ADVERTISEMENT

ವಿಐಪಿ ಸಂಚಾರ: ಸೈರನ್‌ಗೆ ಕಡಿವಾಣ

​ಪ್ರಜಾವಾಣಿ ವಾರ್ತೆ
Published 21 ಜುಲೈ 2025, 22:16 IST
Last Updated 21 ಜುಲೈ 2025, 22:16 IST
   

ಬೆಂಗಳೂರು: ಅತಿ ಗಣ್ಯ ವ್ಯಕ್ತಿಗಳ (ವಿಐಪಿ) ಸಂಚಾರದ ವೇಳೆ ವಾಹನಗಳು ಸೈರನ್‌ ಬಳಸದಂತೆ ಆದೇಶ ಹೊರಡಿಸಲಾಗಿದೆ.

ಸಾರ್ವಜನಿಕರ ಸುರಕ್ಷತೆ ಹಾಗೂ ಶಬ್ದ ಮಾಲಿನ್ಯ ನಿಯಂತ್ರಿಸುವ ಉದ್ದೇಶದಿಂದ
ಹೊರಡಿಸಲಾಗಿರುವ ಈ ಆದೇಶವನ್ನು ಎಲ್ಲಾ ಘಟಕಾಧಿಕಾರಿ ಗಳು ಕಟ್ಟುನಿಟ್ಟಾಗಿ ಪಾಲಿಸುವಂತೆ ರಾಜ್ಯ ಪೊಲೀಸ್‌ ಮಹಾನಿರ್ದೇಶಕ ಡಾ.ಎಂ.ಎ.ಸಲೀಂ ಅವರು ಸೂಚಿಸಿದ್ದಾರೆ.

ಗಣ್ಯ ವ್ಯಕ್ತಿಗಳ ಸಂಚಾರದ ಸಮಯದಲ್ಲಿ ಅನವಶ್ಯಕವಾಗಿ ಸೈರನ್‌ ಬಳಕೆ ಮಾಡುವುದರಿಂದ ಗಣ್ಯರು ಯಾವ ರಸ್ತೆಯಲ್ಲಿ ಚಲಿಸುತ್ತಿದ್ದಾರೆ ಎಂಬ ಬಗ್ಗೆ ಅನಧಿಕೃತ ವ್ಯಕ್ತಿಗಳಿಗೆ ಮಾಹಿತಿ ರವಾನೆಯಾಗಲಿದೆ. ಗಣ್ಯ ವ್ಯಕ್ತಿಗಳಿಗೆ ಅಪಾಯ ಉಂಟಾಗುವ ಸಾಧ್ಯತೆ ಇರುತ್ತದೆ. ಸೈರನ್‌ ಬಳಕೆಯಿಂದ ಸಾರ್ವಜನಿಕರಿಗೆ ತೊಂದರೆ ಆಗುವುದಲ್ಲದೇ ಶಬ್ದ ಮಾಲಿನ್ಯವೂ ಆಗುತ್ತದೆ. ಸಾರ್ವಜನಿಕ ರಸ್ತೆಗಳಲ್ಲಿ ಹಠತ್ತಾಗಿ ಸೈರನ್‌ ಬಸುವುದರಿಂದ ಇತರೆ ವಾಹನಗಳ ಚಾಲಕರಿಗೆ ದ್ವಂದ್ವ ಉಂಟಾಗಿ, ಯಾವ ಕಡೆಗೆ ಚಲಿಸಬೇಕೆಂದು ತಿಳಿಯದೇ ವಾಹನವನ್ನುಅಡ್ಡಾದಿಡ್ಡಿಯಾಗಿ ಚಲಾಯಿಸಿ ಬೆಂಗಾವಲು ಮತ್ತು ಇತರೆ ವಾಹನಗಳಿಗೆ ಗೊಂದಲ ಉಂಟು ಮಾಡುವ ಸಾಧ್ಯತೆ ಇರುತ್ತದೆ ಎಂದು ವಿವರಿಸಿದ್ದಾರೆ.

ADVERTISEMENT

ಅತಿ ಗಣ್ಯರ ಸಂಚಾರದ ವೇಳೆ ವಾಹನಗಳ ತುರ್ತು ಚಲನವಲನದ ಅವಶ್ಯಕತೆಗೆ ಅನುಗುಣವಾಗಿ ದೂರಸಂಪರ್ಕ ಸಾಧನಗಳಾದ ‘ವೈರ್‌ಲೆಸ್‌ ಕಮ್ಯುನಿಕೇಶನ್‌ ವ್ಯವಸ್ಥೆ’ಯನ್ನು ಪರಿಣಾಮಕಾರಿಯಾಗಿ ಉಪಯೋಗಿಸುವುದು ಹೆಚ್ಚು ಶಿಸ್ತಿನ ಹಾಗೂ ಸುರಕ್ಷತೆಯ ಮಾರ್ಗವಾಗಿದೆ ಎಂದು ಆದೇಶದಲ್ಲಿ ತಿಳಿಸಿದ್ದಾರೆ.

ಸೈರನ್‌ಗಳನ್ನು ಕೇವಲ ತುರ್ತು ಸೇವಾ ವಾಹನಗಳಾದ ಆಂಬುಲೆನ್ಸ್‌, ಪೊಲೀಸ್‌ ವಾಹನಗಳು ಹಾಗೂ ಅಗ್ನಿಶಾಮಕ ವಾಹನಗಳು ಅನಿವಾರ್ಯ ಪರಿಸ್ಥಿತಿಗಳಲ್ಲಿ ಮಾತ್ರ ಬಳಸಬೇಕು. ಈ ಆದೇಶವನ್ನು ಪಾಲಿಸುವಂತೆ ಅಧಿಕಾರಿಗಳು, ಸಿಬ್ಬಂದಿಗೆ ಎಲ್ಲ ಘಟಕಾಧಿಕಾರಿಗಳು ಸೂಚನೆ ನೀಡಬೇಕು ಎಂದು ಸಲೀಂ
ಅವರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.