ADVERTISEMENT

ಸಭಾಪತಿ ಪಟ್ಟ: ‘ದೋಸ್ತಿ’ಗಳ ಜಟಾಪಟಿ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2018, 18:43 IST
Last Updated 6 ಡಿಸೆಂಬರ್ 2018, 18:43 IST

ಬೆಂಗಳೂರು: ವಿಧಾನಪರಿಷತ್‌ ಸಭಾಪತಿ ಸ್ಥಾನಕ್ಕೆ ಮಿತ್ರ (ಜೆಡಿಎಸ್‌– ಕಾಂಗ್ರೆಸ್‌) ಪಕ್ಷಗಳಲ್ಲಿ ಹಗ್ಗಜಗ್ಗಾಟ ಆರಂಭವಾಗಿದೆ. ಹೀಗಾಗಿ ಆಯ್ಕೆ ಕಗ್ಗಂಟಾಗಿದೆ.

ಹಂಗಾಮಿ ಸಭಾಪತಿ ಜೆಡಿಎಸ್‌ನ ಹಿರಿಯ ನಾಯಕ ಬಸವರಾಜ ಹೊರಟ್ಟಿ, ಸಚಿವ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ. ಅವರನ್ನೇ ಮುಂದುವರಿಸಲು ಜೆಡಿಎಸ್‌ನಲ್ಲಿ ಒಲವು ವ್ಯಕ್ತವಾಗಿದ್ದರೂ ಸಂಖ್ಯಾ ಬಲ ಹೆಚ್ಚಿರುವ ಕಾಂಗ್ರೆಸ್‌, ಆ ಪಟ್ಟ ತನಗೆ ನೀಡುವಂತೆ ಪಟ್ಟು ಹಿಡಿದಿದೆ.

‘ಸಭಾಪತಿ ಸ್ಥಾನದ ಬಗ್ಗೆ ಶೀಘ್ರದಲ್ಲೇ ಒಮ್ಮತದ ತೀರ್ಮಾನಕ್ಕೆ ಬರುತ್ತೇವೆ’ ಎಂದು ಬುಧವಾರ ನಡೆದ ಸಮನ್ವಯ ಸಮಿತಿ ಸಭೆಯ ಬಳಿಕ ಸಿದ್ದರಾಮಯ್ಯ ಹೇಳಿದ್ದರು. ಆದರೆ, ಈ ವಿಷಯ ಎರಡೂ ಪಕ್ಷಗಳ ಮಧ್ಯೆ ಕಿತ್ತಾಟಕ್ಕೆ ಕಾರಣವಾಗಿದೆ.

ADVERTISEMENT

ಈ ಮಧ್ಯೆ, ಬೆಳಗಾವಿಯಲ್ಲಿ ನಡೆಯಲಿರುವ ಅಧಿವೇಶನದಲ್ಲಿ ಹಂಗಾಮಿ ಸಭಾಪತಿಯಾಗಿ ಹೊರಟ್ಟಿ ಅವರೇ ಮುಂದುವರಿಯುವ ಸಾಧ್ಯತೆ ಇದೆ. ಅಧಿವೇಶನ ಮುಗಿದ ಬಳಿಕ ಸಂಪುಟ ವಿಸ್ತರಿಸಲು ತೀರ್ಮಾನಿಸಿರುವುದರಿಂದ, ಆ ಬಳಿಕ ಸಭಾಪತಿ ಸ್ಥಾನದ ಬಗ್ಗೆ ಎರಡೂ ಪಕ್ಷಗಳು ಒಮ್ಮತಕ್ಕೆ ಬರುವ ಸಾಧ್ಯತೆ ಇದೆ.

ಸಮನ್ವಯ ಸಮಿತಿ ಸಭೆಯಲ್ಲಿ ಸಭಾಪತಿ ಸ್ಥಾನದ ಬಗ್ಗೆ ಚರ್ಚೆ ನಡೆದಿದೆ. ಆದರೆ, ಉಭಯ ಪಕ್ಷಗಳು ಸಭಾಪತಿ ಸ್ಥಾನ ತಮಗೆ ನೀಡುವಂತೆ ಪಟ್ಟು ಹಿಡಿದಿದ್ದರಿಂದ ‌ತೀರ್ಮಾನಕ್ಕೆ ಬರಲು ಸಾಧ್ಯವಾಗಲಿಲ್ಲ.

ಹೊರಟ್ಟಿ ಅವರನ್ನೆ ಸಭಾಪತಿಯಾಗಿ ಆಯ್ಕೆ ಮಾಡಲು ಜೆಡಿಎಸ್‌ ವರಿಷ್ಠ ಎಚ್‌.ಡಿ. ದೇವೇಗೌಡ ತೀರ್ಮಾನಿಸಿದ್ದಾರೆ.

‘ವಿಧಾನಸಭೆಯಲ್ಲಿ ಸಭಾಧ್ಯಕ್ಷ ಹುದ್ದೆಯನ್ನು ಕಾಂಗ್ರೆಸ್ ಪಕ್ಷಕ್ಕೆ ನೀಡಿದ್ದೇವೆ. ಹೀಗಾಗಿ ವಿಧಾನ ಪರಿಷತ್ತಿನಲ್ಲಿ ಜೆಡಿಎಸ್ ಪಕ್ಷಕ್ಕೆ ಸಭಾಪತಿ ಸ್ಥಾನ ನೀಡಬೇಕು’ ಎಂದು ಸಮನ್ವಯ ಸಮಿತಿ ಸಭೆಯಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಪ್ರಸ್ತಾಪ ಇಟ್ಟಿದ್ದಾರೆ. ಅದಕ್ಕೆ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ ವಿರೋಧ ವ್ಯಕ್ತಪಡಿಸಿದರು ಎನ್ನಲಾಗಿದೆ.

ಸಭಾಪತಿ ಆಯ್ಕೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್‌ ಗಾಂಧಿ‌ ಜತೆ ಚರ್ಚಿಸಲು ಜೆಡಿಎಸ್ ನಾಯಕರು ನಿರ್ಧರಿಸಿದ್ದಾರೆ. ಕೈ ಪಕ್ಷದ ವರಿಷ್ಠರನ್ನು ಒಪ್ಪಿಸಿ ಸಭಾಪತಿ ಸ್ಥಾನ ಪಡೆಯುವ ಚಿಂತನೆ ಜೆಡಿಎಸ್ ನಾಯಕರದ್ದು. ಆದರೆ, ಎಸ್.ಆರ್. ಪಾಟೀಲ ಅವರನ್ನು ಸಭಾಪತಿ ಸ್ಥಾನದಲ್ಲಿ ಕೂರಿಸಲು ಸಿದ್ದರಾಮಯ್ಯ ಬಯಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.