ADVERTISEMENT

ನೀರು ನೀಡುವ ‘ಸೋಷಿಯಲ್ ಕ್ಲಬ್‌’

​ಪ್ರಜಾವಾಣಿ ವಾರ್ತೆ
Published 20 ಮೇ 2019, 4:58 IST
Last Updated 20 ಮೇ 2019, 4:58 IST
 ಶಿಗ್ಗಾವಿ ಸೋಷಿಯಲ್ ಕ್ಲಬ್ ನಲ್ಲಿ ನೀರು ನೀಡುತ್ತಿರುವುದು
 ಶಿಗ್ಗಾವಿ ಸೋಷಿಯಲ್ ಕ್ಲಬ್ ನಲ್ಲಿ ನೀರು ನೀಡುತ್ತಿರುವುದು   

ಶಿಗ್ಗಾವಿ: ಪಟ್ಟಣದ ಬಸವ ನಗರದಲ್ಲಿನ ‘ಶಿಗ್ಗಾವಿ ಸೋಷಿಯಲ್ ಕ್ಲಬ್‌’ ಸದಸ್ಯರು ಸುತ್ತಲಿನ 50 ಕುಟುಂಬಗಳಿಗೆ ಕಳೆದ 12 ವರ್ಷಗಳಿಂದ ಉಚಿತವಾಗಿ ನೀರು ನೀಡುತ್ತಿದ್ದಾರೆ.

ಪಟ್ಟಣದಲ್ಲಿನ 11 ನಿವೃತ್ತ ನೌಕರರು ಸೇರಿಕೊಂಡು 2000ನೇ ಇಸವಿಯಲ್ಲಿ ಕ್ಲಬ್ ಸ್ಥಾಪಿಸಿದ್ದಾರೆ. 2007ರಿಂದಲೂ ಕೊಳವೆಬಾವಿಯಿಂದ ಸ್ಥಳೀಯರಿಗೆ ಉಚಿತವಾಗಿ ನೀರು ನೀಡುತ್ತಿದ್ದಾರೆ.

‘ಬೇಸಿಗೆಯಲ್ಲಿ ಪಟ್ಟಣದಲ್ಲಿ ನೀರಿನ ಸಮಸ್ಯೆ ತೀವ್ರಗೊಳ್ಳುತ್ತಿತ್ತು. ಜನತೆ ಕುಡಿಯುವ ನೀರಿಗಾಗಿ ಪರದಾಡುತ್ತಿದ್ದರು.‌ ನಾವೆಲ್ಲ ಸೇರಿ ಕೊಳವೆಬಾವಿಯ ನೀರನ್ನು ಸಾರ್ವಜನಿಕರಿಗಾಗಿ ಹಂಚಲು ನಿರ್ಧರಿಸಿದೆವು’ ಎಂದು ಕ್ಲಬ್‌ ಅಧ್ಯಕ್ಷ ವೀರಣ್ಣ ಬಡ್ಡಿ ತಿಳಿಸಿದರು.

ADVERTISEMENT

‘12 ವರ್ಷಗಳಿಂದಲೂ ವಿದ್ಯುತ್ ಹಾಗೂ ದುರಸ್ತಿ ವೆಚ್ಚವನ್ನು ನಾವೇ ಭರಿಸುತ್ತಿದ್ದೇವೆ. ಯಾರೇ ಬಂದರೂ ಪ್ರತಿನಿತ್ಯವೂ ಬೆಳಿಗ್ಗೆ ಮತ್ತು ಸಂಜೆ ನೀರು ನೀಡುತ್ತಿದ್ದೇವೆ’ ಎಂದು ಹಿರಿಯ ಸದಸ್ಯ ಕಾಳಿಂಗಪ್ಪ ಮಲ್ಲಪ್ಪ ಕೋನಪ್ಪನವರ ಹೇಳಿದರು.

‘ಈ ಹಿಂದೆ ಬೇಸಿಗೆಯಲ್ಲಿ ನಾವೆಲ್ಲ ಕೊಡಪಾನ ನೀರಿಗಾಗಿ ದೂರದ ಕೆರೆ, ಬಾವಿ ಹಾಗೂ ಹೊಂಡಗಳಿಗೆ ಹೋಗಬೇಕಾಗಿತ್ತು. ಕ್ಲಬ್‌ ಸದಸ್ಯರ ನೆರವಿನಿಂದಾಗಿ ನಮ್ಮ ಸಮಸ್ಯೆ ನೀಗಿದೆ’ ಎಂದು ಇಲ್ಲಿನ ನಿವಾಸಿ ಬಸಮ್ಮ ಮತ್ತಿತರರು ಕೃತಜ್ಞತೆ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.