ADVERTISEMENT

ಮತದಾರರಿಗೆ ಮಾಡಿದ ಅಪಮಾನ: ಬಿ.ವೈ.ವಿಜಯೇಂದ್ರ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2025, 15:56 IST
Last Updated 12 ಅಕ್ಟೋಬರ್ 2025, 15:56 IST
<div class="paragraphs"><p>ಬಿ.ವೈ.ವಿಜಯೇಂದ್ರ</p></div>

ಬಿ.ವೈ.ವಿಜಯೇಂದ್ರ

   

ಬೆಂಗಳೂರು: ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಮಾಡಿದ ಅಪಮಾನವು ಮುನಿರತ್ನ ಅವರಿಗೆ ಮಾಡಿದ ಅಪಮಾನವಲ್ಲ. ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದ ಮತದಾರರಿಗೆ ಮಾಡಿದ ಅಪಮಾನ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.

ಸುದ್ದಿಗಾರರ ಜತೆ ಮಾತನಾಡಿದ ಅವರು, ಮುಂಬರುವ ದಿನಗಳಲ್ಲಿ ಡಿ.ಕೆ.ಶಿವಕುಮಾರ್ ಮತ್ತು ಕಾಂಗ್ರೆಸ್‌ ಪಕ್ಷಕ್ಕೆ ಕರಿಟೋಪಿಯ ಬೆಲೆ ಏನೆಂದು ತೋರಿಸುತ್ತೇವೆ ಎಂದು ಕಿಡಿಕಾರಿದರು.

ADVERTISEMENT

ಒಬ್ಬ ಉಪಮುಖ್ಯಮಂತ್ರಿ, ಜವಾಬ್ದಾರಿಯುತ ಸಚಿವರಾಗಿ ಸಾರ್ವಜನಿಕ ಸ್ಥಳದಲ್ಲಿ ಹಾಗೂ ಒಬ್ಬ ಜನಪ್ರತಿನಿಧಿಯ ಬಗ್ಗೆ ಹೇಗೆ ನಡೆದುಕೊಳ್ಳಬೇಕು ಎಂಬ ಕನಿಷ್ಠ ಸೌಜನ್ಯವೂ ಶಿವಕುಮಾರ್ ಅವರಿಗೆ ಇಲ್ಲ ಎಂದು ಆಕ್ಷೇಪಿಸಿದರು.

ಅಧಿಕಾರ ಎಂಬುದು ಶಾಶ್ವತ ಅಲ್ಲ; ಡಿ.ಕೆ.ಶಿವಕುಮಾರ್ ಅವರ ನಡವಳಿಕೆ, ಮಾತಿನ ಧಾಟಿ, ಒಬ್ಬ ಚುನಾಯಿತ ಪ್ರತಿನಿಧಿಗೆ ಮಾಡಿದ ಅಪಮಾನದ ವಿರುದ್ಧ ಸಾರ್ವಜನಿಕರು ಮಾತನಾಡುತ್ತಿದ್ದಾರೆ ಎಂದು ನುಡಿದರು.

ಸಭ್ಯತೆಯ ಪಾಠ ಮರೆತ ಡಿ.ಕೆ

‘ಡಿ.ಕೆ.ಶಿವಕುಮಾರ್ ಅವರು ಸಾರ್ವಜನಿಕವಾಗಿ ಶಾಸಕ ಮುನಿರತ್ನ ಅವರನ್ನು ಸಭ್ಯತೆಯಿಂದ ನಡೆಸಿಕೊಂಡಿಲ್ಲ. ಮುನಿರತ್ನ ಅವರನ್ನು ಕರೆದಿರುವ ರೀತಿಯೂ ಸರಿಯಾಗಿಲ್ಲ. ಅವರು ಸಭ್ಯತೆಯ ಪಾಠವನ್ನು ಮರೆತಿದ್ದಾರೆ’ ಎಂದು ವಿಧಾನ ಪರಿಷತ್‌ನ ಬಿಜೆಪಿ ಸದಸ್ಯ ಸಿ.ಟಿ.ರವಿ ಟೀಕಿಸಿದರು.

ಸರ್ಕಾರದ ಪ್ರಾಯೋಜಿತ  ಯಾವುದೇ ಕಾರ್ಯಕ್ರಮದಲ್ಲಿ ಶಿಷ್ಟಾಚಾರ ಪಾಲಿಸಲೇಬೇಕು. ಅದು ಸಂವಿಧಾನ ಶಾಸಕರಿಗೆ ನೀಡಿರುವ ಅಧಿಕಾರ ಎಂದು ಹೇಳಿದರು.

‘ಕಾಂಗ್ರೆಸ್‌ ಪಕ್ಷದ ಕಾರ್ಯಕ್ರಮವಾಗಿದ್ದರೆ ನಮ್ಮ ಆಕ್ಷೇಪಣೆ ಇಲ್ಲ. ಪಕ್ಷದ ಕಾರ್ಯಕ್ರಮದಲ್ಲಿ ಅಧಿಕಾರಿಗಳು ಭಾಗವಹಿಸುವುದಿಲ್ಲ. ಅಲ್ಲಿ ನಡೆದದ್ದು ಸರ್ಕಾರದ ಕಾರ್ಯಕ್ರಮವೇ ಪಕ್ಷದ ಕಾರ್ಯಕ್ರಮವೇ’ ಎಂದು ರವಿ ಪ್ರಶ್ನಿಸಿದರು.

‘ಸರ್ಕಾರಿ ಕಾರ್ಯಕ್ರಮ ಆಗಿದ್ದರೆ ಅದರಲ್ಲಿ ಭಾಗವಹಿಸುವುದು ಶಾಸಕರಾದ ಮುನಿರತ್ನ ಅವರ ಹಕ್ಕು. ಸರ್ಕಾರದ ಕಾರ್ಯಕ್ರಮಕ್ಕೆ ಆಮಂತ್ರಿಸಿಲ್ಲವಾದರೆ ಅದು ಅಪರಾಧ ಮತ್ತು ಹಕ್ಕುಚ್ಯುತಿ ಆಗುತ್ತದೆ. ಯಾರು ಪ್ರಜಾಪ್ರಭುತ್ವದ ಮೌಲ್ಯವನ್ನು ಅಳವಡಿಸಿಕೊಂಡಿದ್ದಾರೋ ಅವರಿಗೆ ಜನಪ್ರತಿನಿಧಿಯ ಭಾವನೆಗಳು ಆರ್ಥವಾಗುತ್ತದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.