ADVERTISEMENT

ಒದ್ದೆ ಬಟ್ಟೆಯಲ್ಲಿ ಮೈ ಒರೆಸಿಕೊಳ್ಳುವ ಜನ

ಓಬಣ್ಣನಹಳ್ಳಿ: ಮತದಾನ ಬಹಿಷ್ಕರಿಸಿದರೂ ಸಿಕ್ಕಿದ್ದು ಐದು ಬಿಂದಿಗೆ ನೀರು

ಜಿ.ಬಿ.ನಾಗರಾಜ್
Published 17 ಮೇ 2019, 20:34 IST
Last Updated 17 ಮೇ 2019, 20:34 IST
ಚಿತ್ರದುರ್ಗ ತಾಲ್ಲೂಕಿನ ಓಬಣ್ಣನಹಳ್ಳಿಯಲ್ಲಿ ಬಿರು ಬಿಸಿಲಿನಲ್ಲಿ ನೀರಿಗೆ ಕಾಯುತ್ತ ಕುಳಿತ ಮಹಿಳೆಯರು    ಪ್ರಜಾವಾಣಿ ಚಿತ್ರ/ ಭವಾನಿ ಮಂಜು
ಚಿತ್ರದುರ್ಗ ತಾಲ್ಲೂಕಿನ ಓಬಣ್ಣನಹಳ್ಳಿಯಲ್ಲಿ ಬಿರು ಬಿಸಿಲಿನಲ್ಲಿ ನೀರಿಗೆ ಕಾಯುತ್ತ ಕುಳಿತ ಮಹಿಳೆಯರು    ಪ್ರಜಾವಾಣಿ ಚಿತ್ರ/ ಭವಾನಿ ಮಂಜು   

ಚಿತ್ರದುರ್ಗ: ತಾಲ್ಲೂಕಿನ ಓಬಣ್ಣನಹಳ್ಳಿಯ ಜನ ಸ್ನಾನ ಮಾಡಿ ಎರಡು ವಾರಗಳೇ ಕಳೆದಿವೆ. ಏಕೆಂದರೆ, ಇವರಿಗೆ ಸ್ನಾನ ಮಾಡಲು ನೀರು ಸಿಗುತ್ತಿಲ್ಲ. ಹೀಗಾಗಿ ಬೆವರಿನ ವಾಸನೆಯಿಂದ ಪಾರಾಗಲು ಒದ್ದೆ ಬಟ್ಟೆಯಲ್ಲಿ ಮೈ ಒರೆಸಿಕೊಂಡು ದಿನಗಳನ್ನು ದೂಡುತ್ತಿದ್ದಾರೆ.

ಜಿಲ್ಲಾ ಕೇಂದ್ರದಿಂದ 18 ಕಿಲೊಮೀಟರ್‌ ದೂರದಲ್ಲಿರುವ ಈ ಗ್ರಾಮವು ಲೋಕಸಭಾ ಚುನಾವಣೆಯಲ್ಲಿ ಮತದಾನ ಬಹಿಷ್ಕರಿಸಿ ಗಮನ ಸೆಳೆದಿತ್ತು. ಕುಡಿಯುವ ನೀರು ಒದಗಿಸದೇ ಮತ ಹಾಕುವುದಿಲ್ಲ ಎಂದು ಹಟ ಹಿಡಿದ ಗ್ರಾಮಸ್ಥರು ಹಕ್ಕು ಚಲಾವಣೆ ಮಾಡಲಿಲ್ಲ. ಆದರೂ ಸಿಗುತ್ತಿರುವುದು ದಿನಕ್ಕೆ ಐದು ಬಿಂದಿಗಳು ನೀರು ಮಾತ್ರ.

‘ಮೈ ತೊಳೆದುಕೊಳ್ಳದೆ ಹದಿನೆಂಟು ದಿನಗಳೇ ಆಗಿವೆ. ಐದು ಕೊಡ ನೀರಲ್ಲಿ ಏನು ಮಾಡಲು ಆಗುತ್ತೆ ಹೇಳಿ? ಒದ್ದೆ ಬಟ್ಟೆಯಲ್ಲಿ ಮೈ ಒರೆಸಿಕೊಳ್ತೀವಿ’ ಎಂದು ಚನ್ನಮ್ಮ ನೋವಿನಿಂದಲೇ ಹೇಳಿದರು.

ADVERTISEMENT

ಈ ಪುಟ್ಟ ಹಳ್ಳಿಯ ಕೆರೆ ತುಂಬದೇ ದಶಕವೇ ಕಳೆದಿದೆ. ಕೊಳವೆಬಾವಿ ಬಿಟ್ಟರೆ ಬೇರೆ ಯಾವ ನೀರಿನ ಮೂಲವೂ ಇಲ್ಲಿಲ್ಲ. ಡಿಸೆಂಬರ್‌ ನಂತರ ಗ್ರಾಮದ ಒಂದೊಂದೇ ಕೊಳವೆಬಾವಿಗಳು ಬತ್ತಿದವು. ಗ್ರಾಮದ 80ಕ್ಕೂ ಹೆಚ್ಚು ಕೊಳವೆಬಾವಿಗಳ ಪೈಕಿ ನೀರು ಬರುತ್ತಿರುವುದು ಒಂದರಲ್ಲಿ ಮಾತ್ರ. ‘ಗ್ರಾಮ ಪಂಚಾಯಿತಿಯ ಕೊಳವೆಬಾವಿ ಬತ್ತಿದ ಬಳಿಕ ತಾಪತ್ರಯ ಶುರುವಾಗಿದೆ. ಜಿಲ್ಲಾಡಳಿತ ಕೊರೆಸಿದ ಯಾವ ಕೊಳವೆಬಾವಿಯಲ್ಲಿಯೂ ನೀರು ಬರಲಿಲ್ಲ’ ಎಂದು ಸಮಸ್ಯೆಯನ್ನು ಬಿಡಿಸಿಟ್ಟರು ಯಜಮಾನ ಸಿದ್ಧಪ್ಪ.

ಸಾರ್ವಜನಿಕ ನೀರು ಸರಬರಾಜು ವ್ಯವಸ್ಥೆ ಸ್ಥಗಿತಗೊಂಡ ಬಳಿಕ ಅಡಿಕೆ ತೋಟಗಳ ಕೊಳವೆಬಾವಿಗೆ ಜನ ಮುಗಿಬಿದ್ದಿದ್ದರು. ಒಂದೂವರೆ ಕಿಲೊಮೀಟರ್‌ ದೂರದ ತೋಟದ ಬೋರ್‌ವೆಲ್‌ಗಳಿಂದ ಹಗಲು–ರಾತ್ರಿ ನೀರು ತರುತ್ತಿದ್ದರು. ಅವುಗಳೂ ಬತ್ತಿದ ಬಳಿಕ ಜನ ದಿಕ್ಕು ತೋಚದಂತಾಗಿದ್ದಾರೆ.

ಪಕ್ಕದ ಉಪ್ಪನಾಯಕನಹಳ್ಳಿಯ ರೈತರೊಬ್ಬರ ಕೊಳವೆಬಾವಿಯನ್ನು ಜಿಲ್ಲಾಡಳಿತ ಬಾಡಿಗೆ ಪಡೆದು ನೀರು ಒದಗಿಸುತ್ತಿದೆ. ಈ ಕೃಷಿಕನಿಗೂ ತೋಟ ಉಳಿಸಿಕೊಳ್ಳುವ ಧಾವಂತ. ನಿತ್ಯ ಎರಡು ಗಂಟೆ ಮಾತ್ರ ನೀರು ಕೊಡುತ್ತಾರೆ. ಗ್ರಾಮದ ನೂರಕ್ಕೂ ಹೆಚ್ಚು ಮನೆಗಳಿಗೆ ಈ ನೀರು ಸಾಕಾಗುತ್ತಿಲ್ಲ.

‘ಬಿಸಿಲಿನ ಝಳ ಜಾಸ್ತಿ ಆಗಿದೆ. ಸೆಕೆಗೆ ಮೈ ಬೆವರುತ್ತದೆ. ಮಕ್ಕಳಿಗೆ ನಾಲ್ಕಾರು ದಿನಕ್ಕೊಮ್ಮೆ ಸ್ನಾನ ಮಾಡಿಸ್ತೀವಿ. ವಾರಕ್ಕೊಮ್ಮೆ ಬಟ್ಟೆ ತೊಳಿತೀವಿ’ ಎನ್ನುತ್ತ ಒಂದೇ ಬಿಂದಿಗೆ ನೀರಿನಲ್ಲಿ ಬಟ್ಟೆ ತೊಳೆಯಲು ಮುಂದಾದರು ತಿಮ್ಮಕ್ಕ.

‘‍ಪರಸ್ಥಳ’ಕ್ಕೆ ವಲಸೆ

ಭೀಕರ ಬರ ಪರಿಸ್ಥಿತಿಯಿಂದ ಕಂಗಾಲಾದ ಗ್ರಾಮದ 70ಕ್ಕೂ ಹೆಚ್ಚು ಕುಟುಂಬಗಳು ಚಿಕ್ಕಮಗಳೂರು, ಶಿವಮೊಗ್ಗ, ಹಾಸನ, ಬೆಂಗಳೂರು ಕಡೆಗೆ ಗುಳೆ ಹೋಗಿವೆ. ಇಂತಹ ಮನೆಗಳಲ್ಲಿ ಮಕ್ಕಳು, ವೃದ್ಧರು ಹಾಗೂ ಅಂಗವಿಕಲರು ಮಾತ್ರ ಕಾಣಸಿಗುತ್ತಾರೆ.

ಗುಳೆ ಹೋಗುವುದಕ್ಕೆ ಈ ಗ್ರಾಮಸ್ಥರು ಇಟ್ಟ ಹೆಸರು ‘ಪರಸ್ಥಳ’. ಬರ ಪರಿಸ್ಥಿತಿ ತಲೆದೋರಿದಾಗಲೆಲ್ಲ ಕೆಲ ಕುಟುಂಬಗಳು ಪರಸ್ಥಳಕ್ಕೆ ಹೋಗುತ್ತವೆ. ಹೀಗೆ ಗುಳೆ ಹೋದ ಕುಟುಂಬಗಳ ಸಂಖ್ಯೆ ಈ ಬಾರಿಯೇ ಹೆಚ್ಚು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.