ADVERTISEMENT

‘ನಮ್ಮ ಆರ್‌ಎಸ್‌ಎಸ್‌’ಗೆ ತೀವ್ರ ಆಕ್ಷೇಪ: ಸಭಾಧ್ಯಕ್ಷ ಕಾಗೇರಿ ವಿರುದ್ಧ ವಾಗ್ವಾದ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2022, 19:57 IST
Last Updated 24 ಮಾರ್ಚ್ 2022, 19:57 IST
ವಿಶ್ವೇಶ್ವರ ಹೆಗಡೆ ಕಾಗೇರಿ
ವಿಶ್ವೇಶ್ವರ ಹೆಗಡೆ ಕಾಗೇರಿ    

ಬೆಂಗಳೂರು: ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ‘ನಮ್ಮ ಆರ್‌ಎಸ್‌ಎಸ್‌’ ಎಂದು ಹೇಳಿದ್ದು ಕಾಂಗ್ರೆಸ್‌ ಶಾಸಕರ ತೀವ್ರ ಆಕ್ಷೇಪಕ್ಕೆ ಕಾರಣವಾಯಿತು. ಇದು ವಿಧಾನಸಭೆಯಲ್ಲಿ ಗುರುವಾರ ಬಿಜೆಪಿ ಮತ್ತು ಕಾಂಗ್ರೆಸ್‌ ಸದಸ್ಯರ ಮಧ್ಯೆ ಬಿಸಿ ಬಿಸಿ ವಾಗ್ವಾದಕ್ಕೂ ಕಾರಣವಾಯಿತು.

ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಅವರು ಕಾನೂನು ಸುವ್ಯವಸ್ಥೆ ಕುರಿತು ಮಾತನಾಡುವ ಸಂದರ್ಭದಲ್ಲಿ ಆರ್‌ಎಸ್‌ಎಸ್‌ ಎಂಬ ಪದವನ್ನು ಬಳಸಿದರು. ಆಗ ಮಧ್ಯ ಪ್ರವೇಶಿಸಿದ ಕಾಗೇರಿ, ‘ಸಿದ್ದರಾಮಯ್ಯ ತಮ್ಮ ಮಾತುಗಳ ಮಧ್ಯೆ ಅಗತ್ಯ ಇಲ್ಲದಿದ್ದರೂ ನಮ್ಮ ಆರ್‌ಎಸ್‌ಎಸ್‌ ಅನ್ನು ಎಳೆದು ತರುತ್ತಾರೆ’ ಎಂದು ಹೇಳಿದರು.

ಈ ಮಾತನ್ನು ಕಾಂಗ್ರೆಸ್‌ನ ಜಮೀರ್‌ ಅಹ್ಮದ್ ಖಾನ್ ಮತ್ತು ಪ್ರಿಯಾಂಕ್‌ ಖರ್ಗೆ ಮುಂತಾದವರು ಆಕ್ಷೇಪಿಸಿದರು. ‘ಸಭಾಧ್ಯಕ್ಷ ಪೀಠದಲ್ಲಿ ಕುಳಿತು ಆರ್‌ಎಸ್‌ಎಸ್‌ನವರು ಎಂದು ಹೇಳುವುದು ಸರಿಯಲ್ಲ’ ಎಂದರು.

ADVERTISEMENT

ಅದಕ್ಕೆ ತಿರುಗೇಟು ನೀಡಿದ ಕಾಗೇರಿ, ‘ನಾನು ಆರ್‌ಎಸ್‌ಎಸ್‌ನಿಂದಲೇ ಬಂದವನು ಹೇಳುವುದರಲ್ಲಿ ತಪ್ಪೇನು’ ಎಂದು ಪ್ರಶ್ನಿಸಿದರು. ಆಗ ಮಧ್ಯ ಪ್ರವೇಶಿಸಿದ ಸಿದ್ದರಾಮಯ್ಯ, ‘ಆರ್‌ಎಸ್‌ಎಸ್‌ನಿಂದ ದೇಶದಲ್ಲಿ ಮನುವಾದ ಸ್ಥಾಪನೆ ಆಗುತ್ತದೆ’ ಎಂದರು.

‘ಈಗ ದೇಶದಲ್ಲಿ ರಾಷ್ಟ್ರಪತಿ, ಪ್ರಧಾನಿ, ಹಲವು ರಾಜ್ಯಗಳಲ್ಲಿ ಮುಖ್ಯಮಂತ್ರಿಗಳು ಆರ್‌ಎಸ್‌ಎಸ್‌ವರೇ ಇದ್ದಾರೆ’ ಎಂದು ಸಚಿವ ಆರಗ ಜ್ಞಾನೇಂದ್ರ ಹೇಳಿದರು.

‘ಮುಂದೆ ಎಲ್ಲ ಮುಸ್ಲಿಮರು ಮತ್ತು ಕ್ರೈಸ್ತರು ಆರ್‌ಎಸ್‌ಎಸ್‌ನವರೇ ಆಗುತ್ತಾರೆ’ ಎಂದು ಸಚಿವ ಈಶ್ವರಪ್ಪ ಅವರು ಹೇಳಿದಾಗ ಕಾಂಗ್ರೆಸ್‌ನ ಕೆ.ಜೆ.ಜಾರ್ಜ್ ಮತ್ತು ಯು.ಟಿ.ಖಾದರ್‌ ಆಕ್ಷೇಪಿಸಿದರು.

‘ಸಭಾಧ್ಯಕ್ಷರ ಪೀಠದಲ್ಲಿ ಕುಳಿತು ಆರ್‌ಎಸ್‌ಎಸ್‌ ಪರ ಇದ್ದೇನೆ ಎಂದು ಹೇಳಿದ್ದೀರಿ. ಇದು ಸರಿಯಲ್ಲ. ಆರ್‌ಎಸ್‌ಎಸ್‌ನವರು ದೆಹಲಿಯಲ್ಲಿ 150 ಬಾರಿ ಸಭೆಗಳನ್ನು ನಡೆಸಿ ಸಂವಿಧಾನ ಬದಲಿಸುತ್ತೇವೆ’ ಎಂದು ಹೇಳಿದ್ದಾರೆ ಎಂದು ಕಾಂಗ್ರೆಸ್‌ನ ಪ್ರಿಯಾಂಕ್‌ ಖರ್ಗೆ ಹೇಳಿದಾಗ, ‘ಸುಮ್ಮನೆ ಇಲ್ಲದ್ದೆಲ್ಲ ಹೇಳಿ ದಾರಿ ತಪ್ಪಿಸಬೇಡಿ. ರಾಜಕೀಯ ಹೊರಗೆ ಮಾಡಿ’ ಎಂದು ಕಾಗೇರಿ ತಿರುಗೇಟು ನೀಡಿದರು.

‘ಬೆಂಕಿ ಹಚ್ಚುವ ಅಯೋಗ್ಯ’
ಕಾಂಗ್ರೆಸ್‌ನ ಜಮೀರ್‌ ಅಹ್ಮದ್ ಅವರನ್ನು ಉದ್ದೇಶಿಸಿ ಸಚಿವ ಕೆ.ಎಸ್‌.ಈಶ್ವರಪ್ಪ ಅವರು, ‘ಬೆಂಕಿ ಹಚ್ಚುವ ಅಯೋಗ್ಯ’ ಎಂದು ಹೇಳಿದ್ದು ಕಾಂಗ್ರೆಸ್‌ ಸದಸ್ಯರನ್ನು ಕೆರಳಿಸಿ, ವಿಧಾನಸಭೆಯಲ್ಲಿ ಗದ್ದಲಕ್ಕೆ ಕಾರಣವಾಯಿತು.

ವಿರೋಧ ಪಕ್ಷದ ಉಪನಾಯಕ ಯು.ಟಿ.ಖಾದರ್‌, ಕಾಂಗ್ರೆಸ್‌ನ ರಿಜ್ವಾನ್‌ ಅರ್ಷದ್‌, ಯತೀಂದ್ರ ಸಿದ್ದರಾಮಯ್ಯ, ಜಮೀರ್‌ ಅಹ್ಮದ್‌ ಅವರು ಈಶ್ವರಪ್ಪ ಅವರು ಹೇಳಿದ ಮಾತನ್ನು ಕಡತದಿಂದ ತೆಗೆದು ಹಾಕುವಂತೆ ಆಗ್ರಹಿಸಿದರು.

‘ಮೈಮೇಲೆ ಗ್ಯಾನ ಇಟ್ಟುಕೊಂಡು ಮಾತನಾಡಿ. ಶಿವಮೊಗ್ಗದಲ್ಲಿ ಬೆಂಕಿ ಹಚ್ಚಿದ್ದೇ ಈಶ್ವರಪ್ಪ, ಅವರಿಗೆ ನನ್ನ ಕುರಿತು ಮಾತನಾಡಲು ನೈತಿಕ ಹಕ್ಕಿಲ್ಲ’ ಎಂದು ಜಮೀರ್‌ ಕಿಡಿಕಾರಿದರು.

‘ಸದಸ್ಯರು ಬಳಸಿದ ಪದಗಳನ್ನು ನೋಡುತ್ತೇನೆ. ಅಸಂಸದೀಯ ಪದಗಳು ಮಾತ್ರವಲ್ಲ, ಸಾಮರಸ್ಯ ಕೆಡಿಸುವ ಪದಗಳು ಯಾರೂ ಆಡಿದರೂ ಕಡತದಿಂದ ತೆಗೆಯಬೇಕಾಗುತ್ತದೆ’ ಎಂದು ಸಭಾಧ್ಯಕ್ಷ ಕಾಗೇರಿ ಹೇಳಿದರು. ಇದಕ್ಕೆ ಸಹಮತ ವ್ಯಕ್ತಪಡಿಸಿದ ಸಿದ್ದರಾಮಯ್ಯ, ‘ಒಂದು ವೇಳೆ ನಾನು ಅಂತಹ ಮಾತನಾಡಿದರೆ ಮುಲಾಜಿಲ್ಲದೆ ತೆಗೆದು ಹಾಕಿ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.