ADVERTISEMENT

ವಕ್ಫ್‌: ರಿಜಿಜು ಭೇಟಿಯಾದ ಬಿಜೆಪಿ ಭಿನ್ನರು

​ಪ್ರಜಾವಾಣಿ ವಾರ್ತೆ
Published 7 ಜನವರಿ 2025, 0:11 IST
Last Updated 7 ಜನವರಿ 2025, 0:11 IST
   

ನವದೆಹಲಿ: ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ವಿರೋಧಿ ಬಣದಲ್ಲಿ ಗುರುತಿಸಿಕೊಂಡಿರುವ ಪಕ್ಷದ ನಾಯಕರ ನಿಯೋಗವು ಸೋಮವಾರ ಇಲ್ಲಿ ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರನ್ನು ಭೇಟಿ ಮಾಡಿ ವಕ್ಫ್ ಆಸ್ತಿಗಳ ರಾಷ್ಟ್ರೀಕರಣಕ್ಕೆ ಒತ್ತಾಯಿಸಿತು.

ನಿಯೋಗದಲ್ಲಿ ಮಾಜಿ ಸಚಿವರಾದ ರಮೇಶ್ ಜಾರಕಿಹೊಳಿ, ಅರವಿಂದ ಲಿಂಬಾವಳಿ, ಕುಮಾರ್ ಬಂಗಾರಪ್ಪ, ಮಾಜಿ ಸಂಸದ ಪ್ರತಾಪ್ ಸಿಂಹ ಸೇರಿದಂತೆ ಹಲವು ನಾಯಕರು ಇದ್ದರು.

‘ಕರ್ನಾಟಕ ಸರ್ಕಾರವು ಸಾವಿರಾರು ರೈತರ ಜಮೀನುಗಳನ್ನು ವಕ್ಫ್ ಆಸ್ತಿ ಎಂದು ವರ್ಗೀಕರಿಸಲು ಮುಂದಾಗಿದೆ. ಈ ಸಂಬಂಧ ರೈತರಿಗೆ ನೋಟಿಸ್‌ಗಳನ್ನು ನೀಡಿದೆ. ಇದರಿಂದಾಗಿ, ರೈತರು ಆತಂಕಕ್ಕೆ ಒಳಗಾಗಿದ್ದಾರೆ. ವಕ್ಫ್ ಮೇಲೆ ನಿಷೇಧ ಹೇರಬೇಕು ಮತ್ತು ವಕ್ಫ್ ಆಸ್ತಿಗಳನ್ನು ರಾಷ್ಟ್ರೀಕರಣಗೊಳಿಸಬೇಕು’ ಎಂದು ನಿಯೋಗ ಒತ್ತಾಯಿಸಿತು.

ADVERTISEMENT

ಮೊದಲ ಹಂತದ ವಕ್ಫ್‌ ಹೋರಾಟ ನಡೆಸಿದ್ದ ಈ ನಾಯಕರು ವಕ್ಫ್ (ತಿದ್ದುಪಡಿ) ಮಸೂದೆಯ ಜಂಟಿ ಸಂಸದೀಯ ಸಮಿತಿಯ ಅಧ್ಯಕ್ಷ ಜಗದಾಂಬಿಕಾ ಪಾಲ್ ಅವರನ್ನು ಇತ್ತೀಚೆಗೆ ಭೇಟಿ ಮಾಡಿ ದಾಖಲೆಗಳನ್ನು ಸಲ್ಲಿಸಿದ್ದರು. ಎರಡನೇ ಹಂತದ ಹೋರಾಟ ನಡೆಸಲು ಭಿನ್ನಮತೀಯ ನಾಯಕ ಬಸನಗೌಡ ಪಾಟೀಲ ಯತ್ನಾಳ ಅವರು ವರಿಷ್ಠರ ಒಪ್ಪಿಗೆ ಪಡೆದಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.