ಬೆಂಗಳೂರು: ‘ಕಾಂಗ್ರೆಸ್ ಪಕ್ಷಕ್ಕೆ ಪರಿಶಿಷ್ಟ ಜಾತಿ, ಪಂಗಡಗಳ ಬಗ್ಗೆ ನಿಜವಾಗಿಯೂ ಕಾಳಜಿ ಇದ್ದರೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಲಿ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಸವಾಲು ಹಾಕಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸಿದ್ದರಾಮಯ್ಯ ಅವರಿಗೆ ಧೈರ್ಯ ಇದ್ದರೆ ಮಲ್ಲಿಕಾರ್ಜುನ ಖರ್ಗೆ ಅವರನ್ನು ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸುವ ಸಾಹಸ ಮಾಡಲಿ. ರಾಹುಲ್ ಗಾಂಧಿ ಮತ್ತು ಸೋನಿಯಾಗಾಂಧಿ ಅವರು ಇದನ್ನೆಲ್ಲ ಒಪ್ಪುವುದಿಲ್ಲ’ ಎಂದು ಹೇಳಿದರು.
‘ಹಿಂದೆ ಬಿಜೆಪಿ ಕೇಂದ್ರದಲ್ಲಿ ಅಧಿಕಾರದಲ್ಲಿ ಇದ್ದಾಗ ಎ.ಪಿ.ಜೆ.ಅಬ್ದುಲ್ ಕಲಾಂ ಅವರನ್ನು, ನರೇಂದ್ರ ಮೋದಿ ಅವಧಿಯಲ್ಲಿ ರಾಮನಾಥ ಕೋವಿಂದ್ ಮತ್ತು ದ್ರೌಪದಿ ಮುರ್ಮು ಅವರನ್ನು ರಾಷ್ಟ್ರಪತಿಗಳನ್ನಾಗಿ ಮಾಡಿದೆ. ಬಿಜೆಪಿ ಆಡಳಿತದ 6 ರಾಜ್ಯಗಳಲ್ಲಿ ಪರಿಶಿಷ್ಟ ಪಂಗಡದವರು, 4 ರಾಜ್ಯಗಳಲ್ಲಿ ಹಿಂದುಳಿದ ವರ್ಗಕ್ಕೆ ಸೇರಿದವರು ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ’ ಎಂದು ಹೇಳಿದರು.
‘ಸಿದ್ದರಾಮಯ್ಯ ತಮ್ಮನ್ನು ತಾವು ಹಿಂದುಳಿದ ವರ್ಗಗಳ ಚಾಂಪಿಯನ್ ಎಂದು ಕರೆದುಕೊಳ್ಳುತ್ತಾರೆ. ಇತ್ತೀಚೆಗೆ ಕಾಂತರಾಜ ನೇತೃತ್ವದ ಆಯೋಗದ ವರದಿಯನ್ನು ಸಚಿವ ಸಂಪುಟ ಸಭೆಯಲ್ಲಿ ಮಂಡಿಸಿ ಅಂಗೀಕರಿಸುವುದಾಗಿ ಬೊಗಳೆ ಹೊಡೆಯುತ್ತಿದ್ದ ಅವರು, ₹165 ಕೋಟಿ ಖರ್ಚು ಮಾಡಿ ಸಿದ್ದಪಡಿಸಿದ್ದ ವರದಿಯನ್ನು ರಾಹುಲ್‌ಗಾಂಧಿ ಆದೇಶ ಮಾಡಿದ್ದಾರೆಂದು ಕಸದ ಬುಟ್ಟಿಗೆ ಎಸೆಯಲಿಲ್ಲವೇ? ಆಗ ಹಿಂದುಳಿದವರ ಬಗೆಗಿನ ಕಾಳಜಿ ಎಲ್ಲಿ ಹೋಗಿತ್ತು’ ಎಂದು ವಿಜಯೇಂದ್ರ ಪ್ರಶ್ನಿಸಿದರು.
‘ಬಿಜೆಪಿ ಹಿಂದುಳಿದವರ ವಿರೋಧಿ, ಸಾಮಾಜಿಕ ನ್ಯಾಯದ ವಿರೋಧಿ ಎಂದು ಸುಳ್ಳು ಹೇಳುತ್ತಾ ಬಂದಿರುವ ಸಿದ್ದರಾಮಯ್ಯ ಅವರು ಹೈಕಮಾಂಡ್ ಸೂಚನೆ ಮೇರೆಗೆ ಕಾಂತರಾಜ ಆಯೋಗದ ವರದಿಯನ್ನು ಮೂಲೆಗೆ ಹಾಕಿದ್ದು ಏಕೆ? ಇವರಿಂದ ಹಿಂದುಳಿದವರಿಗೆ ನ್ಯಾಯ ಕೊಡಲು ಸಾಧ್ಯವೇ’ ಎಂದು ಪ್ರಶ್ನಿಸಿದರು.
‘ಹಿಂದುಳಿದ ವರ್ಗ, ಪರಿಶಿಷ್ಟ ಜಾತಿ, ಪಂಗಡಗಳನ್ನು, ಅಲ್ಪಸಂಖ್ಯಾತರನ್ನು ತಮ್ಮ ಮನೆಯಾಳುಗಳ ರೀತಿ ನೆಹರೂ–ಗಾಂಧಿ ಕುಟುಂಬ ನೋಡಿಕೊಂಡು ಬಂದಿದೆ. ಇಂಥ ಕಾಂಗ್ರೆಸ್ ಪಕ್ಷದಿಂದ ಹಿಂದುಳಿದ ವರ್ಗಕ್ಕೆ ನ್ಯಾಯ ಕೊಡಲು ಸಾಧ್ಯವೇ ಎಂದು ದೇಶದ ಮತ್ತು ರಾಜ್ಯದ ಜನರು ಕೇಳುತ್ತಿದ್ದಾರೆ’ ಎಂದರು.
‘ಕಾಂಗ್ರೆಸ್ ಪಕ್ಷದಲ್ಲಿ ಒಳಬೇಗುದಿ ಮುಂದುವರೆದಿದೆ. ಆಡಳಿತ ಪಕ್ಷದ ಶಾಸಕರು ಹತಾಶರಾಗಿದ್ದಾರೆ. ಯಾರ ಪರ ವಕಾಲತ್ತು ವಹಿಸಬೇಕು? ಸಿದ್ದರಾಮಯ್ಯ ಅವರ ಪರವೇ ಅಥವಾ ಡಿ.ಕೆ.ಶಿವಕುಮಾರ್ ಅವರ ಪರ ಇರಬೇಕೆ ಎಂಬ ಗೊಂದಲ ಶಾಸಕರಲ್ಲಿ ಮನೆ ಮಾಡಿದೆ. ಈ ಮಧ್ಯೆ ಕಾಂಗ್ರೆಸ್ ಪಕ್ಷದಲ್ಲಿ ಶಾಸಕರ ಖರೀದಿ ನಡೆಯುತ್ತಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಡ್ರಗ್ ಮಾಫಿಯಾ ಕರ್ನಾಟಕಕ್ಕೆ ಹೊಸದಲ್ಲ. ಪ್ರಿಯಾಂಕ್ ಖರ್ಗೆ ಉಸ್ತುವಾರಿ ಸಚಿವರಾಗಿರುವ ಕಲಬುರಗಿ ಜಿಲ್ಲೆಯಲ್ಲಿ ಅದು ಗರಿಷ್ಠ ಪ್ರಮಾಣದಲ್ಲಿದೆಬಿ.ವೈ.ವಿಜಯೇಂದ್ರ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.