ಬೆಂಗಳೂರು: ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಮಹದೇವಪುರ ಮತ್ತು ರಾಜಾಜಿನಗರದಲ್ಲಿ ಮತಗಳ್ಳತನ ನಡೆದಿದೆ ಎಂದು ಆರೋಪಿಸಿರುವ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಇಂದು ಕಾಂಗ್ರೆಸ್ ಪ್ರತಿಭಟನೆ ಹಮ್ಮಿಕೊಂಡಿದೆ.
ಪ್ರತಿಭಟನೆ ಆರಂಭಕ್ಕೂ ಮುನ್ನ ಎಕ್ಸ್ ಮೂಲಕ ಬಿಜೆಪಿ ರಾಹುಲ್‌ಗೆ 13 ಪ್ರಶ್ನೆಗಳನ್ನು ಕೇಳಿದ್ದು, ‘ಬಹಳಷ್ಟು ದಿನಗಳಿಂದ ಕನ್ನಡಿಗರು ಈ ಪ್ರಶ್ನೆಗಳಿಗೆ ನಿಮ್ಮಿಂದ ಉತ್ತರವನ್ನು ಬಯಸುತ್ತಿದ್ದು, ನೀವು ಈ ಪ್ರಶ್ನೆಗಳಿಗೆ ಉತ್ತರಿಸುತ್ತೀರಿ ಎಂದು ನಾವು ನಂಬಿದ್ದೇವೆ’ ಎಂದು ಹೇಳಿದೆ.
ಆಂಧ್ರ ಪ್ರದೇಶ ಹಾಗೂ ತೆಲಂಗಾಣದ ಕಾಂಗ್ರೆಸ್‌ನ ಚುನಾವಣೆಯ ಖರ್ಚಿಗಾಗಿ, ಕರ್ನಾಟಕದ ಮಹರ್ಷಿ ವಾಲ್ಮೀಕಿ ನಿಗಮದ ₹187 ಕೋಟಿ ಹಣವನ್ನು ಅಕ್ರಮವಾಗಿ ವರ್ಗಾಯಿಸಿ ದುರ್ಬಳಕೆ ಮಾಡಿಕೊಂಡ ಹಗರಣವನ್ನು ಜಾರಿ ನಿರ್ದೇಶನಾಲಯ ಬಯಲು ಮಾಡಿದೆ. ಈ ಹಗರಣಕ್ಕೆ ಸಂಬಂಧಿಸಿದಂತೆ ಸಚಿವ ನಾಗೇಂದ್ರ ಅವರ ರಾಜೀನಾಮೆ ಹೊರತು ಬೇರೆ ಯಾವುದೇ ಕ್ರಮಗಳನ್ನು ನಿಮ್ಮ ಸರ್ಕಾರ ಕೈಗೊಂಡಿಲ್ಲ. ಪರಿಶಿಷ್ಟ ಪಂಗಡಗಳ ಕಲ್ಯಾಣಕ್ಕಿದ್ದ ನಿಧಿಯನ್ನು ಕಾಂಗ್ರೆಸ್ ತನ್ನ ಪಾರ್ಟಿ ಫಂಡ್ ಗೆ ಬಳಸಿದಕ್ಕಾಗಿ ನೀವು ಅವರ ಕ್ಷಮೆಯಾಚಿಸುವುದಿಲ್ಲವೇ..?
ಮುಡಾ ಹಗರಣ, ಕಾರ್ಮಿಕ ಕಿಟ್ ಹಗರಣ, ವಸತಿ ಹಗರಣ, ಅಬಕಾರಿ ಲೈಸೆನ್ಸ್ ನವೀಕರಣ ಹಗರಣ, ವೈನ್ ವ್ಯಾಪಾರಿಗಳಿಂದ ₹200 ಕೋಟಿ ಲಂಚಕ್ಕೆ ಬೇಡಿಕೆ ಸೇರಿದಂತೆ, ನಿಮ್ಮ ಸರ್ಕಾರದಲ್ಲಿ ಭ್ರಷ್ಟಾಚಾರ ಮಿತಿಮೀರಿದೆ. ಇದೇನಾ ನೀವು ದ್ವೇಷದ ಅಂಗಡಿಯಲ್ಲಿ ತೆರೆದ ‘ಭ್ರಷ್ಟಾಚಾರದ ಮಾರುಕಟ್ಟೆ’.?
ಪರಿಶಿಷ್ಟರ ಕಲ್ಯಾಣಕ್ಕೆ ಮೀಸಲಾಗಿದ್ದ ₹40 ಸಾವಿರ ಕೋಟಿ ಅನುದಾನವನ್ನು ಅಲ್ಪಸಂಖ್ಯಾತರ ಕಲ್ಯಾಣಕ್ಕೆ ವಿನಿಯೋಗಿಸುವ ಮೂಲಕ, ನಿಮ್ಮ ಸರ್ಕಾರ ಪರಿಶಿಷ್ಟರಿಗೆ ಮಹಾದ್ರೋಹ ಎಸಗಿದೆ. ನೀವು ನಮ್ಮ ಪರಿಶಿಷ್ಟ ಸಮುದಾಯದ ಸಹೋದರ-ಸಹೋದರಿಯರ ಬಳಿ ಯಾವಾಗ ಕ್ಷಮೆಯಾಚಿಸುತ್ತಿರಿ ಮತ್ತು ಅವರ ಹಣವನ್ನು ಯಾವಾಗ ಹಿಂದಿರುಗಿಸುತ್ತೀರಿ ಎಂದು ಹೇಳುವಿರಾ..?
ನಿಮ್ಮ ಸರ್ಕಾರದ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಅಲ್ಪಸಂಖ್ಯಾತರಿಗೆ ಮೀಸಲಾತಿ ನೀಡಲು ಸಂವಿಧಾನವನ್ನೇ ಬದಲಾಯಿಸುತ್ತಾರಂತೆ. ನಿಮ್ಮ ಡಿಸಿಎಂ ಹೇಳಿಕೆಗೆ ನಿಮ್ಮ ಸಹಮತವಿದೆಯೇ..??
ಬಾಬಾ ಸಾಹೇಬ್ ಅಂಬೇಡ್ಕರ್ ವಿರಚಿತ ಸಂವಿಧಾನವನ್ನು ಬದಲಾಯಿಸಲು ನೀವು ಮಾಡಿದ ಪ್ರಯತ್ನಗಳಿಗೆ ಸಾರ್ವಜನಿಕವಾಗಿ ಕ್ಷಮೆಯಾಚಿಸುವಿರಾ..?
ಜನಸಾಮಾನ್ಯರಿಗೆ ಬೆಲೆಯೇರಿಕೆಯ ಬರೆ ಎಳೆದ ನೀವು, ಅವರ ಬಳಿ ಕ್ಷಮೆಯಾಚಿಸುವುದಿಲ್ಲವೇ..?
ಕನ್ನಡ ಓದಲು, ಬರೆಯಲು ಬಾರದ ಮಂತ್ರಿಗೆ ಶಿಕ್ಷಣ ಸಚಿವನ ಪಟ್ಟ ನೀಡಿದ ಪರಿಣಾಮ ಕರ್ನಾಟಕದ ಶಿಕ್ಷಣ ಇಲಾಖೆ ಬೋರಲು ಬಿದ್ದಿದೆ. ಮಕ್ಕಳಿಗೆ ಶೂ, ಸಾಕ್ಸ್, ಸಮವಸ್ತ್ರ ಸಹ ನೀಡಲು ಬೊಕ್ಕಸದಲ್ಲಿ ದುಡ್ಡಿಲ್ಲದಷ್ಟು ಸರ್ಕಾರ ದಿವಾಳಿಯಾಗಿದೆ. ಕರ್ನಾಟಕವನ್ನು ದಿವಾಳಿ ಮಾಡಿರುವ ನೀವು ಈ ಬಗ್ಗೆ ಕನ್ನಡಿಗರ ಕ್ಷಮೆಯಾಚಿಸುತ್ತೀರಾ..?
ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ, ಮಾದಕ ದ್ರವ್ಯ ಮತ್ತು ಭಯೋತ್ಪಾದಕ ಚಟುವಟಿಕೆಗಳು ಹೆಚ್ಚಿವೆ. ಗುಜರಾತ್ ಎಟಿಎಸ್ ಬೆಂಗಳೂರಿನಲ್ಲಿ ಅಡಗಿಕೊಂಡಿದ್ದ ಅಲ್-ಖೈದಾ ಉಗ್ರನನ್ನು ಬಂಧಿಸಿದೆ. ಮುಂಬೈ ಪೊಲೀಸರು ಮೈಸೂರಿನಲ್ಲಿ ಮಾದಕ ದ್ರವ್ಯ ತಯಾರಿಕಾ ಘಟಕವನ್ನು ಪತ್ತೆ ಹಚ್ಚಿದ್ದಾರೆ. ಆದರೆ ಇವು ಯಾವುದೂ ಕರ್ನಾಟಕ ಪೊಲೀಸರ ಗಮನಕ್ಕೆ ಬಂದಿಲ್ಲ. ನಿಮ್ಮ ಸರ್ಕಾರದ ಆಂತರಿಕ ಭದ್ರತಾ ಲೋಪ ಮತ್ತು ಗುಪ್ತಚರ ವೈಫಲ್ಯಗಳ ಬಗ್ಗೆ ನೀವು ಕ್ಷಮೆಯಾಚಿಸುವುದಿಲ್ಲವೇ..?
ಬೆಳಗಾವಿ ಮತ್ತು ಬಾಗಲಕೋಟೆಯಲ್ಲಿ ತಳ ಸಮುದಾಯದ ಮಹಿಳೆಯರ ಮೇಲೆ ಮಾನವಕುಲ ತಲೆತಗ್ಗಿಸುವಂತಹ ಪೈಶಾಚಿಕ ಘಟನೆ ನಡೆದಿವೆ. ಆ ಮಹಿಳೆಯರಿಗೆ ನಿಮ್ಮ ಸರ್ಕಾರದಿಂದ ಇದುವರೆಗೂ ನ್ಯಾಯವು ದೊರೆತಿಲ್ಲ, ಆರೋಪಿಗಳ ಬಂಧನವೂ ಆಗಿಲ್ಲ. ಮಹಿಳೆಯರ ಮೇಲಾದ ಈ ದೌರ್ಜನ್ಯಗಳ ಬಗ್ಗೆ ನೀವು ಮೌನ ಮುರಿಯುವುದು ಯಾವಾಗ..?
ಭಯೋತ್ಪಾದಕ ಗಲಭೆಕೋರರಿಗೆ ಬೆಂಬಲ ನೀಡಿದ ನೀವು ನಾಡಿನ ಜನರ ಕ್ಷಮೆಯಾಚಿಸುವುದಿಲ್ಲವೇ..?
ಅನೇಕ ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಇಷ್ಟಾದರೂ ನಿಮ್ಮ ಸಚಿವರು ಮಾತ್ರ ನಾಟ್ ರೀಚೆಬಲ್..!! ಈ ಬಗ್ಗೆ ನೀವು ನಾಡಿನ ಅನ್ನದಾತರ ಕ್ಷಮೆಯಾಚಿಸುವುದಿಲ್ಲವೇ..?
ಡಿಸಿಎಂ ಶಿವಕುಮಾರ್ ಅವರಿಗೆ ಬೆಂಗಳೂರಿನ ಅಭಿವೃದ್ಧಿಗಿಂತ ತಮ್ಮ ಮುಖ್ಯಮಂತ್ರಿಯ ಕುರ್ಚಿ ಮೇಲೆ ಹೆಚ್ಚು ಗಮನ. ಬೆಂಗಳೂರನ್ನು ನರಕವನ್ನಾಗಿಸಿದಕ್ಕೆ ಬೆಂಗಳೂರಿಗರ ಬಳಿ ನೀವು ಕ್ಷಮೆಯಾಚಿಸುವುದಿಲ್ಲವೇ..?
ಆರ್‌ಸಿಬಿ ವಿಜಯೋತ್ಸವದ ಸಮಯದಲ್ಲಿ ಪೊಲೀಸರ ಎಚ್ಚರಿಕೆಯನ್ನು ಕಡೆಗಣಿಸಿ, ಸಮಾರಂಭ ಆಯೋಜಿಸಿದ್ದಕ್ಕೆ ಹಾಗೂ ಕಾಂಗ್ರೆಸ್ಸಿಗರ ಫೋಟೋ ಹುಚ್ಚಿಗೆ ಅಮಾಯಕ 11 ಜನ ಬಲಿಯಾಗಿದ್ದಾರೆ. ಕಾಂಗ್ರೆಸ್ ಸರ್ಕಾರದ ಪ್ರಾಯೋಜಿತ ಈ ಕೊಲೆಗೆ ನೀವು ಕನ್ನಡಿಗರ ಬಳಿ ಕ್ಷಮೆಯಾಚಿಸುವುದಿಲ್ಲವೇ..?
ಬಡವರು ಹಾಗೂ ಮಧ್ಯಮ ವರ್ಗದವರಿಗೆ ಬೆಲೆಯೇರಿಕೆ ಬರೆ ಎಳೆದ ನೀವು ಅವರ ಬಳಿ ಕ್ಷಮೆಯಾಚಿಸುವುದಿಲ್ಲವೇ..?
ಎನ್ನುವ ಪ್ರಶ್ನೆಗಳನ್ನು ಬಿಜೆಪಿ ಎಕ್ಸ್‌ನಲ್ಲಿ ಅಂಕಿ ಅಂಶಗಳ ಸಮೇತ ಕೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.