ADVERTISEMENT

ಮತ ಕಳವು: ಎಐಸಿಸಿಗೆ 1.12 ಕೋಟಿ ಸಹಿ ಸಂಗ್ರಹ ದಾಖಲೆ ಸಲ್ಲಿಕೆ

ಚುನಾವಣಾ ಆಯೋಗದಿಂದಲೂ ಅನ್ಯಾಯ: ಡಿಕೆಶಿ

​ಪ್ರಜಾವಾಣಿ ವಾರ್ತೆ
Published 10 ನವೆಂಬರ್ 2025, 14:17 IST
Last Updated 10 ನವೆಂಬರ್ 2025, 14:17 IST
<div class="paragraphs"><p>ಐಸಿಸಿಗೆ 1.12 ಕೋಟಿ ಸಹಿ ಸಂಗ್ರಹ ದಾಖಲೆ ಸಲ್ಲಿಕೆ</p></div>

ಐಸಿಸಿಗೆ 1.12 ಕೋಟಿ ಸಹಿ ಸಂಗ್ರಹ ದಾಖಲೆ ಸಲ್ಲಿಕೆ

   

ಚಿತ್ರಕೃಪೆ: DKShivakumar

ನವದೆಹಲಿ: ‘ಚುನಾವಣೆಗಳಲ್ಲಿ ಮತ ಕಳ್ಳತನ‌ ನಡೆಯುತ್ತಿರುವ ಬಗ್ಗೆ ಮೊದಲು ಪತ್ತೆ ಹಚ್ಚಿದ್ದೇ ಕರ್ನಾಟಕದಲ್ಲಿ. ಮಹಾರಾಷ್ಟ್ರ, ಹರಿಯಾಣ ಹಾಗೂ ಬಿಹಾರದಲ್ಲಿ ನಡೆಸಿರುವ ಅಕ್ರಮಗಳು ಈಗ ಬಯಲಿಗೆ ಬಂದಿವೆ‌’ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದರು. 

ADVERTISEMENT

ಮತಕಳ್ಳತನ ವಿರುದ್ಧ ರಾಜ್ಯದಲ್ಲಿ ನಡೆಸಿದ ಅಭಿಯಾನದಲ್ಲಿ ಸಂಗ್ರಹಿಸಲಾದ 1,12,41,000 ಸಹಿಗಳ ದಾಖಲೆಯನ್ನು ಎಐಸಿಸಿಗೆ ಸೋಮವಾರ ಸಲ್ಲಿಸಲಾಯಿತು. 

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಿವಾಸದಲ್ಲಿ ಡಿ.ಕೆ. ಶಿವಕುಮಾರ್ ನೇತೃತ್ವದ ನಿಯೋಗವು ಸಹಿ ಸಂಗ್ರಹ ದಾಖಲೆಗಳ ಒಂದು ಪೆಟ್ಟಿಗೆಯನ್ನು ಸಾಂಕೇತಿಕವಾಗಿ ಸಲ್ಲಿಸಿತು. ಉಳಿದ ದಾಖಲೆಗಳನ್ನು ಎಐಸಿಸಿ ಕಾರ್ಯದರ್ಶಿ ನೆಟ್ಟ ಡಿಸೋಜ ಅವರಿಗೆ ಹಸ್ತಾಂತರಿಸಿತು.

ಬಳಿಕ ಸುದ್ದಿಗಾರರ ಜತೆಗೆ ಮಾತನಾಡಿದ ಶಿವಕುಮಾರ್‌, ‘ಖರ್ಗೆ ಮಾರ್ಗದರ್ಶನದಲ್ಲಿ ಮತದಾನದ ಹಕ್ಕು ರಕ್ಷಣೆ ಹೋರಾಟ ಮಾಡಿದ್ದೇವೆ. ಒಬ್ಬರಿಗೆ ಒಂದು ಮತ ಎಂದು ನಾವು ಹೋರಾಟ ಮಾಡುತ್ತಿದ್ದೇವೆ. ಮತ ಕಳ್ಳತನವನ್ನು ಮೊದಲು ಪತ್ತೆ ಹಚ್ಚಿದ್ದೇ ನಮ್ಮ ರಾಜ್ಯದಲ್ಲಿ. ಎಐಸಿಸಿ ಸಂಶೋಧನಾ ವಿಭಾಗ, ನಮ್ಮ ಅಭ್ಯರ್ಥಿಯಾಗಿದ್ದ ಮನ್ಸೂರ್ ಅಲಿ ಖಾನ್ ಹಾಗೂ ಕೆಪಿಸಿಸಿ ತಂಡ ಸೇರಿ ಈ ಮತ ಕಳ್ಳತನ ಪತ್ತೆ ಮಾಡಿ ಎಐಸಿಸಿಗೆ ಮಾಹಿತಿ ನೀಡಿದೆವು’ ಎಂದು ವಿವರಿಸಿದರು.

‘ಚುನಾವಣಾ ಆಯೋಗವು ಬಿಹಾರದ ಮತದಾರರಿಗೆ ಸರಿಯಾದ ನ್ಯಾಯ ಒದಗಿಸಿಲ್ಲ. ಬಿಜೆಪಿ ಸಂವಿಧಾನಿಕ ಸಂಸ್ಥೆಗಳನ್ನು ದುರುಪಯೋಗ‌ ಮಾಡಿಕೊಂಡಿದೆ. ಯಾವುದು ಕಾಡದಿದ್ದರೂ ಆತ್ಮಸಾಕ್ಷಿ ಎನ್ನುವುದು ಇದ್ದೇ ಇರುತ್ತದೆ. ಅದು ಅಂತಿಮವಾಗಿ ಕೆಲಸ ಮಾಡಲಿದೆ’ ಎಂದು ಹೇಳಿದರು.

ವಿಧಾನಸೌಧದಲ್ಲಿ ಭಯೋತ್ಪಾದಕರಿದ್ದಾರೆ ಎಂಬ ಎಚ್‌.ಡಿ. ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ ಶಿವಕುಮಾರ್‌ ಅವರು, ‘ಕುಮಾರಸ್ವಾಮಿ ಅವರೂ ಭಯೋತ್ಪಾದಕರ ಭಾಗವಾಗಿದ್ದಾರೆಯೇ? ಅವರೂ ವಿಧಾನಸೌಧದಲ್ಲಿ ಕುಳಿತಿರಲಿಲ್ಲವೇ? ಅವರಿಗೂ, ಅವರ ಪಕ್ಷದವರಿಗೂ ಹಾಗೂ ಅವರ ಆಡಳಿತಕ್ಕೂ ಇದು ಅನ್ವಯಿಸುತ್ತದೆ’ ಎಂದು ತಿರುಗೇಟು ನೀಡಿದರು.

ಮುಖ್ಯಮಂತ್ರಿ ಹುದ್ದೆ ಬದಲಾವಣೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ನಾನು ರಾಜಕೀಯ ವಿಚಾರಗಳನ್ನು ಮಾತನಾಡುವುದಿಲ್ಲ. ನಾನು ಪ್ರಜಾಪ್ರಭುತ್ವ, ಮತದಾನದ ಹಕ್ಕು, ಸಂವಿಧಾನವನ್ನು ಉಳಿಸುವ ವಿಚಾರವಾಗಿ ಮಾತನಾಡುತ್ತೇನೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.