ಬೆಂಗಳೂರು: ವಿಜಯಪುರ ಜಿಲ್ಲೆಯ ತಿಕೋಟಾ ತಾಲ್ಲೂಕಿನ ಹೊನವಾಡ ಗ್ರಾಮದಲ್ಲಿ ವಕ್ಫ್ ಆಸ್ತಿಯೆಂದು ಯಾವ ರೈತರಿಗೂ ನೋಟಿಸ್ ಕೊಟ್ಟಿಲ್ಲ. ಮಹಾರಾಷ್ಟ್ರ ಚುನಾವಣೆ, ರಾಜ್ಯದ ಮೂರು ಕ್ಷೇತ್ರಗಳ ಉಪ ಚುನಾವಣೆಯ ಲಾಭಕ್ಕಾಗಿ ಅಪಪ್ರಚಾರ ನಡೆಸುತ್ತಿದೆ ಎಂದು ಮೂವರು ಸಚಿವರು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ಸುದ್ದಿಗೋಷ್ಠಿಯಲ್ಲಿ ಸೋಮವಾರ ಮಾತನಾಡಿದ ಸಚಿವರಾದ ಕೃಷ್ಣ ಬೈರೇಗೌಡ, ಎಂ.ಬಿ. ಪಾಟೀಲ, ಬಿ.ಜೆಡ್. ಜಮೀರ್ ಅಹಮದ್ ಖಾನ್ ಅವರು, ಬಗರ್‌ಹುಕುಂ ಸೇರಿದಂತೆ ವಿವಿಧ ಕಾಯ್ದೆಗಳ ಅಡಿ ಈಗಾಗಲೇ ಮಂಜೂರಾಗಿರುವ ಯಾವುದೇ ಕೃಷಿ ಭೂಮಿಯನ್ನು ರೈತರಿಂದ ವಾಪಸ್ ಪಡೆಯುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ವಕ್ಫ್ ಮಂಡಳಿಗೆ ದಾನಿಗಳು ನೀಡಿದ 14,201 ಎಕರೆ ವಕ್ಫ್ ಆಸ್ತಿ ಇತ್ತು. ಅದರಲ್ಲಿ ಭೂಸುಧಾರಣೆ ಕಾಯ್ದೆಯಡಿ 11,835 ಎಕರೆ ರೈತರಿಗೆ ಹಂಚಿಕೆಯಾಗಿದೆ ಮತ್ತು ವಿವಿಧ ಯೋಜನೆಗಳಿಗೆ 939 ಎಕರೆ ಭೂಸ್ವಾಧೀನ ಮಾಡಿಕೊಳ್ಳಲಾಗಿದೆ. ಇನ್ನುಳಿದಂತೆ ಕೇವಲ 773 ಎಕರೆ ಮಾತ್ರ ವಕ್ಫ್ ಹೆಸರಿನಲ್ಲಿ ಇದೆ. ರೈತರಿಗೆ ಹಂಚಿಕೆಯಾಗದೆ ಉಳಿದಿರುವ 1,319 ಎಕರೆ ಜಮೀನು ಮರಳಿ ನೀಡಬೇಕು ಎಂದು ವಕ್ಫ್ ಮಂಡಳಿ ಮನವಿ ಮಾಡಿತ್ತು. 124 ಮಂದಿಗೆ ನೋಟಿಸ್ ನೀಡಲಾಗಿತ್ತು. ಆದರೆ, ಅವರೆಲ್ಲರೂ ರೈತರಲ್ಲ. ರೈತರಿಗೆ ಮಂಜೂರಾಗಿರುವ ಯಾವ ಭೂಮಿಯನ್ನೂ ಸರ್ಕಾರ ವಾಪಸ್ ಪಡೆದು, ಮರುಹಂಚಿಕೆ ಮಾಡುವುದಿಲ್ಲ’ ಎಂದರು.
‘ವಿಜಯಪುರ ಜಿಲ್ಲೆಯಲ್ಲಿ ವಕ್ಫ್ ಆಸ್ತಿ ಕುರಿತು ಉಂಟಾಗಿರುವ ಗೊಂದಲ, ವಿವಾದವನ್ನು ಪರಿಹರಿಸುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಟಾಸ್ಕ್ ಫೋರ್ಸ್ ರಚನೆ ಮಾಡಲಾಗುವುದು. ಈ ಟಾಸ್ಕ್ ಫೋರ್ಸ್ 1974 ರ ಗೆಜೆಟ್ ಪೂರ್ವದ ಜಿಲ್ಲೆಯ ಎಲ್ಲ ಆಸ್ತಿಗಳ ದಾಖಲೆಗಳನ್ನು ಪರಿಶೀಲಿಸಿ, ಈಗ ಉಂಟಾಗಿರುವ ಗೊಂದಲ ಬಗೆಹರಿಸಲಿದೆ ’ ಎಂದು ಹೇಳಿದರು.
‘ಇಂಡಿ ತಾಲ್ಲೂಕಿನಲ್ಲಿ ಮಾತ್ರ ಅಲ್ಲಿಯ ತಹಸೀಲ್ದಾರರು ಯಾವುದೇ ನೋಟೀಸ್ ನೀಡದೆ, 41 ಆಸ್ತಿಗಳನ್ನು ಇಂಡೀಕರಣ ಮಾಡಿದ್ದಾರೆ. ಇದು ನಿಯಮಗಳಿಗೆ ವಿರುದ್ಧವಾಗಿದೆ. ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ರೈತರು 1974ಕ್ಕಿಂತ ಮೊದಲಿನ ದಾಖಲೆ ಕೊಟ್ಟರೆ ಅಂತಹ ಆಸ್ತಿಗಳನ್ನು ವಕ್ಫ್ ಅಧಿಸೂಚನೆಯಿಂದ ಕೈಬಿಡಲಾಗುವುದು. ಬಾಧಿತ ರೈತರು ಉಪವಿಭಾಗಾಧಿಕಾರಿಗಳಿಗೆ ಅರ್ಜಿ ಸಲ್ಲಿಸಿದರೆ, ಅವರು ಪರಿಶೀಲಿಸಿ, ಅಂತಿಮ ತೀರ್ಮಾನ ಕೈಗೊಳ್ಳುತ್ತಾರೆ’ ಎಂದು ಕೃಷ್ಣ ಬೈರೇಗೌಡ ಹೇಳಿದರು.
ವಿಜಯಪುರದಲ್ಲಿ 1,345 ಎಕರೆ ವಕ್ಫ್ ಆಸ್ತಿ ಒತ್ತುವರಿಯಾಗಿದ್ದು, ಇದು ಯಾರಿಗೂ ಅಧಿಕೃತವಾಗಿ ಹಂಚಿಕೆ ಆಗಿಲ್ಲ. ಇದರಲ್ಲಿಯೂ ಸುಮಾರು 26 ಎಕರೆ ಜಾಗಕ್ಕೆ ಸಂಬಂಧಿಸಿದಂತೆ ವಿವಾದ ಕೋರ್ಟ್‌ನಲ್ಲಿದೆ. ಅದನ್ನು ಬಿಟ್ಟರೆ 1,319 ಎಕರೆ ವಕ್ಪ್ ಆಸ್ತಿ ಅಕ್ರಮವಾಗಿ ಬೇರೆ ವ್ಯಕ್ತಿ/ಸಂಸ್ಥೆಗಳ ವಶದಲ್ಲಿ ಇದ್ದು, ಅವುಗಳನ್ನು ಪರಿಶೀಲಿಸಲು ಸೂಚಿಸಲಾಗಿದೆ. ಇದು ಬಿಟ್ಟರೆ ನಮಗೆ ಬೇರೆ ಯಾರ ಆಸ್ತಿಯೂ ಬೇಡ ಎಂದು ಅವರು ಸ್ಪಷ್ಟಪಡಿಸಿದರು.
ವಿಜಯೇಂದ್ರ, ಯತ್ನಾಳ ಸಂಘರ್ಷಕ್ಕೆ ಬಳಕೆ
ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಮತ್ತು ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಅವರು ತಮ್ಮ ನಡುವಿನ ಸಂಘರ್ಷಕ್ಕೆ ಪ್ರಕರಣವನ್ನು ಬಳಸಿಕೊಳ್ಳುತ್ತಿದ್ದಾರೆ ಎಂದು ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ದೂರಿದರು.
ಹಿಂದೂಗಳ ಭೂಮಿಯನ್ನು ಮುಸ್ಲಿಮರಿಗೆ ಹಂಚಲಾಗುತ್ತಿದೆ ಎಂದು ಜನರ ನಡುವೆ ಅನಗತ್ಯ ಗೊಂದಲ ಸೃಷ್ಟಿಸುತ್ತಿದ್ದಾರೆ. ಸಮಾಜದ ಮಧ್ಯೆ ಘರ್ಷಣೆ ಹುಟ್ಟುಹಾಕುವ ಕೆಲಸವನ್ನು ಬಿಜೆಪಿ ನಾಯಕರು ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.