ADVERTISEMENT

ವಿಜಯಪುರ ವಿಮಾನ ನಿಲ್ದಾಣ ಉದ್ಘಾಟನೆಗೆ ಸಜ್ಜು: ಎಂ.ಬಿ. ಪಾಟೀಲ

‘2ನೇ ವಿಮಾನ ನಿಲ್ದಾಣ: ತಿಂಗಳ ಒಳಗೆ ಎಎಐ ವರದಿ’

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2025, 16:27 IST
Last Updated 10 ಏಪ್ರಿಲ್ 2025, 16:27 IST
<div class="paragraphs"><p>ಎಂ.ಬಿ. ಪಾಟೀಲ</p></div>

ಎಂ.ಬಿ. ಪಾಟೀಲ

   

ಬೆಂಗಳೂರು: ‘ವಿಜಯಪುರ ವಿಮಾನ ನಿಲ್ದಾಣ ಉದ್ಘಾಟನೆಗೆ ಸಜ್ಜಾಗಿದೆ. ಪರಿಸರ ಇಲಾಖೆಯ ಅನುಮತಿ ಸಂಬಂಧ ಸುಪ್ರೀಂ ಕೋರ್ಟಿನಲ್ಲಿ ಒಂದು ಪ್ರಕರಣವಿದೆ. ಅದು ಸದ್ಯದಲ್ಲೇ ಇತ್ಯರ್ಥಗೊಳ್ಳುವ ಲಕ್ಷಣಗಳಿವೆ’ ಎಂದು ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ತಿಳಿಸಿದರು.

ಸುದ್ದಿಗಾರರ ಜೊತೆ ಗುರುವಾರ ಅವರು ಮಾತನಾಡಿದರು.

ADVERTISEMENT

‘ಬೆಂಗಳೂರು ಸಮೀಪ ನಿರ್ಮಿಸಲು ಉದ್ದೇಶಿಸಿರುವ ಎರಡನೇ ವಿಮಾನ ನಿಲ್ದಾಣಕ್ಕಾಗಿ ಮೂರು ಸ್ಥಳಗಳನ್ನು ಪರಿಶೀಲಿಸಿರುವ ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರದ (ಎಎಐ) ಉನ್ನತ ಮಟ್ಟದ ತಂಡ ಒಂದು ತಿಂಗಳಲ್ಲಿ ಅಭಿಪ್ರಾಯ ತಿಳಿಸುವ ಸಾಧ್ಯತೆ ಇದೆ’ ಎಂದರು.

 ‘ಎಎಐ ತಂಡ ನೀಡುವ ಅಭಿಪ್ರಾಯವನ್ನು ವಿಸ್ತೃತ ಅಧ್ಯಯನಕ್ಕೆ ವಿಮಾನ‌ ನಿಲ್ದಾಣಗಳನ್ನು ಅಭಿವೃದ್ಧಿಪಡಿಸುವಂಥ ಪರಿಣತ ಕಂಪನಿಗಳ ಮುಂದೆ ಕೊಂಡೊಯ್ಯಲಾಗುವುದು. ನಂತರ ವಿಮಾನ‌ ನಿಲ್ದಾಣಕ್ಕೆ ಸರ್ಕಾರ ಸ್ಥಳವನ್ನು ಅಂತಿಮಗೊಳಿಸಲಿದೆ. ವಿಮಾನ‌ ನಿಲ್ದಾಣ ಎಲ್ಲಿ ಮಾಡಿದರೆ ಸೂಕ್ತ ಎನ್ನುವುದು ಪ್ರಯಾಣಿಕರು ಹಾಗೂ ಕಾರ್ಗೊ ದಟ್ಟಣೆ ಮತ್ತು ಕೈಗಾರಿಕೆಗಳ ಅಗತ್ಯ ಮತ್ತಿತರ ಅಂಶಗಳನ್ನು ಅವಲಂಬಿಸಿದೆ’ ಎಂದರು.

‘ಪಕ್ಷದ ಹಿರಿಯ ನಾಯಕ ಟಿ.ಬಿ. ಜಯಚಂದ್ರ ಅವರು ತಮ್ಮ ಕ್ಷೇತ್ರವಾದ ಶಿರಾ ಸಮೀಪ ಎರಡನೇ ವಿಮಾನ ನಿಲ್ದಾಣ ಬರಲೆಂದು ಪ್ರಯತ್ನಿಸುತ್ತಿದ್ದಾರೆ. ಅಲ್ಲಿ ಜಿಲ್ಲಾ ಮಟ್ಟದ ವಿಮಾನ ನಿಲ್ದಾಣ ಮಾಡಬಹುದೇ ವಿನಾ ಅದು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಆಗುವುದಿಲ್ಲ. ಬಿಜೆಪಿಯ ಅರವಿಂದ ಬೆಲ್ಲದ ಅವರು ಕೂಡ ಉತ್ತರ ಕರ್ನಾಟಕಕ್ಕೆ ಅನುಕೂಲವಾಗುವ ಜಾಗದಲ್ಲಿ ಹೊಸ ವಿಮಾನ ನಿಲ್ದಾಣ ಬರಲಿ ಎನ್ನುತ್ತಿದ್ದಾರೆ. ಕೇವಲ ಜಾಗವನ್ನು ಕೊಟ್ಟ ಮಾತ್ರಕ್ಕೆ ಎಲ್ಲವೂ ಆಗುವುದಿಲ್ಲ’ ಎಂದು ಅವರು ಅಭಿಪ್ರಾಯಪಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.