ADVERTISEMENT

ವಿಜಯನಗರ | ಮಲ್ಲಿಗೆ ನಾಡಿನಲ್ಲಿ ಕಾಫಿ ಘಮಲು

ವಿಜಯನಗರ ಜಿಲ್ಲೆಯ ಹೂವಿನಹಡಗಲಿಯಲ್ಲಿ ಎಂಟು ಎಕರೆಯಲ್ಲಿ ಬೆಳೆ

ಶಶಿಕಾಂತ್ ಎಸ್. ಶೆಂಬೆಳ್ಳಿ
Published 28 ಡಿಸೆಂಬರ್ 2022, 0:15 IST
Last Updated 28 ಡಿಸೆಂಬರ್ 2022, 0:15 IST
ಕೃಷಿ ಕಾರ್ಮಿಕರೊಂದಿಗೆ ಕಾಫಿ ಕೊಯ್ಲು ಮಾಡುತ್ತಿರುವ ರೈತ ಗಡ್ಡಿ ಗುಡ್ಡಪ್ಪ              – ಪ್ರಜಾವಾಣಿ ಚಿತ್ರ
ಕೃಷಿ ಕಾರ್ಮಿಕರೊಂದಿಗೆ ಕಾಫಿ ಕೊಯ್ಲು ಮಾಡುತ್ತಿರುವ ರೈತ ಗಡ್ಡಿ ಗುಡ್ಡಪ್ಪ   – ಪ್ರಜಾವಾಣಿ ಚಿತ್ರ   

ಹೊಸಪೇಟೆ (ವಿಜಯನಗರ): ಮಲೆನಾಡು ಜಿಲ್ಲೆಗಳಲ್ಲಿ ಬೆಳೆಯುವ ಕಾಫಿ ಘಮಲು ಈಗ ‘ಬಿಸಿಲೂರಿನ ಮಲ್ಲಿಗೆ ನಾಡು’ ವಿಜಯನಗರ ಜಿಲ್ಲೆಯ ಹೂವಿನಹಡಗಲಿಗೂ ಹಬ್ಬಿದೆ.

ಹಡಗಲಿ ತಾಲ್ಲೂಕಿನ ಕೊಂಬಳಿ ಗ್ರಾಮದ ಗಡ್ಡಿ ಗುಡ್ಡಪ್ಪ ಅವರು, ತೋಟದಲ್ಲಿ ಕಾಫಿ ಬೆಳೆಯುತ್ತಿದ್ದಾರೆ.

ಎಂಟು ಎಕರೆ ಪ್ರದೇಶದಲ್ಲಿ ಹನಿ ನೀರಾವರಿ ಪದ್ಧತಿ ಅಳವಡಿಸಿಕೊಂಡು ಅಡಿಕೆಯೊಂದಿಗೆ ಅಂತರ ಬೆಳೆಯಾಗಿ ನಾಲ್ಕು ವರ್ಷಗಳಿಂದ ಕಾಫಿ ಬೆಳೆಸಿದ್ದಾರೆ.

ADVERTISEMENT

ಎಂಟರಿಂದ ಹತ್ತು ಕಾರ್ಮಿಕರೊಂದಿಗೆ ಗುಡ್ಡಪ್ಪ ಹಾಗೂ ಅವರ ನಾಲ್ವರು ಸಹೋದರರು ನಿತ್ಯ ತೋಟದಲ್ಲಿ ಕೆಲಸ ಮಾಡುತ್ತಾರೆ. ಎಕರೆಗೆ 3ರಿಂದ 4 ಕ್ವಿಂಟಲ್‌ನಷ್ಟು ಕಾಫಿ ಫಸಲು ಬರುತ್ತಿದೆ.

ತೋಟದ ಮನೆಯಲ್ಲಿಯೇ ಕಾಫಿ ಬೀಜಗಳನ್ನು ಒಣಗಿಸಿ, ಚೀಲಗಳಲ್ಲಿ ತುಂಬಲಾಗುತ್ತದೆ. ಬೆಳೆಯನ್ನು ನೇರ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆಯ ಮಾರುಕಟ್ಟೆಗೆ ಕೊಂಡೊಯ್ದು ಮಾರಾಟ ಮಾಡುತ್ತಿದ್ದಾರೆ. ಇವರು ಕಾವೇರಿ ತಳಿಯ ಗಿಡಗಳನ್ನು ಬೆಳೆಯುತ್ತಿದ್ದಾರೆ. ಚೆರಿ ಕಾಫಿಯ ತಲಾ 50 ಕೆ.ಜಿ ಚೀಲಕ್ಕೆ ಮಾರುಕಟ್ಟೆಯಲ್ಲಿ ಪ್ರಸ್ತುತ ₹ 7 ಸಾವಿರ ಬೆಲೆಯಿದೆ.

‘ಕಾಫಿ ಬೆಳೆಸುವ ಯೋಚನೆ ಹೇಗೆ ಬಂತು’ ಎಂದು ಗುಡ್ಡಪ್ಪ ಅವರನ್ನು ಪ್ರಶ್ನಿಸಿದರೆ, ‘ಉತ್ತರ ಕರ್ನಾಟಕದಲ್ಲಿ ಕಾಫಿ ಬೆಳೆಯಬಹುದೇ ಎಂದು ಪ್ರಯೋಗ ಮಾಡುವ ಮನಸ್ಸಾಯಿತು. ಲಾಭ ಬರದಿದ್ದರೂ ಪರವಾಗಿಲ್ಲ. ಒಮ್ಮೆ ಬೆಳೆದು ನೋಡಲು ಮುಂದಾದೆ. ಪ್ರತಿ ಎಕರೆಗೆ 450 ಸಸಿ ಹಚ್ಚಿದೆ. ಜೊತೆಗೆ ಅಂತರ ಬೆಳೆಯಾಗಿ ಅಡಿಕೆ ಸಸಿಗಳನ್ನು ಬೆಳೆಸಿದೆ. ಎರಡು ವರ್ಷ ಬೆಳೆ ತೆಗೆಯದೆ ಹಾಗೆ ಬಿಟ್ಟೆ. ಉತ್ತಮ ಫಸಲು ಬರಲಾರಂಭಿಸಿತು. ಉತ್ತಮ ಬೆಲೆಯೂ ಸಿಕ್ಕಿತು. ಎರಡು ವರ್ಷಗಳಿಂದ ನೇರ ಮಾರುಕಟ್ಟೆಯಲ್ಲೇ ಮಾರುತ್ತಿರುವೆ’ ಎಂದರು.

‘ಬಯಲು ಸೀಮೆಯಲ್ಲಿ ಈಗ ಯಥೇಚ್ಛವಾಗಿ ಸೇಬು ಬೆಳೆಸಲಾಗುತ್ತಿದೆ. ಜಿಲ್ಲೆಯಲ್ಲಿ ಈಗ ರೈತರೊಬ್ಬರು ಕಾಫಿ ಕೂಡ ಬೆಳೆದಿದ್ದಾರೆ. ಈ ಪ್ರದೇಶ ಈ ಎರಡೂ ಬೆಳೆಗಳಿಗೆ ಸೂಕ್ತವಾಗಿಲ್ಲ. ಆದರೆ, ಅಂತರ ಬೆಳೆಯಾಗಿ ಬೆಳೆಸಿದರೆ ಉತ್ತಮ ಫಸಲು ಬರುತ್ತದೆ’ ಎಂದು ವಿಜಯನಗರ–ಬಳ್ಳಾರಿ ಜಿಲ್ಲಾ ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ಶರಣಪ್ಪ ಭೋಗಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.