ADVERTISEMENT

ಐಪಿಎಲ್‌ ಪಂದ್ಯಕ್ಕೆ ಸಂಸ್ಕರಿಸಿದ ನೀರು: ವರದಿ ಕೇಳಿದ ಎನ್‌ಜಿಟಿ

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2024, 15:26 IST
Last Updated 4 ಏಪ್ರಿಲ್ 2024, 15:26 IST
<div class="paragraphs"><p>ಐಪಿಎಲ್‌ ಪಂದ್ಯಕ್ಕೆ ಮುನ್ನ ಸಿಬ್ಬಂದಿಯು ಕ್ರೀಡಾಂಗಣಕ್ಕೆ ಪೈಪ್‌ ಮೂಲಕ ನೀರು ಉಣಿಸಿದರು </p></div>

ಐಪಿಎಲ್‌ ಪಂದ್ಯಕ್ಕೆ ಮುನ್ನ ಸಿಬ್ಬಂದಿಯು ಕ್ರೀಡಾಂಗಣಕ್ಕೆ ಪೈಪ್‌ ಮೂಲಕ ನೀರು ಉಣಿಸಿದರು

   

ಪ್ರಜಾವಾಣಿ ಚಿತ್ರ

ನವದೆಹಲಿ: ಬೆಂಗಳೂರಿನಲ್ಲಿ ನೀರಿನ ಬಿಕ್ಕಟ್ಟಿನ ನಡುವೆಯೇ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿನ ಐಪಿಎಲ್‌ ಪಂದ್ಯಗಳಿಗೆ ಸಂಸ್ಕರಿಸಿದ ನೀರನ್ನು ಪೂರೈಕೆ ಮಾಡಿರುವುದನ್ನು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ಪ್ರಧಾನ ಪೀಠ ಗಂಭೀರವಾಗಿ ಪರಿಗಣಿಸಿದೆ. ಕ್ರೀಡಾಂಗಣದಲ್ಲಿ ನೀರಿನ ಬಳಕೆಯ ಪ್ರಸ್ತುತ ಸ್ಥಿತಿಯ ಬಗ್ಗೆ ವರದಿ ಸಲ್ಲಿಸುವಂತೆ ಕರ್ನಾಟಕ ಸರ್ಕಾರ ಹಾಗೂ ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆಗೆ (ಕೆಎಸ್‌ಸಿಎ) ತಾಕೀತು ಮಾಡಿದೆ. 

ADVERTISEMENT

ಮಾಧ್ಯಮ ವರದಿಗಳ ಆಧಾರದಲ್ಲಿ ಪೀಠದ ಮುಖ್ಯಸ್ಥ ನ್ಯಾಯಮೂರ್ತಿ ಪ್ರಕಾಶ್‌ ಶ್ರೀವಾಸ್ತವ ಹಾಗೂ ತಜ್ಞ ಸದಸ್ಯ ಎ.ಸೆಂಥೊಲ್‌ ವೇಲ್ ಅವರನ್ನು ಒಳಗೊಂಡ ಪೀಠವು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದೆ.

ರಾಜ್ಯ ಕ್ರಿಕೆಟ್‌ ಸಂಸ್ಥೆಯ ಮನವಿಯ ಆಧಾರದಲ್ಲಿ ಕಬ್ಬನ್‌ ಉದ್ಯಾನದ ತ್ಯಾಜ್ಯ ನೀರು ಸಂಸ್ಕರಣ ಘಟಕದಿಂದ ಸಂಸ್ಕರಿಸಿದ ನೀರನ್ನು ಕ್ರೀಡಾಂಗಣಕ್ಕೆ ಸರಬರಾಜು ಮಾಡಲು ಜಲಮಂಡಳಿ ಅನುಮತಿ ನೀಡಿದೆ. ಈ ಕ್ರೀಡಾಂಗಣದಲ್ಲಿ ಮೂರು ಐಪಿಎಲ್‌ ಪಂದ್ಯಗಳು ನಿಗದಿಯಾಗಿವೆ. ಪ್ರತಿ ಪಂದ್ಯದ ಸಂದರ್ಭದಲ್ಲಿ ಕ್ರೀಡಾಂಗಣಕ್ಕೆ ನೀರುಣಿಸಲು 75 ಸಾವಿರ ಲೀಟರ್ ಸಂಸ್ಕರಿಸಿದ ನೀರನ್ನು ಬಳಕೆ ಮಾಡಲಾಗುತ್ತಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿತ್ತು. 

ಬೆಂಗಳೂರಿನಲ್ಲಿ ಕುಡಿಯುವ ನೀರಿನ ಬೇಡಿಕೆ ಪ್ರಮಾಣ ದಿನಕ್ಕೆ 260 ಕೋಟಿ ಲೀಟರ್‌ಗೆ ಏರಿದೆ. ನಿತ್ಯ 50 ಕೋಟಿ ಲೀಟರ್‌ನ ಕೊರತೆ ಇದೆ. ನಗರದಲ್ಲಿನ 14 ಸಾವಿರ ಕೊಳವೆಬಾವಿಗಳ ಪೈಕಿ 6,900 ಬತ್ತಿವೆ. ಕಾರು ತೊಳೆಯಲು, ತೋಟಗಾರಿಕೆ ಹಾಗೂ ನಿರ್ಮಾಣ ಚಟುವಟಿಕೆಗಳಿಗೆ ನೀರು ಬಳಸುವುದನ್ನು ಜಲಮಂಡಳಿ ನಿರ್ಬಂಧಿಸಿದೆ. ಅದರ ನಡುವೆಯೂ, ಕ್ರಿಕೆಟ್‌ ಪಂದ್ಯಕ್ಕೆ ದೊಡ್ಡ ಪ್ರಮಾಣದ ನೀರನ್ನು ಬಳಸಲಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿತ್ತು. 

ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಜಲಮಂಡಳಿ, ಬೆಂಗಳೂರು ನಗರ ಜಿಲ್ಲಾಧಿಕಾರಿ ಹಾಗೂ ಕ್ರಿಕೆಟ್‌ ಸಂಸ್ಥೆಗೆ ಪ್ರಧಾನ ‍ಪೀಠ ನೋಟಿಸ್‌ ಜಾರಿ ಮಾಡಿದೆ. 

ಕ್ರೀಡಾಂಗಣಕ್ಕೆ ಸರಬರಾಜು ಮಾಡುವ ನೀರಿನ ಗುಣಮಟ್ಟ ಮತ್ತು ಕ್ರೀಡಾಂಗಣದಲ್ಲಿ ಬಳಸಿದ ಅಂತರ್ಜಲದ ಪ್ರಮಾಣದ ಬಗ್ಗೆ ವರದಿ ನೀಡುವಂತೆ ಜಲಮಂಡಳಿಗೆ ಸೂಚಿಸಿದೆ. ಮುಂದಿನ ವಿಚಾರಣೆಗಾಗಿ ಪ್ರಕರಣವನ್ನು ಮೇ 2ಕ್ಕೆ ಮುಂದೂಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.