ADVERTISEMENT

ಕರ್ನಾಟಕದ 31ನೇ ಜಿಲ್ಲೆಯಾಗಿ ವಿಜಯನಗರ ಜಿಲ್ಲೆ ಉದಯ

₹650 ಕೋಟಿಯಲ್ಲಿ ಪ್ರವಾಸಿ ತಾಣಗಳ ಅಭಿವೃದ್ಧಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2021, 19:11 IST
Last Updated 2 ಅಕ್ಟೋಬರ್ 2021, 19:11 IST
ಹೊಸಪೇಟೆಯಲ್ಲಿ ಶನಿವಾರ ಸಂಜೆ ನಡೆದ ವಿಜಯನಗರ ಜಿಲ್ಲೆ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವಿಜಯನಗರದ ಸ್ತಂಭ ಅನಾವರಣಗೊಳಿಸಿದರು. ಇಂಧನ ಖಾತೆ ಸಚಿವ ಸುನೀಲ್‌ ಕುಮಾರ್‌, ನಗರಾಭಿವೃದ್ಧಿ ಖಾತೆ ಸಚಿವ ಬೈರತಿ ಬಸವರಾಜ, ತೋಟಗಾರಿಕೆ ಸಚಿವ ಎನ್‌. ಮುನಿರತ್ನ, ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌. ಅಶ್ವತ್ಥನಾರಾಯಣ, ಪ್ರವಾಸೋದ್ಯಮ ಸಚಿವ ಆನಂದ್‌ ಸಿಂಗ್‌, ಶಾಸಕ ಬಿ.ಎಸ್. ಯಡಿಯೂರಪ್ಪ, ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ, ಸಾರಿಗೆ ಸಚಿವ ಬಿ. ಶ್ರೀರಾಮುಲು ಇದ್ದಾರೆ
ಹೊಸಪೇಟೆಯಲ್ಲಿ ಶನಿವಾರ ಸಂಜೆ ನಡೆದ ವಿಜಯನಗರ ಜಿಲ್ಲೆ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವಿಜಯನಗರದ ಸ್ತಂಭ ಅನಾವರಣಗೊಳಿಸಿದರು. ಇಂಧನ ಖಾತೆ ಸಚಿವ ಸುನೀಲ್‌ ಕುಮಾರ್‌, ನಗರಾಭಿವೃದ್ಧಿ ಖಾತೆ ಸಚಿವ ಬೈರತಿ ಬಸವರಾಜ, ತೋಟಗಾರಿಕೆ ಸಚಿವ ಎನ್‌. ಮುನಿರತ್ನ, ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌. ಅಶ್ವತ್ಥನಾರಾಯಣ, ಪ್ರವಾಸೋದ್ಯಮ ಸಚಿವ ಆನಂದ್‌ ಸಿಂಗ್‌, ಶಾಸಕ ಬಿ.ಎಸ್. ಯಡಿಯೂರಪ್ಪ, ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ, ಸಾರಿಗೆ ಸಚಿವ ಬಿ. ಶ್ರೀರಾಮುಲು ಇದ್ದಾರೆ   

ಹೊಸಪೇಟೆ (ವಿಜಯನಗರ): ಪಂಪ– ವಿರೂಪಾಕ್ಷನ ನೆಲೆಬೀಡಾದ ಹಂಪಿಯ ಗತವೈಭವ ಸಾರುವ ಭವ್ಯ ವೇದಿಕೆಯ ವರ್ಣರಂಜಿತ ಕಾರ್ಯಕ್ರಮದಲ್ಲಿ ಶನಿವಾರ ಸಂಜೆ ರಾಜ್ಯದ 31ನೇ ಜಿಲ್ಲೆಯಾಗಿ ವಿಜಯನಗರ ಅಧಿಕೃತವಾಗಿ ಉದ್ಘಾಟನೆಗೊಂಡಿತು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಜಿಲ್ಲೆ ಘೋಷಿಸಿದ್ದ ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಜಂಟಿಯಾಗಿ ಕಾರ್ಯಕ್ರಮ ಉದ್ಘಾಟಿಸಿದರು. ಬಳಿಕ ₹464 ಕೋಟಿ ಮೊತ್ತದ ಯೋಜನೆಗಳಿಗೆ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಸಿ.ಎಂ, ‘ರಾಜ್ಯ ಮತ್ತು ಕೇಂದ್ರ ಸರ್ಕಾರದ ಸಹಭಾಗಿತ್ವದಲ್ಲಿ ₹630 ಕೋಟಿ ವೆಚ್ಚದಲ್ಲಿ ಹಂಪಿ ಸೇರಿದಂತೆ ರಾಜ್ಯದ ಹೆಗ್ಗುರುತಿನಂತಿರುವ ಎಲ್ಲಾ ಪ್ರವಾಸಿ ತಾಣಗಳ ಅಭಿವೃದ್ಧಿಗೆ ಯೋಜನೆ ರೂಪಿಸಲಾಗಿದೆ’ ಎಂದು ಹೇಳಿದರು.

ADVERTISEMENT

‘ಹಂಪಿ ಅಂತರರಾಷ್ಟ್ರೀಯ ಪ್ರವಾಸಿಗರ ನೆಚ್ಚಿನ ತಾಣವಾಗಿ ಅಭಿವೃದ್ಧಿಯಾಗಬೇಕು. ಅದಕ್ಕಾಗಿ ಈ ಭಾಗದಲ್ಲಿ ‘ಹೆಲಿ ಟೂರಿಸಂ’ ಆರಂಭಿಸಲಾಗುವುದು. ರಾಜ್ಯದ ಇತರೆ ಪ್ರವಾಸಿ ತಾಣಗಳ ಸಮಗ್ರ ಅಭಿವೃದ್ಧಿಗೆ ಕ್ರಮ ಜರುಗಿಸಲಾಗುವುದು’ ಎಂದು ತಿಳಿಸಿದರು.

‘ವಿಜಯನಗರ ಸಾಮ್ರಾಜ್ಯ ಒಂದೆರಡು ದಿನದಲ್ಲಿ ಕಟ್ಟಿಲ್ಲ. ವಿದ್ಯಾರಣ್ಯರ ಸಂಕಲ್ಪ, ಹಕ್ಕ–ಬುಕ್ಕರ ಛಲದಿಂದ ಇದು ಅಸ್ತಿತ್ವಕ್ಕೆ ಬಂದಿತ್ತು. ಅದೇ ರೀತಿ ಅನೇಕ ಜನರ ಹೋರಾಟ, ಸಚಿವ ಆನಂದ್‌ ಸಿಂಗ್‌ ಅವರ ರಾಜಕೀಯ ಇಚ್ಛಾಶಕ್ತಿಯಿಂದ ಇದು ಜನ್ಮ ತಳೆದಿದೆ. ಈ ಜಿಲ್ಲೆ ರಾಜ್ಯದ ಇತರೆ 30 ಜಿಲ್ಲೆಗಳಂತೆ ಸಮಾನ ಅಭಿವೃದ್ಧಿ ಕಾಣಬೇಕು. ಈಗಾಗಲೇ ಜಿಲ್ಲೆಯಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ. ಕಚೇರಿಗಳ ನಿರ್ಮಾಣಕ್ಕೆ ₹50 ಕೋಟಿ ಬಿಡುಗಡೆ ಮಾಡಲಾಗಿದೆ. ಜಿಲ್ಲೆಯ ಸ್ಥಾಪನೆಯ ದಿನವೇ
ಅಭಿವೃದ್ಧಿ ಪರ್ವ ಆರಂಭಗೊಂಡಿದೆ’ ಎಂದರು.

‘ವಿಜಯನಗರ ಜಿಲ್ಲೆಗಿರುವ ಪರಂಪರೆಯ ಹಿನ್ನೆಲೆ ರಾಜ್ಯದ ಬೇರೆ ಯಾವ ಜಿಲ್ಲೆಗೂ ಇಲ್ಲ. ವಿಜಯನಗರ ಸಾಮ್ರಾಜ್ಯದಲ್ಲಿ ಎಲ್ಲಾ ಪ್ರಜೆಗಳಿಗೆ ಸಮಾನ ಅವಕಾಶಗಳನ್ನು ಕಲ್ಪಿಸಲಾಗಿತ್ತು. ನಮ್ಮ ಸರ್ಕಾರವೂ ಅದೇ ಆಶಯ ಒಳಗೊಂಡಿದೆ. ಈಗ ವಿಜಯನಗರದ ಪುನರ್‌ ಸ್ಥಾಪನೆಯಾಗಿದೆ. ಸರ್ವರೂ ಸುಖ, ಶಾಂತಿ, ಸಮೃದ್ಧಿಯಿಂದ ಇರಬೇಕು. ಅರ್ಥಿಕವಾಗಿ ಎಲ್ಲರೂ ಸಬಲರಾಗಬೇಕು. ಕಟ್ಟಕಡೆಯ ವ್ಯಕ್ತಿಗೂ ಸರ್ಕಾರದ ಎಲ್ಲಾ ಸವಲತ್ತು ಸಿಗಬೇಕು. ಅದಕ್ಕಾಗಿ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಎಲ್ಲಾ ರೀತಿಯ ಸೌಲಭ್ಯ ಕಲ್ಪಿಸಲು ಸರ್ಕಾರ ಮುಂದಾಗಿದೆ. ಈ ಯೋಜನೆಗೆ ಬರುವ ಜನವರಿಯಲ್ಲಿ ಚಾಲನೆ ನೀಡಲಾಗುವುದು’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.