ADVERTISEMENT

'ಚಿಲುಮೆ' ಸಂಸ್ಥೆ ಮುಖ್ಯಸ್ಥ ರವಿಕುಮಾರ್ ಬಂಧನ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2022, 4:51 IST
Last Updated 21 ನವೆಂಬರ್ 2022, 4:51 IST
ರವಿಕುಮಾರ್
ರವಿಕುಮಾರ್    

ಬೆಂಗಳೂರು: ‘ಚಿಲುಮೆ’ ಸಂಸ್ಥೆಯ ಮುಖ್ಯಸ್ಥ‌ ರವಿಕುಮಾರ್‌ ಅವರನ್ನು ಹಲಸೂರು ಗೇಟ್ ಪೊಲೀಸರು ಭಾನುವಾರ ರಾತ್ರಿ ಬಂಧಿಸಿದ್ದಾರೆ.

ಕಳೆದ ಮೂರು ದಿನಗಳಿಂದ ಇವರು ತಲೆಮರೆಸಿಕೊಂಡಿದ್ದರು. ರವಿಕುಮಾರ್ ಬಂಧನಕ್ಕೆ ವಿಶೇಷ ತಂಡ ರಚಿಸಲಾಗಿತ್ತು. ನಗರದ ಹೊರವಲಯದಲ್ಲಿ ‌ಬಂಧಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ರವಿಕುಮಾರ್ ತಲೆಮರೆಸಿಕೊಂಡಿದ್ದರಿಂದ ಅವರ ಪತ್ನಿ ಐಶ್ವರ್ಯಾ ಅವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು.

ADVERTISEMENT

ಮತದಾರರ ದತ್ತಾಂಶ ಕಳವು ಪ್ರಕರಣದಲ್ಲಿ ರವಿಕುಮಾರ್ ಮುಖ್ಯ ಸೂತ್ರಧಾರಿ ಆಗಿದ್ದಾರೆ. ಸೋಮವಾರ ನ್ಯಾಯಾಲಯಕ್ಕೆ ಹಾಜರು ಪಡಿಸಿ ಹೆಚ್ಚಿನ ವಿಚಾರಣೆಗಾಗಿ ಕಸ್ಟಡಿಗೆ ಪಡೆಯಲಾಗುವುದು ಎಂದು ಮೂಲಗಳು ತಿಳಿಸಿವೆ.

ಸಂಸ್ಥೆಯ ವಿರುದ್ಧ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಬಿಬಿಎಂಪಿ ವಿಶೇಷ ಆಯುಕ್ತರು ದೂರು ನೀಡುತ್ತಿದ್ದಂತೆಯೇ ರವಿಕುಮಾರ್ ತಲೆಮರೆಸಿಕೊಂಡಿದ್ದರು. ಮಲ್ಲೇಶ್ವರದ 17ನೇ ಕ್ರಾಸ್‌ನ ಕಚೇರಿಯಲ್ಲಿದ್ದ ದಾಖಲೆಗಳನ್ನು ಮನೆಗೆ ಸಾಗಿಸಿ ಕಚೇರಿಗೆ ಬೀಗ ಹಾಕಿ ಪರಾರಿಯಾಗಿದ್ದರು.

ಕಳೆದ ಮೂರು ದಿನಗಳಿಂದ ಚಿಕ್ಕಬಳ್ಳಾಪುರ, ತುಮಕೂರಿನಲ್ಲಿ ತಲೆಮರೆಸಿಕೊಂಡಿದ್ದರು. ಪತ್ನಿ ಐಶ್ವರ್ಯಾ ಹಾಗೂ‌ ಪೋಷಕರನ್ನು ಪೊಲೀಸರು ವಶಕ್ಕೆ ಪಡೆದಿದ್ದರಿಂದ ಬೆಂಗಳೂರಿಗೆ ವಾಪಸ್ ಬರುತ್ತಿದ್ದರು. ಆಗ ಪ್ರಕರಣದ ಕಿಂಗ್‌ಪಿನ್ ರವಿಕುಮಾರ್‌ನನ್ನು‌ ಪೊಲೀಸರು ಬಂಧಿಸಲು ಯಶಸ್ವಿಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.