ADVERTISEMENT

8 ಸಾವಿರ ಜನರಿಗೆ ನೀರು ಕೊಡುವ ರೈತ!

ಹಾಲಕೆರೆ ಗ್ರಾಮ; ಜನರ ಪಾಲಿಗೆ ಭಗೀರಥನಾದ ಅಬ್ದುಲ್‌ ರೆಹಮಾನ್‌ ಬಳಬಟ್ಟಿ

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 19 ಮೇ 2019, 19:43 IST
Last Updated 19 ಮೇ 2019, 19:43 IST
ಹಾಲಕೆರೆ ಗ್ರಾಮಕ್ಕೆ ಉಚಿತವಾಗಿ ನೀರು ಕೊಡುವ ರೈತ ಅಬ್ದುಲ್‌ ರೆಹಮಾನ್ ಇಮಾಮಸಾಬ್ ಬಳಬಟ್ಟಿ
ಹಾಲಕೆರೆ ಗ್ರಾಮಕ್ಕೆ ಉಚಿತವಾಗಿ ನೀರು ಕೊಡುವ ರೈತ ಅಬ್ದುಲ್‌ ರೆಹಮಾನ್ ಇಮಾಮಸಾಬ್ ಬಳಬಟ್ಟಿ   

ನರೇಗಲ್ (ಗದಗ): ನರೇಗಲ್‌ ಪಟ್ಟಣದ ರೈತ ಅಬ್ದುಲ್‌ ರೆಹಮಾನ್ ಇಮಾಮಸಾಬ್ ಬಳಬಟ್ಟಿ ಸಮೀಪದ ಹಾಲಕೆರೆ ಗ್ರಾಮಸ್ಥರ ಪಾಲಿಗೆ ಆಧುನಿಕ ಭಗೀರಥ. ಇವರಿಂದಾಗಿ 8 ಸಾವಿರ ಜನಸಂಖ್ಯೆಯ ಈ ಗ್ರಾಮ ನೀರಿನ ಬವಣೆಯಿಂದ ಪಾರಾಗಿದೆ.

ಬಳಬಟ್ಟಿ ಅವರ ಜಮೀನು ನರೇಗಲ್‌–ಹಾಲಕರೆ ಗ್ರಾಮದ ಮಧ್ಯದಲ್ಲಿದೆ. ಜಮೀನಿನ ಕೊಳವೆಬಾವಿಯಲ್ಲಿ 3 ಇಂಚು ನೀರಿದೆ. ಈ ನೀರನ್ನು ಹಗಲು ಹಾಲಕೆರೆ ಗ್ರಾಮಸ್ಥರಿಗೆ ಕುಡಿಯಲು ಪೂರೈಸುವ ಅವರು, ರಾತ್ರಿ ವೇಳೆ ತಮ್ಮ ಬೆಳೆಗಳಿಗೆ ಹಾಯಿಸಿಕೊಳ್ಳುತ್ತಾರೆ.

2008ರಲ್ಲಿ ಗ್ರಾಮದಲ್ಲಿ ಕುಡಿಯುವ ನೀರಿಗೆ ತೀವ್ರ ಅಭಾವ ಉಂಟಾಗಿತ್ತು. ಗ್ರಾಮ ಪಂಚಾಯ್ತಿ ಸಿಬ್ಬಂದಿ, ಗ್ರಾಮದ ಹಿರಿಯರೊಂದಿಗೆ ಬಳಬಟ್ಟಿ ಅವರನ್ನು ಸಂಪರ್ಕಿಸಿದರು. ತಮ್ಮ ಬೆಳೆಯ ಬಗ್ಗೆ ಚಿಂತಿಸದೆ ನೀರು ಕೊಡಲು ಒಪ್ಪಿಕೊಂಡರು. ಪಂಚಾಯ್ತಿಯವರು ಇವರ ಜಮೀನಿನಿಂದ ಹಾಲಕೆರೆವರೆಗೆ ಪೈಪ್‌ಲೈನ್‌ ಅಳವಡಿಸಿದರು. ಅಲ್ಲಿಂದೀಚೆಗೆ 10 ವರ್ಷಗಳಿಂದ ಅವರು ಉಚಿತವಾಗಿ ನೀರು ಪೂರೈಕೆ ಮಾಡುತ್ತಿದ್ದಾರೆ.

ADVERTISEMENT

‘ದೇವರು ಕೊಟ್ಟ ನೀರನ್ನು ಜನರಿಗೆ ಕೊಡುವುದರಲ್ಲಿ ನಮ್ಮದೇನೂ ಔದಾರ್ಯವಿಲ್ಲ. ಇದರಲ್ಲಿ ಹಣ ಮಾಡಿಕೊಳ್ಳುವ ಆಸೆಯೂ ಇಲ್ಲ’ ಎನ್ನುತ್ತಾರೆ ಬಳಬಟ್ಟಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.