ಬಿ.ವೈ ವಿಜಯೇಂದ್ರ, ಬಸನಗೌಡ ಪಾಟೀಲ ಯತ್ನಾಳ
ಬೆಂಗಳೂರು: ರಾಜ್ಯ ಬಿಜೆಪಿ ಘಟಕದಲ್ಲಿ ಭಿನ್ನಮತ ತಾರಕಕ್ಕೆ ಏರಿದೆ. ಕಾಂಗ್ರೆಸ್‌ನೊಂದಿಗೆ ನಾನು ಒಳಒಪ್ಪಂದ ಮಾಡಿಕೊಂಡಿದ್ದಕ್ಕೆ ದಾಖಲೆಗಳಿದ್ದರೆ ತಕ್ಷಣವೇ ಅವುಗಳನ್ನು ಬಿಡುಗಡೆ ಮಾಡಿ ಎಂದು ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ವರು ಬಸನಗೌಡ ಪಾಟೀಲ ಯತ್ನಾಳ ಅವರಿಗೆ ಸವಾಲು ಹಾಕಿದರು.
ಇನ್ನೊಂದೆಡೆ ವಿಜಯೇಂದ್ರ ಜತೆಗೆ ಗುರುತಿಸಿಕೊಂಡಿರುವ ಮಾಜಿ ಶಾಸಕರ ಬಣವು, ಯತ್ನಾಳ ಬಣದ ಮೇಲೆ ಮುಗಿಬಿದ್ದಿದೆ. ಬಿ.ಎಸ್.ಯಡಿಯೂರಪ್ಪ ಅವರ ಮನೆಯಲ್ಲಿ ಭಾನುವಾರ ಸಭೆ ನಡೆಸಿ, ಶಾಸಕ ಬಸನಗೌಡ ಯತ್ನಾಳ ಮತ್ತವರ ಜತೆ ಗುರುತಿಸಿಕೊಂಡಿರುವ ಶಾಸಕರನ್ನು ಪಕ್ಷದಿಂದ ಕೂಡಲೇ ಉಚ್ಚಾಟನೆ ಮಾಡಬೇಕು ವಿಜಯೇಂದ್ರ ಬಣದ ನಾಯಕರು ಒತ್ತಾಯಿಸಿದ್ದಾರೆ. ಈ ಸಂಬಂಧ ಹೈಕಮಾಂಡ್‌ಗೆ ದೂರು ನೀಡಲೂ ಸಿದ್ಧತೆ ನಡೆಸಿದ್ದಾರೆ.
ನಗರದಲ್ಲಿ ಇಂದು ಸುದ್ದಿಗಾರರ ಜತೆಗೆ ಮಾತನಾಡಿದ ವಿಜಯೇಂದ್ರ ಅವರು, ‘ಬೇರೆ ಪಕ್ಷಗಳ ಜೊತೆ ಹೊಂದಾಣಿಕೆ ರಾಜಕಾರಣ ಮಾಡಿಕೊಳ್ಳಬೇಕಾದ ಅವಶ್ಯಕತೆ ನನ್ನಗಿಲ್ಲ. ರಾಜ್ಯಾಧ್ಯಕ್ಷನಾಗಿ ಪಕ್ಷದ ಸಂಘಟನೆ ಹಾಗೂ ಬಲಪಡಿಸುವ ಬಗ್ಗೆ ಗಮನಹರಿಸಿದ್ದೇನೆ. ಯತ್ನಾಳಗೆ ಖಂಡಿತ ಒಳ್ಳೆಯದಾಗುವುದಿಲ್ಲ. ನನ್ನ ವಿರುದ್ಧ ಅವರು ತಮ್ಮೊಂದಿಗೆ ಇನ್ನೂ ಹತ್ತು ಜನರನ್ನು ಸೇರಿಸಿಕೊಳ್ಳಲಿ. ನನಗೇನು ತೊಂದರೆ ಇಲ್ಲ’ ಎಂದರು.
‘ವರಿಷ್ಠರನ್ನು ಭೇಟಿ ಮಾಡಿ, ಮೂರು ಕ್ಷೇತ್ರಗಳ ಉಪಚುನಾವಣೆಗಳ ಹಿನ್ನಡೆ ಬಗ್ಗೆ ಚರ್ಚೆ ಮಾಡಿದ್ದೇನೆ. ರಾಜ್ಯದ ರಾಜಕೀಯ ಪರಿಸ್ಥಿತಿ ಬಗ್ಗೆಯೂ ತಿಳಿಸಿದ್ದೇನೆ. ಭ್ರಷ್ಟ ಕಾಂಗ್ರೆಸ್ ಸರ್ಕಾರದ ವಿರುದ್ಧ ಒಗ್ಗಟ್ಟಿನ ಹೋರಾಟ ಮಾಡಬೇಕು. ಆದರೆ ಕೆಲವರಿಗೆ ಅದು ಅರ್ಥ ಆಗುತ್ತಿಲ್ಲ. ಯಡಿಯೂರಪ್ಪ ಮತ್ತು ವಿಜಯೇಂದ್ರಗೆ ಬೈಯುವುದೇ ಒಂದು ಪದವಿ ಅಂದುಕೊಂಡಿದ್ದಾರೆ. ಯತ್ನಾಳರನ್ನು ಉಚ್ಚಾಟನೆ ಮಾಡಬೇಕು ಎಂಬುದು ಕಾರ್ಯಕರ್ತರ ಅಪೇಕ್ಷೆ. ಈ ಸಂಬಂಧ ಬಿಗಿ ಕ್ರಮ ಆಗಬೇಕು. ಇದರ ಬಗ್ಗೆ ವರಿಷ್ಠರು ತೀರ್ಮಾನ ಮಾಡುತ್ತಾರೆ’ ಎಂದರು.
ವಿಜಯೇಂದ್ರ ಬಣದಲ್ಲಿ ಗುರುತಿಸಿಕೊಂಡಿರುವ ಬಿ.ಸಿ.ಪಾಟೀಲ, ‘ಸ್ವಪಕ್ಷೀಯರ ವಿರುದ್ಧವೇ ನಾಲಿಗೆ ಹರಿಬಿಡುತ್ತಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಅವರನ್ನು ಪಕ್ಷದಿಂದ ಉಚ್ಛಾಟನೆ ಮಾಡುವ ವಿಷಯದಲ್ಲಿ ನಾವು ಹಿಂದೆ ಸರಿದಿಲ್ಲ. ನಾವು ಹೋದಕಡೆಯಲೆಲ್ಲ ಯತ್ನಾಳ ವಿರುದ್ಧ ಏಕೆ ಶಿಸ್ತುಕ್ರಮ ಜರುಗಿಸಿಲ್ಲ ಎಂದು ಕಾರ್ಯಕರ್ತರು ಪ್ರಶ್ನಿಸುತ್ತಿದ್ದಾರೆ. ಹೀಗಾಗಿ ಅವರನ್ನು ಬಿಜೆಪಿಯಿಂದ ಉಚ್ಛಾಟನೆ ಮಾಡಬೇಕೆಂದು ಯಡಿಯೂಪ್ಪನವರ ಗಮನಕ್ಕೆ ತಂದಿದ್ದೇವೆ’ ಎಂದರು.
ಎಂ.ಪಿ.ರೇಣುಕಚಾರ್ಯ, ‘ಬಸನಗೌಡ ಪಾಟೀಲ್ ಯತ್ನಾಳ್‍ಗೆ ಎಲ್ಲಿದೆ ಶಕ್ತಿ? ಅವರ ಹಿಂದೆ ಇರುವುದು ನಾಲ್ಕೈದು ಜನರು ಮಾತ್ರ. ಡಿ.10ರಂದು ನಾವೆಲ್ಲರೂ ದಾವಣಗೆರೆಯಲ್ಲಿ ಅರವತ್ತಕ್ಕೂ ಹೆಚ್ಚು ಮಾಜಿ ಶಾಸಕರು ಸೇರುತ್ತೇವೆ. ಯತ್ನಾಳ್ ಅವರನ್ನು ಉಚ್ಚಾಟನೆ ಮಾಡಬೇಕಾ ಬೇಡವೇ ಎಂಬ ಬಗ್ಗೆ ತೀರ್ಮಾನ ಮಾಡುತ್ತೇವೆ’ ಎಂದರು.
‘ಯತ್ನಾಳ ಜೊತೆ ಸೇರಿಕೊಂಡಿರುವ ರಮೇಶ ಜಾರಕಿಹೊಳಿ, ಕುಮಾರ್ ಬಂಗಾರಪ್ಪ, ಅರವಿಂದ್ ಲಿಂಬಾವಳಿ, ಬಿ.ಪಿ ಹರೀಶ್, ಪ್ರತಾಪ್ ಸಿಂಹ ಅವರಿಗೆ ಒಂದು ಪಾಠ ಆಗಬೇಕು. ಹೀಗಾಗಿ ಅವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ವರಿಷ್ಠರಿಗೆ ದೂರು ನೀಡಲು ನಿರ್ಧರಿಸಲಾಗಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.