ADVERTISEMENT

ರೆಸಾರ್ಟ್‌ ರಾಜಕೀಯ ಬಿಟ್ಟು ಸಚಿವ ಕಾರ್ಯಕ್ಕೆ ಮರಳಲು ಪತ್ರ ಬರೆಯುವೆ: ವಿಶ್ವನಾಥ್‌

​ಪ್ರಜಾವಾಣಿ ವಾರ್ತೆ
Published 25 ಜನವರಿ 2019, 9:02 IST
Last Updated 25 ಜನವರಿ 2019, 9:02 IST
ಅಡಗೂರು ಎಚ್‌.ವಿಶ್ವನಾಥ್‌
ಅಡಗೂರು ಎಚ್‌.ವಿಶ್ವನಾಥ್‌   

ಮೈಸೂರು: ‘ರೆಸಾರ್ಟ್‌ಗಳಲ್ಲಿ ಕುಳಿತದ್ದು ಸಾಕು, ಕೂಡಲೇ ಸಚಿವ ಕಾರ್ಯಕ್ಕೆ ಮರಳಿ ಎಂದು ಕೋರಿ ಸಮ್ಮಿಶ್ರ ಸರ್ಕಾರದ ಎಲ್ಲ ಸಚಿವರಿಗೆ ಪತ್ರ ಬರೆಯುವೆ’ ಎಂದು ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಅಡಗೂರು ಎಚ್‌.ವಿಶ್ವನಾಥ್ ಹೇಳಿದರು.

‘ಸರ್ಕಾರ ಬೀಳಿಸಬೇಕು ಎನ್ನುವ ಬಿಜೆಪಿಯವರ ತಂತ್ರಗಾರಿಕೆ ನಡೆಯುವುದಿಲ್ಲ. ಇದನ್ನು ಅರಿತುಕೊಳ್ಳಬೇಕು. ಹಾಗಾಗಿ, ಕೆಲಸ ಮಾಡುವುದಕ್ಕೆ ನಮ್ಮ ಸಚಿವರು ಮುಂದಾಗಬೇಕು. ಹೆದರಿ ಕುಳಿತುಕೊಂಡರೆ ಯಾವ ಪ್ರಯೋಜನವೂ ಇಲ್ಲ’ ಎಂದು ಅವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಯಡಿಯೂರಪ್ಪ ಹಾಗೂ ಅವರ ಶಿಷ್ಯರಿಗೆ ಆಪರೇಷನ್‌ ಮಾಡುವುದರಲ್ಲಿ ವಿಪರೀತ ಆಸಕ್ತಿ. ಯಡಿಯೂರಪ್ಪ ಅವರು ವಾಮಮಾರ್ಗದಲ್ಲಿ ಮುಖ್ಯಮಂತ್ರಿ ಆಗಬೇಕು ಎನ್ನುವ ಆಸೆ ಕೈಬಿಡಲಿ. ರಾಜ ಮಾರ್ಗದಲ್ಲಿ ಮುಖ್ಯಮಂತ್ರಿಯಾಗಲಿ ಎಂದು ಸಲಹೆ ನೀಡಿದರು.

ADVERTISEMENT

ವಿರೋಧ ‍ಪಕ್ಷದಸ್ಥಾನದಲ್ಲಿರುವ ಬಿಜೆಪಿಗೆ ಸರ್ಕಾರಕ್ಕೆ ಒಂದೊಳ್ಳೆ ಸಲಹೆ ನೀಡಲು ಸಾಧ್ಯವಾಗಿಲ್ಲ. ಅಧಿಕಾರದ ಬರ ಇರುವ ಬಿಜೆಪಿಯು ಬರ ಅಧ್ಯಯನ ಮಾಡ ಹೊರಟಿರುವುದು ಹಾಸ್ಯಾಸ್ಪದವಾಗಿದೆ ಎಂದರು.

ಕೇಂದ್ರ ಸರ್ಕಾರವು ಇನ್ನೇನು ಬಜೆಟ್‌ ಮಂಡಿಸಲು ಮುಂದಾಗಿದ್ದರೂ ರಾಜ್ಯದ ಬಿಜೆಪಿ ಸಂಸದರೊಬ್ಬರೂ ರಾಜ್ಯಕ್ಕಾಗಿ ಏನೂ ಕೇಳಿಲ್ಲ. ಬೆಂಗಳೂರಿನ ಅಭಿವೃದ್ಧಿಗೆ ಮನಮೋಹನ್‌ ಸಿಂಗ್‌ ಅವರ ನೇತೃತ್ವದ ಕಾಂಗ್ರೆಸ್‌ ಸರ್ಕಾರವು 2006ರಲ್ಲಿ ₹ 25 ಸಾವಿರ ಕೋಟಿ ನೀಡಿತ್ತು. ಅದನ್ನು ಸರಿಯಾಗಿ ಬಳಸಿಕೊಳ್ಳಲಿಲ್ಲ. ಬಜೆಟ್‌ನಲ್ಲಿ ₹ 30 ಸಾವಿರ ಕೋಟಿ ಬೆಂಗಳೂರಿಗೆ ನೀಡಲಿ ಎಂದು ಒತ್ತಾಯಿಸಿದರು.

ಮೀಸಲಾತಿ ಸುಳ್ಳು ಭರವಸೆ:

ಮೇಲ್ವರ್ಗದ ಬಡವರಿಗೆ ಶೇ 10 ಮೀಸಲಾತಿ ನೀಡುವುದಾಗಿ ಕೇಂದ್ರ ಸರ್ಕಾರ ಸುಳ್ಳು ಭರವಸೆ ನೀಡಿದೆ. ಪ್ರಾಯೋಗಿಕವಾಗಿ ಅಸಾಧ್ಯವಾದ ಈ ಪದ್ಧತಿಗೆ ನ್ಯಾಯಾಲಯದಲ್ಲೂ ಮನ್ನಣೆ ಸಿಗದು. ಲೋಕಸಭಾ ಚುನಾವಣೆ ಸಮೀಪಿಸುತ್ತಿರುವಂತೆ ಮಾಡಿದ ರಾಜಕೀಯ ಗಿಮಿಕ್ ಇದು ಎಂದು ಟೀಕಿಸಿದರು.

ನಾಲ್ಕೈದು ಆಕಾಂಕ್ಷಿಗಳು‌‌:

ಪ್ರಧಾನಿ ಹುದ್ದೆಗೆ ಆಕಾಂಕ್ಷಿ ಯಾರು ಎಂಬ ‍ಪ್ರಶ್ನೆಯೇ ಅಸಮಂಜಸ. ದೇವೇಗೌಡರನ್ನೂ ಸೇರಿದಂತೆ ನಾಲ್ಕೈದು ಮಂದಿ ಸಮರ್ಥ ಆಕಾಂಕ್ಷಿಗಳು ದೇಶದಲ್ಲಿದ್ದಾರೆ ಎಂದರು.

ಗಂಡ – ಹೆಂಡತಿ ಜಗಳ ಸರಿಪಡಿಸಿಕೊಳ್ಳುತ್ತೇವೆ:

‘ಮೈಸೂರು ಲೋಕಸಭಾ ಕ್ಷೇತ್ರದ ಹಂಚಿಕೆ ವಿಚಾರದಲ್ಲಿ ಕಾಂಗ್ರೆಸ್– ಜೆಡಿಎಸ್ ನಡುವಿನ ಗಂಡ– ಹೆಂಡತಿ ಜಗಳ ಸರಿಪಡಿಸಿಕೊಳ್ಳುತ್ತೇವೆ ಬಿಡಿ’ ಎಂದು ವಿಶ್ವನಾಥ್‌ ಚಟಾಕಿ ಹಾರಿಸಿದರು.

ಸಮನ್ವಯ ಸಮಿತಿಯನ್ನು ಸಿದ್ದರಾಮಯ್ಯ ಅವರೇ ಆವರಿಸಿಕೊಂಡಿದ್ದಾರಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ’ದಿನೇಶ್‌ ಗುಂಡೂರಾವ್‌ ಹಾಗೂ ನನ್ನನ್ನು ಸಮಿತಿಯೊಳಗೆ ಬಿಟ್ಟುಕೊಳ್ಳುತ್ತಿಲ್ಲ ನಿಜ. ನಾನಿದನ್ನು ಪ್ರಶ್ನಿಸುತ್ತೇನೆ. ಆದರೆ, ಪ್ರಶ್ನಿಸುವ ಧೈರ್ಯ ದಿನೇಶ್‌ ಅವರಿಗಿದೆಯೇ’ ಎಂದು ಕೇಳಿದರು.

ಪ್ರಿಯಾಂಕಾಗೆ ನಾಯಕತ್ವ ಗುಣ

‘ಪ್ರಿಯಾಂಕಾ ಗಾಂಧಿ ಕಾಂಗ್ರೆಸ್ ನಾಯಕತ್ವ ವಹಿಸಿದಲ್ಲಿ ಯಶಸ್ಸು ಖಚಿತ. ಆಕೆ, ಇಂದಿರಾ ಗಾಂಧಿಯ ತದ್ರೂಪಿ. ಹತ್ತಿ ಸೀರೆ ಉಟ್ಟು ಭಾಯಿಯೊ... ಬೆಹನೊ... ಎಂದು ಹೊರಟರೆ ಜನಬೆಂಬಲ ಬೆನ್ನ ಹಿಂದೆಯೇ ಬರುತ್ತದೆ’ ಎಂದು ವಿಶ್ವನಾಥ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.