ADVERTISEMENT

ಪುಟ್ಟರಂಗ ಶೆಟ್ಟಿ ಟೈಪಿಸ್ಟ್‌ ಬಳಿ ಹಣ ಪತ್ತೆ ಪ್ರಕರಣ ಎಸಿಬಿಗೆ

​ಪ್ರಜಾವಾಣಿ ವಾರ್ತೆ
Published 5 ಜನವರಿ 2019, 20:37 IST
Last Updated 5 ಜನವರಿ 2019, 20:37 IST
ಟೈಪಿಸ್ಟ್ ಮೋಹನ್
ಟೈಪಿಸ್ಟ್ ಮೋಹನ್   

ಬೆಂಗಳೂರು: ಹಿಂದುಳಿದ ವರ್ಗಗಳ ಕಲ್ಯಾಣ ಸಚಿವಸಿ.ಪುಟ್ಟರಂಗ ಶೆಟ್ಟಿ ಅವರ ಕಚೇರಿಯ ಟೈಪಿಸ್ಟ್ ಮೋಹನ್ ಬಳಿ ದಾಖಲೆ ಇಲ್ಲದ ₹25.76 ಲಕ್ಷ ಪತ್ತೆಯಾದ ಪ್ರಕರಣವನ್ನು ಎಸಿಬಿಗೆ ವರ್ಗಾಯಿಸಲಾಗಿದೆ.

ವಿಧಾನಸೌಧದಲ್ಲಿರುವ ಸಚಿವರ ಕಚೇರಿಯಿಂದ ಹಣ ತೆಗೆದುಕೊಂಡು ಮೋಹನ್‌ ಶುಕ್ರವಾರ ಸಂಜೆ ಹೊರಗೆ ಬರುತ್ತಿದ್ದ ವೇಳೆಯಲ್ಲೇ ಭದ್ರತಾ ಸಿಬ್ಬಂದಿಗೆ ಸಿಕ್ಕಿಬಿದ್ದಿದ್ದರು. ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದ ವಿಧಾನಸೌಧ ಪೊಲೀಸರು, ಶನಿವಾರ ಬೆಳಿಗ್ಗೆ ಮಹಜರು ಸಹ ನಡೆಸಿದರು.

ಇನ್‌ಸ್ಪೆಕ್ಟರ್ ಶಂಕರಾಚಾರ್ಯ ನೇತೃತ್ವದ ತಂಡ, ಮೋಹನ್‌ ಅವರನ್ನು ಮೊದಲಿಗೆ ಶಾಸಕರ ಭವನಕ್ಕೆ ಕರೆದೊಯ್ದಿತ್ತು. ಅಲ್ಲಿಂದ, ವಿಧಾನಸೌಧದ ಮೂರನೇ ಮಹಡಿಯಲ್ಲಿರುವ ಸಚಿವ ಪುಟ್ಟರಂಗ ಶೆಟ್ಟಿ ಕಚೇರಿಗೆ ಕರೆದೊಯ್ದು ಪರಿಶೀಲನೆ ನಡೆಸಿತು. ನಂತರ, ಕಾರ್ಮಿಕ ಸಚಿವರ ಆಪ್ತ ಕಾರ್ಯದರ್ಶಿ ಕಚೇರಿಗೂ ಆತನನ್ನು ಕರೆದುಕೊಂಡು ಮಾಹಿತಿ ಕಲೆಹಾಕಿತು.

ADVERTISEMENT

ರಾತ್ರಿಯಿಡೀ ವಿಚಾರಣೆ: ‘ಮೋಹನ್, ಗುತ್ತಿಗೆ ಆಧಾರದಲ್ಲಿ ಟೈಪಿಸ್ಟ್ ಆಗಿ ಕೆಲಸ ಮಾಡುತ್ತಿದ್ದಾರೆ. ಅವರ ಬಳಿ ಅಷ್ಟು ಹಣ ಎಲ್ಲಿಂದ ಬಂತು ಎಂಬ ಬಗ್ಗೆ ಮಾಹಿತಿ ಕಲೆಹಾಕಲು ರಾತ್ರಿಯಿಡೀ ಅವರ ವಿಚಾರಣೆ ನಡೆಸಲಾಯಿತು’ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

‘ಮೂವರು ಕಚೇರಿಗೆ ಬಂದು ಹಣ ಕೊಟ್ಟಿದ್ದರು. ಅದನ್ನೆಲ್ಲ ಒಂದೇ ಬ್ಯಾಗ್‌ನಲ್ಲಿ ಇಟ್ಟುಕೊಂಡು ವಿಧಾನಸೌಧದಿಂದ ಹೊರಗೆ ತೆಗೆದುಕೊಂಡು ಹೊರಟಿದ್ದೆ’ ಎಂದಷ್ಟೇ ಆರೋಪಿ ಹೇಳುತ್ತಿದ್ದಾರೆ. ಹಣ ಯಾರದ್ದು ಎಂದು ಕೇಳಿದಾಗ, ‘ನನ್ನದು’ ಎನ್ನುತ್ತಿದ್ದಾರೆ. ದಾಖಲೆ ಕೇಳಿದರೆ ಮೌನವಾಗುತ್ತಿದ್ದಾರೆ. ಆ ಮೂವರು, ಗುತ್ತಿಗೆದಾರರು ಇರಬಹುದು ಎಂಬ ಅನುಮಾನವಿದೆ’ ಎಂದು ಮೂಲಗಳು ಹೇಳಿವೆ.

ಪುಟ್ಟರಂಗ ಶೆಟ್ಟಿ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಹೋರಾಟ

ತಮ್ಮ ಕಚೇರಿಯ ಟೈಪಿಸ್ಟ್‌ ಬಳಿ ಹಣ ಪತ್ತೆಯಾದ ಪ್ರಕರಣದ ನೈತಿಕ ಹೊಣೆ ಹೊತ್ತುಪುಟ್ಟರಂಗ ಶೆಟ್ಟಿ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ಭಾನುವಾರ (ಇದೇ 6) ರಾಜ್ಯದಾದ್ಯಂತ ಹೋರಾಟ ನಡೆಸಲು ಬಿಜೆಪಿ ನಿರ್ಧರಿಸಿದೆ.

ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ವಿಧಾನಪರಿಷತ್ ಸದಸ್ಯ ಎನ್. ರವಿಕುಮಾರ್, ‘ವಿಧಾನಸೌಧದಲ್ಲಿ ದಂಧೆ ನಡೆಯುವುದನ್ನು ತಡೆಯುತ್ತೇನೆ’ ಎಂದು ಹೇಳಿದ್ದ ಮುಖ್ಯಮಂತ್ರಿ ಕುಮಾರಸ್ವಾಮಿ, ಸೌಧಕ್ಕೆ ಪ್ರವೇಶವನ್ನೇ ನಿರ್ಬಂಧಿಸಿದ್ದರು. ಈಗ ಸಚಿವರ ಆಪ್ತನ ಬಳಿಯೇ ದೊಡ್ಡ ಮೊತ್ತದ ನಗದು ಪತ್ತೆಯಾಗಿದೆ. ಶಕ್ತಿಸೌಧ ದುರ್ಬಳಕೆಯಾಗುತ್ತಿರುವುದಕ್ಕೆ ಹಾಗೂ ಸಮ್ಮಿಶ್ರ ಸರ್ಕಾರದಲ್ಲಿ ಭ್ರಷ್ಟಾಚಾರ ವ್ಯಾಪಕವಾಗಿ ಹಬ್ಬಿರುವುದಕ್ಕೆ ಇದಕ್ಕಿಂತ ನಿದರ್ಶನ ಬೇಕೆ’ ಎಂದು ಪ್ರಶ್ನಿಸಿದರು.

ಸಚಿವರು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ಎಲ್ಲಾ ಜಿಲ್ಲೆಗಳಲ್ಲಿ ಪ್ರತಿಭಟನೆ ನಡೆಯಲಿದೆ ಎಂದೂ ಅವರು ಹೇಳಿದರು.

‘ಪುಟ್ಟರಂಗ ಶೆಟ್ಟಿ ರಾಜೀನಾಮೆ ನೀಡಬೇಕು’ ಎಂದು ವಿಧಾನಪರಿಷತ್ತಿನ ಜೆಡಿಎಸ್‌ ಸದಸ್ಯ ಬಸವರಾಜ ಹೊರಟ್ಟಿ ಆಗ್ರಹಿಸಿದ್ದಾರೆ.

*ಸಚಿವ ಪುಟ್ಟರಂಗಶೆಟ್ಟಿ ಕಚೇರಿ ಸಿಬ್ಬಂದಿ ಬಳಿ ಹಣ ದೊರೆತಿರುವುದಕ್ಕೆ ಸಂಬಂಧಿಸಿದಂತೆ ತನಿಖೆ ನಡೆಯುತ್ತಿದೆ. ತನಿಖೆಯ ವರದಿ ಬಂದ ನಂತರ ಕ್ರಮಕೈಗೊಳ್ಳಲಾಗುವುದು

- ಎಚ್‌.ಡಿ.ಕುಮಾರಸ್ವಾಮಿ, ಮುಖ್ಯಮಂತ್ರಿ

*ಹಣ ಪತ್ತೆ ಪ್ರಕರಣದ ನೈತಿಕ ಹೊಣೆ ಹೊತ್ತು ಸಚಿವ ಪುಟ್ಟರಂಗಶೆಟ್ಟಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಆರೋಪ ಮುಕ್ತರಾದ ನಂತರ ಬೇಕಾದರೆ ಸಚಿವರಾಗಲಿ
- ಬಸವರಾಜ ಹೊರಟ್ಟಿ, ವಿಧಾನ ಪರಿಷತ್‌ ಸದಸ್ಯ

*ಹಣ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಬೇಕು. ಹಣ ಹೊಂದಿದ್ದ ವ್ಯಕ್ತಿಯ ವಿರುದ್ಧ ಮೊಕದ್ದಮೆ ದಾಖಲು ಮಾಡಬೇಕು
- ಸಿದ್ದರಾಮಯ್ಯ, ಅಧ್ಯಕ್ಷರು, ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ

* ವಿವಿಧ ಕಾಮಗಾರಿ, ವರ್ಗಾವಣೆ ವಿಷಯದಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದೆ. ಹಣ ಪತ್ತೆಯಾಗುವುದರ ಮೂಲಕ ಅದು ವಿಧಾನಸೌಧದಲ್ಲಿಯೇ ಬಹಿರಂಗವಾಗಿದೆ‌‌
- ಜಗದೀಶ ಶೆಟ್ಟರ್, ಶಾಸಕ

*ಸಚಿವರ ಕಚೇರಿ ಸಿಬ್ಬಂದಿ ಬಳಿ ಹಣ ಸಿಕ್ಕರೆ ಸಚಿವರಿಗೂ, ಅದಕ್ಕೂ ಏನು ಸಂಬಂಧ. ಆ ಬಗ್ಗೆ ತನಿಖೆ ನಡೆಯುತ್ತಿದೆ. ವರದಿಯಲ್ಲಿ ಸತ್ಯಾಂಶ ಹೊರಬರಲಿದೆ
- ಎಂ.ಬಿ. ಪಾಟೀಲ, ಗೃಹ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.