕುಸುರಿ ಕೆಲಸ ಇದು’ ಎಂದು ಸಭಾಂಗಣದ ಚಾವಣಿಯಲ್ಲಿರುವ ಹೂವಿನ ಚಿತ್ತಾರಗಳ ಬಗ್ಗೆ ವಿವರಣೆ. ಅಲ್ಲಿಂದ ವಿಧಾನಸಭೆ ಸಭಾಧ್ಯಕ್ಷರ ಗ್ಯಾಲರಿಗೆ ಪ್ರವೇಶ, ಸಭೆಯ ನಡಾವಳಿಗಳ ಬಗ್ಗೆ ಮಾರ್ಷಲ್‌ಗಳಿಂದ ವಿವರಣೆ. ‘ಸಭಾಧ್ಯಕ್ಷರ ಕುರ್ಚಿಯನ್ನು ನಿರ್ಮಿಸಿದ್ದು ಶಿವಮೊಗ್ಗದ ಗುಡಿಕಾರರು. ಅದನ್ನು ನಿರ್ಮಿಸಿದ ಕುಟುಂಬದ ಮೂರನೇ ತಲೆಮಾರಿನ ಗುಡಿಕಾರರೇ ಆ ಕುರ್ಚಿಯನ್ನು ಇಂದಿಗೂ ನಿರ್ವಹಣೆ ಮಾಡುತ್ತಿದ್ದಾರೆ’ ಎಂಬುದು ಮಾರ್ಗದರ್ಶಿಯ ವಿವರಣೆ.

ಕಾಲ್ನಡಿಗೆ ಪ್ರವಾಸದ ನಂತರದ ನಿಲುಗಡೆ ವಿಧಾನಪರಿಷತ್ತಿನ ಪ್ರವೇಶ ದ್ವಾರದಲ್ಲಿ. ಮೈಸೂರು ಸಂಸ್ಥಾನದ ಪ್ರಜಾಪ್ರತಿನಿಧಿ ಸಭೆ 1890ರ ದಶಕದಿಂದ ವಿವಿಧ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸಿ, ವಿಧಾನಸೌಧದವರೆಗೆ ನಡೆದು ಬಂದ ಹಾದಿಯನ್ನು ವಿವರಿಸುವ ಚಿತ್ರಗಳ ಬಗ್ಗೆ ವಿವರಣೆ. ಅಲ್ಲಿಂದ ಸೆಂಟ್ರಲ್‌ ಹಾಲ್‌, ಕೆಂಗಲ್ ಹನುಮಂತಯ್ಯನವರ ಪ್ರತಿಮೆ, ಉತ್ತರ ದ್ವಾರದ ಮೇಲೆ ‘ಧರ್ಮವನು ರಕ್ಷಿಪನ ಧರ್ಮವು ರಕ್ಷಿಪುದು’ ಎಂಬ ಬರಹ ವೀಕ್ಷಣೆ ಜೊತೆಗೆ ವಿಧಾನಸೌಧದ ಭವ್ಯ ಮೆಟ್ಟಿಲುಗಳಲ್ಲಿ ಪ್ರವಾಸ ಕೊನೆಗೊಂಡಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.