ADVERTISEMENT

ಮಹಾರಾಷ್ಟ್ರದಲ್ಲಿ ಭಾರಿ ಮಳೆ ಪರಿಣಾಮ: ತುಂಗಭದ್ರೆಗೆ 3 ಅಡಿ; ಆಲಮಟ್ಟಿಗೆ 6 ಟಿಎಂಸಿ

ಕೃಷ್ಣಾ ನದಿಗೆ ಹೆಚ್ಚಿನ ನೀರು l ಕರಾವಳಿ ಜಿಲ್ಲೆಗಳಲ್ಲೂ ಉತ್ತಮ ಮಳೆ

​ಪ್ರಜಾವಾಣಿ ವಾರ್ತೆ
Published 10 ಜುಲೈ 2020, 19:32 IST
Last Updated 10 ಜುಲೈ 2020, 19:32 IST
ಹೊಸಪೇಟೆ ಸಮೀಪದ ತುಂಗಭದ್ರಾ ಜಲಾಶಯಕ್ಕೆ ಅಪಾರ ನೀರು ಹರಿದು ಬರುತ್ತಿದ್ದು, ಶುಕ್ರವಾರ ಅಲೆಗಳ ಅಬ್ಬರ ಹೆಚ್ಚಾಗಿತ್ತು ---ಪ್ರಜಾವಾಣಿ ಚಿತ್ರ/ಕೆ.ಎಂ. ಕೊಟ್ರೇಶ್‌
ಹೊಸಪೇಟೆ ಸಮೀಪದ ತುಂಗಭದ್ರಾ ಜಲಾಶಯಕ್ಕೆ ಅಪಾರ ನೀರು ಹರಿದು ಬರುತ್ತಿದ್ದು, ಶುಕ್ರವಾರ ಅಲೆಗಳ ಅಬ್ಬರ ಹೆಚ್ಚಾಗಿತ್ತು ---ಪ್ರಜಾವಾಣಿ ಚಿತ್ರ/ಕೆ.ಎಂ. ಕೊಟ್ರೇಶ್‌   
""

ಬೆಂಗಳೂರು: ರಾಜ್ಯದಲ್ಲಿ ಶುಕ್ರವಾರ ಮಳೆಯ ಪ್ರಮಾಣ ಸ್ವಲ್ಪಮಟ್ಟಿಗೆ ತಗ್ಗಿದೆ. ಆದರೆ, ಮಹಾರಾಷ್ಟ್ರ ಭಾಗದಲ್ಲಿ ಮಳೆ ಆಗುತ್ತಿರುವ ಕಾರಣ ಕೃಷ್ಣಾ ನದಿಯಲ್ಲಿ ನೀರಿನ ಹರಿವು ಹೆಚ್ಚಿದೆ. ಬೆಳಗಾವಿ ಜಿಲ್ಲೆಯಲ್ಲಿ ಏಳು ಬ್ಯಾರೇಜ್‍ಗಳು ಈಗಲೂ ಜಲಾವೃತವಾಗಿವೆ.

ಆಲಮಟ್ಟಿ ಜಲಾಶಯಕ್ಕೆ ಶುಕ್ರವಾರ ಒಂದೇ ದಿನ 6.23 ಟಿ.ಎಂಸಿ ನೀರು ಹರಿದುಬಂದಿದೆ. ಕಲ್ಯಾಣ ಕರ್ನಾಟಕದ ಜಿಲ್ಲೆಗಳಲ್ಲಿ ಮಳೆ ಬಿರುಸು ಕಡಿಮೆ ಆಗಿದ್ದರೆ, ಶಿವಮೊಗ್ಗ, ಚಿಕ್ಕಮಗಳೂರಿನಲ್ಲಿ ವ್ಯಾಪಕ ಮಳೆ ಆಗುತ್ತಿದೆ.

ಮಹಾರಾಷ್ಟ್ರದಲ್ಲಿ ಮಳೆ ಹೆಚ್ಚಾಗಿರುವುದರಿಂದಬೆಳಗಾವಿ ಜಿಲ್ಲೆಯಲ್ಲಿ ಕೃಷ್ಣಾಗೆ ಹರಿದು ಬರುತ್ತಿರುವ ನೀರಿನ ಪ್ರಮಾಣದಲ್ಲಿ ಏರಿಕೆಯಾಗಿ, ಚಿಕ್ಕೋಡಿ ಹಾಗೂ ನಿಪ್ಪಾಣಿ ತಾಲ್ಲೂಕಿನಲ್ಲಿ 7 ಬ್ರಿಡ್ಜ್‌ ಕಮ್‌ ಬ್ಯಾರೇಜ್‌ಗಳು ಜಲಾವೃತವಾಗಿವೆ. ದೂಧ್‌ಗಂಗಾ ನದಿಯಿಂದ 17,952 ಕ್ಯುಸೆಕ್‌ ಹಾಗೂ ರಾಜಾಪುರದಿಂದ 53,500 ಕ್ಯುಸೆಕ್‌ ನೀರು ಸೇರಿ 71,452 ಕ್ಯುಸೆಕ್‌ ನೀರು ಕೃಷ್ಣಾ ನದಿಗೆ ಸೇರುತ್ತಿದೆ.

ADVERTISEMENT

ಬಳ್ಳಾರಿ ಜಿಲ್ಲೆಯ ಹೊಸಪೇಟೆಯಲ್ಲಿರುವ ತುಂಗಭದ್ರಾ ಜಲಾನಯನ ಪ್ರದೇಶದಲ್ಲಿ ಸತತವಾಗಿ ಮಳೆಯಾಗುತ್ತಿದ್ದು, ಜಲಾಶಯಕ್ಕೆ 24 ಗಂಟೆಗಳಲ್ಲಿ ಸುಮಾರು 3 ಅಡಿ ನೀರು ಹರಿದು ಬಂದಿದೆ. ಶುಕ್ರವಾರ ಒಳಹರಿವಿನ ಪ್ರಮಾಣ 26,007 ಕ್ಯುಸೆಕ್‌ ಇತ್ತು.

‘ಶಿವಮೊಗ್ಗ, ಚಿಕ್ಕಮಗಳೂರು, ದಾವಣಗೆರೆ ವ್ಯಾಪ್ತಿಯಲ್ಲಿ ವ್ಯಾಪಕವಾಗಿ ಮಳೆಯಾಗುತ್ತಿದೆ. ಶಿವಮೊಗ್ಗದ ತುಂಗಾ ಜಲಾಶಯದಿಂದಲೂ ನದಿಗೆ ನೀರು ಹರಿಸಲಾಗುತ್ತಿದೆ. ಇನ್ನೂ ಮೂರ್ನಾಲ್ಕು ದಿನ ಭಾರಿ ಮಳೆಯಾಗುವ ಸಾಧ್ಯತೆ ಇದೆ’ ಎಂದು ತುಂಗಭದ್ರಾ ಜಲಾಶಯ ಆಡಳಿತ ಮಂಡಳಿ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ಹೊಸಪೇಟೆ ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಶುಕ್ರವಾರ ಬೆಳಗಿನ ಜಾವ ಕೂಡ ಕೆಲ ಸಮಯ ವರ್ಷಧಾರೆಯಾಗಿದೆ. ಧಾರವಾಡ, ಬಾಗಲಕೋಟೆ, ವಿಜಯಪುರದಲ್ಲಿ ಮಳೆಯಾಗಿದೆ.

ಉತ್ತರ ಕನ್ನಡ ಜಿಲ್ಲೆಯಲ್ಲಿ ಶುಕ್ರವಾರ ಮಳೆಯ ಪ್ರಮಾಣ ಕಡಿಮೆಯಾಗಿತ್ತು.ಕಾರವಾರ, ಶಿರಸಿ, ಭಟ್ಕಳದಲ್ಲಿ ಆಗಾಗ್ಗೆ ಜಿಟಿಜಿಟಿ ಮಳೆಯಾಯಿತು. ಮುಂಡಗೋಡ ಮತ್ತು ಯಲ್ಲಾಪುರ ನಡುವೆ ಶಿಡ್ಲಗುಂಡಿಯಲ್ಲಿ ತಾತ್ಕಾಲಿಕ ಸೇತುವೆಯ ಮೇಲೆ ನೀರು ಹರಿಯುತ್ತಿದೆ.

ಕಲಬುರ್ಗಿ, ಯಾದಗಿರಿ ಮತ್ತು ಬೀದರ್ ಜಿಲ್ಲೆಯ ಕೆಲವಡೆ ಶುಕ್ರವಾರ ಮಳೆಯಾಯಿತು. ಕಲಬುರ್ಗಿ ನಗರ ಮತ್ತು ಜಿಲ್ಲೆಯ ಚಿತ್ತಾಪುರ ಮತ್ತು ಕಾಳಗಿ ತಾಲ್ಲೂಕಿನಲ್ಲಿ ಉತ್ತಮ ಮಳೆಯಾಯಿತು. ಬೀದರ್ ನಗರ ಮತ್ತು ಕಮಲಾಪುರದಲ್ಲಿ ಸಾಧಾರಣ ಮಳೆಯಾಯಿತು. ಯಾದಗಿರಿ ನಗರದಲ್ಲಿ ಮತ್ತು ಜಿಲ್ಲೆಯ ಶಹಾಪುರ, ವಡಗೇರಾ ಮತ್ತು ಯರಗೋಳದಲ್ಲಿ ಮಳೆಯಾಯಿತು.

ಶಿವಮೊಗ್ಗ ಜಿಲ್ಲೆಯಲ್ಲಿ ಸಾಗರ, ಹೊಸನಗರ, ಶಿಕಾರಿಪುರ, ಸೊರಬ, ತೀರ್ಥಹಳ್ಳಿ ಸಾಧಾರಣ ಮಳೆಯಾಗಿದ್ದು, ಕಳೆದೆರಡು ದಿನಗಳಿಂದ ಜಿಲ್ಲೆಯಲ್ಲಿ ಮಳೆ ಪ್ರಮಾಣ ತಗ್ಗಿದೆ.

ದೇವರಮರಿಕುಂಟೆಯಲ್ಲಿ 33 ಮಿ.ಮೀ. ಮಳೆ: ಚಿತ್ರದುರ್ಗ ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿದ್ದು, ಚಳ್ಳಕೆರೆ ತಾಲ್ಲೂಕಿನ ದೇವರಮರಿಕುಂಟೆಯಲ್ಲಿ 33 ಮಿ.ಮೀ. ಮಳೆಯಾಗಿರುವುದು ದಾಖಲಾಗಿದೆ. ಮಳೆಯ ನಿರೀಕ್ಷೆಯಲ್ಲಿದ್ದ ರೈತರು ಹರ್ಷಗೊಂಡಿದ್ದಾರೆ. ಇಡೀ ದಿನ ಮೋಡ ಮುಸುಕಿದ ವಾತಾವರಣವಿದ್ದು, ವರ್ಷಧಾರೆ ಆಗಾಗ ಭೂಮಿಗೆ ಇಳಿಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.