ADVERTISEMENT

ಲಾಕ್‌ಡೌನ್‌ ಮಧ್ಯೆಯೂ ಕಲ್ಲಂಗಡಿ ಸಿಹಿ!

ಖಲೀಲ ಅಹ್ಮದ್‌ ಶೇಖ್‌
Published 12 ಏಪ್ರಿಲ್ 2020, 19:45 IST
Last Updated 12 ಏಪ್ರಿಲ್ 2020, 19:45 IST
ಕಲ್ಲಂಗಡಿ ಹಣ್ಣು ರಾಶಿ ಬಿದ್ದಿರುವುದು
ಕಲ್ಲಂಗಡಿ ಹಣ್ಣು ರಾಶಿ ಬಿದ್ದಿರುವುದು   

ಶಿರಹಟ್ಟಿ: ಕೊರೊನಾ ಲಾಕ್‌ಡೌನ್‌ ನಡುವೆಯೂ ತೋಟಗಾರಿಕೆ ಇಲಾಖೆಯಿಂದ ಸೂಕ್ತ ಮಾರ್ಗದರ್ಶನ ಪಡೆದುಕೊಂಡ ರೈತರೊಬ್ಬರು ತಾವು ಬೆಳೆದ ಕಲ್ಲಂಗಡಿ ಹಣ್ಣಿಗೆ ಸ್ಥಳೀಯವಾಗಿಯೇ ಮಾರುಕಟ್ಟೆ ಕಂಡುಕೊಂಡಿದ್ದಾರೆ.

ತಾಲ್ಲೂಕಿನ ತೆಗ್ಗಿನ ಭಾವನೂರ ಗ್ರಾಮದ ವೆಂಕನಗೌಡ ಪಾಟೀಲ ಅವರು 1.20 ಎಕರೆ ಪ್ರದೇಶದಲ್ಲಿ ‘ಕ್ಲಾಸ್‌ ಮೆಲೋಡಿ’ ತಳಿಯ ಕಲ್ಲಂಗಡಿ ಬೆಳೆದಿದ್ದರು. ಲಾಕ್‌ಡೌನ್‌ ಅವಧಿಯಲ್ಲಿ ಬೆಳೆಗೆ ಮಾರುಕಟ್ಟೆ ಕಂಡುಕೊಳ್ಳಲು ತೋಟಗಾರಿಕೆ ಇಲಾಖೆಯನ್ನು ಸಂಪರ್ಕಿಸಿದರು. ಇಲಾಖೆ ಸಹಾಯಕ ನಿರ್ದೇಶಕ ಸುರೇಶ ಕುಂಬಾರ ಸಲಹೆ ಮೇರೆಗೆ, ಲಕ್ಷ್ಮೇಶ್ವರ ಮತ್ತು ಶಿರಹಟ್ಟಿ ತಾಲ್ಲೂಕಿನಲ್ಲಿ ಚಿಲ್ಲರೆ ವ್ಯಾಪಾರಿಗಳು, ಗ್ರಾಹಕರಿಗೆ ನೇರವಾಗಿ ಹಣ್ಣು ಮಾರಾಟ ಮಾಡಿದರು.

ಚಿಲ್ಲರೆ ವ್ಯಾಪಾರಿಗಳಿಗೆ ಕೆ.ಜಿ.ಗೆ₹10ರಂತೆ ಇದುವರೆಗೆ ಒಟ್ಟು 14.50 ಟನ್‌ ಹಣ್ಣು ಮಾರಾಟ ಮಾಡಿದ್ದಾರೆ. ಇದರಿಂದ ₹1.28 ಲಕ್ಷ ಆದಾಯ ಬಂದಿದೆ. ಒಟ್ಟು ₹62,500 ಖರ್ಚಾಗಿತ್ತು. ಪರ್ಯಾಯ ದಾರಿ ಬಗ್ಗೆ ಚಿಂತಿಸದಿದ್ದರೆ ಹೊಲದಲ್ಲೇ ಹಣ್ಣು ಕೊಳೆಯುತ್ತಿತ್ತು. ಈಗ ಹಾಕಿದ ಬಂಡವಾಳವೂ ಬಂದಿದೆ. ಸುಮಾರು ₹50 ಸಾವಿರಲಾಭವೂ ದೊರೆತಿದೆ’ ಎಂದು ವೆಂಕನಗೌಡ ಪಾಟೀಲ ಖುಷಿ ವ್ಯಕ್ತಪಡಿಸಿದರು.

ADVERTISEMENT

‘ಹನಿ ನೀರಾವರಿ ಅಳವಡಿಸಿಕೊಳ್ಳಲು ಅವರಿಗೆ ತೋಟಗಾರಿಕೆ ಇಲಾಖೆ ₹1.20 ಲಕ್ಷ ಸಹಾಯಧನ ನೀಡಿತ್ತು. ಸಂಕಷ್ಟದ ಸಮಯದಲ್ಲಿ ಅದೇ ತೋಟಗಾರಿಕೆ ಇಲಾಖೆಯೇ, ಇವರಿಗೆ ಮಾರುಕಟ್ಟೆ ಕಂಡುಕೊಳ್ಳಲೂ ನೆರವಿಗೆ ಬಂದಿದೆ.

‘ತೋಟಗಾರಿಕೆ ಬೆಳೆಗಳಿಗೆ ಮಾರುಕಟ್ಟೆ ಸಮಸ್ಯೆಯಾದರೆ ಇಲಾಖೆಯನ್ನು ಸಂಪರ್ಕಿಸಿ ಸಲಹೆ ಪಡೆದುಕೊಳ್ಳಬಹುದು. ಹಣ್ಣುಗಳಿಗೆ ಸ್ಥಳೀಯವಾಗಿಯೇ ಮಾರುಕಟ್ಟೆ ಕಂಡುಕೊಳ್ಳಬಹುದು. ಇದರಿಂದ ಬೆಳೆ ನಷ್ಟ ತಪ್ಪುತ್ತದೆ. ಆದಾಯವೂ ಲಭಿಸುತ್ತದೆ’ ಎನ್ನುತ್ತಾರೆ ತಾಲ್ಲೂಕಿನ ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಸುರೇಶ ಕುಂಬಾರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.