ADVERTISEMENT

ಮತ ಕಳ್ಳತನ: ದನ ಕಾಯುವ ಮಕ್ಕಳಂತೆ ರಾಹುಲ್‌ ಗಾಂಧಿ ಆರೋಪ– ವಿ.ಸೋಮಣ್ಣ ವ್ಯಂಗ್ಯ

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2025, 15:57 IST
Last Updated 8 ಆಗಸ್ಟ್ 2025, 15:57 IST
ವಿ.ಸೋಮಣ್ಣ
ವಿ.ಸೋಮಣ್ಣ   

ನವದೆಹಲಿ: ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅಪ್ರಬುದ್ಧ ನಾಯಕ. ದನ ಕಾಯುವ ಮಕ್ಕಳ ರೀತಿಯಲ್ಲಿ ಅವರು ಆಪಾದನೆ ಮಾಡುತ್ತಿದ್ದಾರೆ ಎಂದು ಕೇಂದ್ರ ಸಚಿವ ವಿ.ಸೋಮಣ್ಣ ಟೀಕಿಸಿದರು. 

ಶುಕ್ರವಾರ ಇಲ್ಲಿ ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ‘ಜನರನ್ನು ದಿಕ್ಕು ತಪ್ಪಿಸುವ ‌ಕೆಲಸ ಮಾಡುತ್ತಿದ್ದಾರೆ. ಲೋಕಸಭೆ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್‌ ಸರ್ಕಾರ ಇತ್ತು. ರಾಜ್ಯ ಸರ್ಕಾರದ ಅಧಿಕಾರಿಗಳನ್ನೇ ಚುನಾವಣಾ ಕೆಲಸಕ್ಕೆ ನಿಯೋಜಿಸಲಾಗಿತ್ತು. ಅನಗತ್ಯವಾಗಿ ಕೇಂದ್ರ ಸರ್ಕಾರದ ಮೇಲೆ ಆರೋಪಿಸುವುದು ತಪ್ಪು’ ಎಂದರು. 

‘ರಾಜ್ಯದ ಆರ್ಥಿಕ ಸ್ಥತಿ ಅಧಃಪತನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಒಬ್ಬರೇ ಕಾರಣ ಅಲ್ಲ, ರಾಹುಲ್ ಗಾಂಧಿ ಕೂಡ ಕಾರಣ’ ಎಂದು ಆರೋಪಿಸಿದರು. 

ADVERTISEMENT

ಮತದಾರರ ಗುರುತಿನ ಚೀಟಿಗೆ ಆಧಾರ್ ಜೋಡಿಸಿ: ಎಚ್‌ಡಿಕೆ 

ಮತಕಳ್ಳತನ ತಡೆಯಲು ಮತದಾರರ ಗುರುತಿನ ಚೀಟಿಗೆ ಆಧಾರ್ ಸಂಖ್ಯೆಯನ್ನು ಜೋಡಿಸುವುದೇ ಪರಿಹಾರ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಚುನಾವಣಾ ಆಯೋಗಕ್ಕೆ ಸಲಹೆ ಮಾಡಿದ್ದಾರೆ.

ಈ ಬಗ್ಗೆ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಮತಕಳ್ಳತನ ಎಂಬುದು ಕೆಲವರ ಕಪಟ ಕಥೆ. ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಿರಿ ಎಂದು ಆಯೋಗಕ್ಕೆ ಸಲಹೆ ಮಾಡಿದ್ದಾರೆ.

ಚುನಾವಣೆ ಆಯೋಗದ ಮೇಲೆ ಸುಳ್ಳಿನ ಸುರಿಮಳೆ ಜನತಂತ್ರಕ್ಕೆ ನೇಣು ಬಿಗಿಯುವ ದೂರ್ತ ಹುನ್ನಾರ. ಅಮೃತಕಾಲದ ಪ್ರಜಾಪ್ರಭುತ್ವಕ್ಕೆ ವಿಷವಿಕ್ಕುವ ಘೋರ ಷಡ್ಯಂತ್ರ್ಯ. ಸಾಂವಿಧಾನಿಕ ಸಂಸ್ಥೆಗಳ ಮೇಲೆ ಅಸತ್ಯದ ಆರೋಪದ ಮೂಲಕ ಅನುಮಾನದ ಪ್ರಯೋಜನ ಪಡೆಯುವ ಕಿಡಿಗೇಡಿ ಪಿತೂರಿ. ಚುನಾವಣೆಯಲ್ಲಿ ಎಸಗಿದ ಪಾಪವನ್ನು ಸುಳ್ಳಿನಿಂದ ಮುಚ್ಚಿಕೊಳ್ಳುವ ಗೊಬೆಲ್ ರಾಜಕಾರಣವಾಗಿದೆ ಎಂದು ಅವರು ಆರೋಪ ಮಾಡಿದ್ದಾರೆ.

ರಾಹುಲ್‌ ಪಲಾಯನ: ಜೋಶಿ ವ್ಯಂಗ್ಯ

‘ಮತಕಳ್ಳತನದ ಆರೋಪಗಳ ಬಗ್ಗೆ ಕಚೇರಿಗೆ ಬಂದು ಸ್ಪಷ್ಟನೆ ನೀಡುವಂತೆ ರಾಹುಲ್‌ ಗಾಂಧಿ ಅವರಿಗೆ ಚುನಾವಣಾ ಆಯೋಗ ಸೂಚಿಸಿತ್ತು. ಆದರೆ, ಅವರು ಕಚೇರಿಗೆ ತೆರಳದೆ ಪಲಾಯನ ಮಾಡಿದ್ದಾರೆ’ ಎಂದು ಕೇಂದ್ರ ಆಹಾರ ಸಚಿವ ಪ್ರಲ್ಹಾದ ಜೋಶಿ ವ್ಯಂಗ್ಯವಾಡಿದರು. 

ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ‘ಸ್ವಾತಂತ್ರ್ಯ ಉದ್ಯಾನದಿಂದ ಚುನಾವಣಾ ಆಯೋಗಕ್ಕೆ ಐದು ನಿಮಿಷಗಳಲ್ಲಿ ಹೋಗಬಹುದು. ಆದರೆ, ಅವರು ಆಯೋಗದ ಕಚೇರಿಗೆ ಹೋಗಿಲ್ಲ. ಇನ್ಯಾರನ್ನೋ ಕಳುಹಿಸಿದ್ದಾರೆ. ನಿಮ್ಮ ಆರೋಪಕ್ಕೆ ಆಧಾರ ಇಲ್ಲ ಎಂಬುದು ಇದರ ಅರ್ಥ’ ಎಂದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.